ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಇತ್ತೀಚಿನ ದಿನಗಳಲ್ಲಿ ಪೋಷಕರು ಶಿಕ್ಷಣದ ಮಹತ್ವ ಚೆನ್ನಾಗಿ ಅರಿತಿದ್ದಾರೆ. ಹೀಗಾಗಿ, ಎಷ್ಟೇ ಕಷ್ಟವಾದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಶಿಕ್ಷಿತರಾಗಿ ಮಾಡಿ ಉತ್ತಮ ಹುದ್ದೆಗಳನ್ನು ಏರಲು ಶ್ರಮಿಸುತ್ತಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.ನಗರದ ಹೆಬ್ಬಾಳಿನ ನವಭಾರತ್ ನಿರ್ಮಾಣ್ ಟ್ರಸ್ಟ್ ವತಿಯಿಂದ ವಿಜಯನಗರ ರೈಲ್ವೆ ಲೇಔಟ್ ರಂಗಮಂಟಪದಲ್ಲಿ ಆಯೋಜಿಸಿದ್ದ 2023- 24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಇಂದಿನ ಪೋಷಕರು ಆಸ್ತಿ ಮಾಡುವ ಉದ್ದೇಶ ಬಿಟ್ಟು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನೇ ಆಸ್ತಿಯನ್ನಾಗಿ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳುತ್ತಿದ್ದಾರೆ. ಬಡವನಾದರೂ ಕಷ್ಟಪಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಶ್ರಮಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಅವರು ಶ್ಲಾಘಿಸಿದರು.ಹಿಂದಿನ ಕಾಲದಲ್ಲಿ ಶಿಕ್ಷಣ ಕೈಗೆಟುಕುವಂತಿತ್ತು. ಆದರೀಗ ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೊಂದು ಕಾಲೇಜಿನಲ್ಲಿ ಒಂದೊಂದು ದರ ಇದೆ. ಆದರೆ ಎಷ್ಟು ವ್ಯಯಿಸಿದರೂ ಸರಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕೆಂಬುದು ಪೋಷಕರ ಹಂಬಲವಾಗಿದೆ. ವಿದ್ಯಾರ್ಥಿಗಳು ತಮ್ಮ ಪೋಷಕರ ಶ್ರಮವನ್ನು ಅರಿತು ಉತ್ತಮ ಶಿಕ್ಷಣ ಪಡೆದು ದೊಡ್ಡ ದೊಡ್ಡ ಹುದ್ದೆಗಳಿಗೆ ಏರಬೇಕು. ನಮ್ಮ ಸಮಾಜ, ಬಡ ಜನರಿಗೆ ನೆರವಾಗುವ ಕಾರ್ಯಗಳನ್ನು ಮಾಡಬೇಕು ಎಂದು ಅವರು ಕರೆ ನೀಡಿದರು.
ಶಿಕ್ಷಕರನ್ನೇ ಮೀರಿಸುವ ಸಾಮರ್ಥ್ಯವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಇಂದಿನ ಮಕ್ಕಳು ಸಾಕಷ್ಟು ಪ್ರತಿಭೆ ಹೊಂದಿದ್ದಾರೆ. ಅವರಿಗೆ ಶಿಕ್ಷಣ ನೀಡುವ ಶಿಕ್ಷಕರ ಕೆಲಸ ಸುಲಭವಲ್ಲ. ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋಧನೆ ಮಾಡುವುದು ಸವಾಲೇ ಸರಿ. ನೂರಕ್ಕೆ 99 ಅಂಕ ಪಡೆದರೂ ಆ ಮಕ್ಕಳಿಗೆ ನೆಮ್ಮದಿ ಇಲ್ಲ. ನೂರಕ್ಕೆ ನೂರು ಅಂಕ ಪಡೆಯಬೇಕೆಂಬ ಹಂಬಲ ಹೊಂದಿರುತ್ತಾರೆ. ಪರೀಕ್ಷೆ ಸಮಯದಲ್ಲಿ ಶಿಕ್ಷಕರನ್ನೇ ಮೀರಿಸುವ ಸಾಮರ್ಥ್ಯ ಹೊಂದಿರುತ್ತಾರೆ ಎಂದರು.
ಪೋಷಕರು ಕೂಡ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ಮಾಡಬೇಕು. ಮಕ್ಕಳಿಗೆ ಯೋಗ್ಯ ಪೋಷಕರಾಗಬೇಕು. ನಮ್ಮ ನಡೆ- ನುಡಿಯನ್ನು ಅವರು ಗಮನಿಸುತ್ತಿರುತ್ತಾರೆ. ಹೀಗಾಗಿ, ಅವರ ಮುಂದೆ ಯೋಗ್ಯರಾಗಿರಬೇಕು ಎಂದು ಅವರು ಕಿವಿಮಾತು ಹೇಳಿದರು.ಸತ್ಕಾರ ಮೂಲಕ ಸಾಧನೆಗೆ ಪ್ರೇರಣೆ
ನವಭಾರತ್ ನಿರ್ಮಾಣ್ ಟ್ರಸ್ಟ್ ಅಧ್ಯಕ್ಷ ಕೆ.ವಿ. ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಕಷ್ಟು ವರ್ಷಗಳಿಗೆ ನಮ್ಮ ಟ್ರಸ್ಟ್ ಹಲವಾರು ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಾ ಬರುತ್ತಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಹಲವಾರು ಮಂದಿಗೆ ನೆರವಾಗಲಾಗಿದೆ. ಶ್ರೇಷ್ಠ, ಉತ್ಕೃಷ್ಟ ನವಭಾರತ ನಿರ್ಮಾಣ ನಿಟ್ಟಿನಲ್ಲಿ ದುಡಿಯಲಾಗುತ್ತಿದೆ. ಜೊತೆಗೆ ನವಭಾರತ ನಿರ್ಮಾಣದ ಸೃಷ್ಟಿಕರ್ತರಾದ ವಿದ್ಯಾರ್ಥಿಗಳಿಗೆ ಪೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಗಳನ್ನು ಆಯೋಜಿಸಲಾಗುತ್ತಿದೆ. ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಸತ್ಕರಿಸಲಾಗುತ್ತಿದೆ. ಇದರಿಂದ ಅವರು ಮುಂದಿನ ದಿನಗಳನ್ನು ಮತ್ತಷ್ಟು ಸಾಧನೆ ನೀಡುವ ಪ್ರೇರಣೆ ನೀಡಿದಂತಾಗುತ್ತದೆ ಎಂದರು.ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 200 ಹೆಚ್ಚು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗಾಯಕ ನಿತಿನ್ ರಾಜಾರಾಮ ಶಾಸ್ತ್ರಿ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.
ವಾಗ್ಮಿ ಸುಧಾ ಬರಗೂರು, ನಗರ ಪಾಲಿಕೆ ಮಾಜಿ ಸದಸ್ಯ ಶಿವಣ್ಣ, ಅನಿಕೇತನ ಟ್ರಸ್ಟ್ ಅಧ್ಯಕ್ಷರಾದ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ನವಭಾರತ್ ನಿರ್ಮಾಣ್ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.