ಬಾಗಲಕೋಟೆಯ ಮೂವರು ಶಾಸಕರಿಗೆ ಒಲಿದ ನಿಗಮ-ಮಂಡಳಿ

| Published : Jan 27 2024, 01:17 AM IST

ಸಾರಾಂಶ

ಬಾಗಲಕೋಟೆ; ಲೋಕಸಭೆಯ ಚುನಾವಣೆಗೆ ಮುನ್ನ ರಾಜ್ಯ ಸರ್ಕಾರ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಮಾಡಿದ್ದು, ಜಿಲ್ಲೆಯ ಮೂವರು ಶಾಸಕರಿಗೆ ಅವಕಾಶ ನೀಡುವ ಮೂಲಕ ಸರ್ಕಾರ ಜಾಣ ನಡೆ ಪ್ರದರ್ಶಿಸಿದೆ. ಪಕ್ಷ ನಿಷ್ಠೆ, ಹಿರಿತನ ಹಾಗೂ ಸಂಘಟನಾತ್ಮಕವಾಗಿ ಬರುವ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗುವ ದೃಷ್ಟಿಯಲ್ಲಿ ಬಾಗಲಕೋಟೆ ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಾಗಲಕೋಟೆ ಶಾಸಕ, ಮಾಜಿ ಸಚಿವ ಎಚ್.ವೈ ಮೇಟಿ, ಬೀಳಗಿ ಶಾಸಕ ಜೆ.ಟಿ.ಪಾಟೀಲರಿಗೆ ಹಟ್ಟಿ ಚಿನ್ನದ ಗಣಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಲೋಕಸಭೆಯ ಚುನಾವಣೆಗೆ ಮುನ್ನ ರಾಜ್ಯ ಸರ್ಕಾರ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಮಾಡಿದ್ದು, ಜಿಲ್ಲೆಯ ಮೂವರು ಶಾಸಕರಿಗೆ ಅವಕಾಶ ನೀಡುವ ಮೂಲಕ ಸರ್ಕಾರ ಜಾಣ ನಡೆ ಪ್ರದರ್ಶಿಸಿದೆ.

ಪಕ್ಷ ನಿಷ್ಠೆ, ಹಿರಿತನ ಹಾಗೂ ಸಂಘಟನಾತ್ಮಕವಾಗಿ ಬರುವ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗುವ ದೃಷ್ಟಿಯಲ್ಲಿ ಜಿಲ್ಲೆಯ ಮೂವರು ಹಿರಿಯ ಶಾಸಕ ಎಚ್.ವೈ. ಮೇಟಿ, ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ ಅವರಿಗೆ ವಿವಿಧ ನಿಗಮಗಳ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಜೊತೆಗೆ ಸಂಪುಟ ಸಚಿವರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನೀಡಲು ಸೂಚಿಸಿದ್ದರಿಂದ ಜಿಲ್ಲೆಯಲ್ಲಿ ಶಿಷ್ಟಾಚಾರದ ನೆಪದಲ್ಲಿ ಕೆಂಪುಗೂಟದ ಕಾರುಗಳ ಸದ್ದು ಮತ್ತೆ ಕಾಣಬಹುದಾಗಿದೆ.

ಯಾರ್‍ಯಾರಿಗೆ ಯಾವ ನಿಗಮ?: ಬಾಗಲಕೋಟೆ ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಾಗಲಕೋಟೆ ಶಾಸಕ, ಮಾಜಿ ಸಚಿವ ಎಚ್.ವೈ ಮೇಟಿ, ಬೀಳಗಿ ಶಾಸಕ ಜೆ.ಟಿ.ಪಾಟೀಲರಿಗೆ ಹಟ್ಟಿ ಚಿನ್ನದ ಗಣಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಮೂವರು ಶಾಸಕರು ಹಿಂದುಳಿದ ಹಾಗೂ ಮೇಲ್ವರ್ಗಕ್ಕೆ ಸೇರಿದ್ದು, ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ಸಚಿವರಾಗುವ ಅವಕಾಶವಿಲ್ಲ: ಮುಂದೆ ನಡೆಯಬಹುದಾದ ಅಥವಾ ಸರ್ಕಾರ ಎರಡೂ ವರ್ಷ ಪೂರೈಸಿದ ಬಳಿಕ ಸಂಪುಟ ಪುನಾರಚನೆ ನಡೆದರೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿ ಸಮಾಧಾನ ಮಾಡುವ ಪ್ರಯತ್ನವನ್ನು ಮುಖ್ಯ ಮಂತ್ರಿಗಳಾದಿಯಾಗಿ ಮಾಡಿದ್ದಾರೆಂಬ ಮಾತು ಸಹ ಪಕ್ಷದ ವಲಯದಲ್ಲಿ ಕೇಳಿ ಬಂದಿದೆ. ಮೊದಲ ಹಂತದಲ್ಲಿ ನಡೆದ ಈ ನೇಮಕ ಪಟ್ಟಿಯಲ್ಲಿ ಎಲ್ಲ 34 ಅಧ್ಯಕ್ಷರು ಸಹ ಶಾಸಕರಾಗಿರುವುದು ವಿಶೇಷವಾಗಿದೆ.

ಅಸಮಧಾನವೂ ಇದೆ: ಬೀಳಗಿ ಹಾಗೂ ಹುನಗುಂದ ಶಾಸಕರಿಗೆ ಅಧ್ಯಕ್ಷ ಸ್ಥಾನಗಳು ರಾಜ್ಯವ್ಯಾಪ್ತಿಗೆ ಒಳಪಡಲಿದ್ದು, ಅದರಲ್ಲೂ ಕ್ರೀಡಾ ಪ್ರಾಧಿಕಾರ, ಹಟ್ಟಿ ಚಿನ್ನದ ಗಣಿ ನಿಗಮ, ಸರ್ಕಾರದ ಮಟ್ಟದಲ್ಲಿ ನಡೆಯುವ ಕಾರ್ಯಚಟುವಟಿಕೆಗಳಾಗಿವೆ. ಆದರೆ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಾಗಲಕೋಟೆಯ ಶಾಸಕ ಎಚ್.ವೈ. ಮೇಟಿ ನೇಮಕವಾಗಿರುವುದು ಸ್ಥಳೀಯ ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರಲ್ಲಿ ಅಸಮಾಧಾನ ಕಾಣುತ್ತಿದೆ.

ಚುನಾವಣೆ ಸಂದರ್ಭದಲ್ಲಿ ಕೆಲವು ನಾಯಕರಿಗೆ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡುವ ಭರವಸೆ ಮತ್ತು ಇನ್ನು ಕೆಲವು ಸಂದರ್ಭದಲ್ಲಿ ಕಾರ್ಯಕರ್ತರಿಗೆ ಈ ಅವಕಾಶ ನೀಡುವ ಮಾತುಗಳು ಕೇಳಿ ಬಂದಿದ್ದವು. ಆದರೆ, ಈಗ ಏಕಾಏಕಿ ಸ್ಥಳೀಯ ಶಾಸಕರೆ ಪ್ರಾಧಿಕಾರದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಹೀಗಾಗಿ ಕಾರ್ಯಕರ್ತರಿಗೆ ಅವಕಾಶ ಏಕಿಲ್ಲ ಎಂಬ ಪ್ರಶ್ನೆಗಳನ್ನು ಕೆಲವರು ಕೇಳುತ್ತಿದ್ದಾರೆ.

ಕಾರ್ಯಕರ್ತರ ಅಸಮಧಾನದ ನಡುವೆಯೂ ಮತ್ತೊಂದು ಮಾತು ಸಹ ಕೇಳಿ ಬರುತ್ತಿದ್ದು, ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಹಲವು ನಾಯಕರು ಪೈಪೋಟಿ ನಡೆಸುತ್ತಿದ್ದು, ಒಬ್ಬರಿಗ ಅವಕಾಶ ನೀಡಿದರೆ ಮತ್ತೊಬ್ಬರು ಅಸಮಧಾನಗೊಳ್ಳಲಿದ್ದಾರೆ. ಅದನ್ನು ತಪ್ಪಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವ ಕಾರಣಕ್ಕೆ ಸ್ಥಳೀಯ ಶಾಸಕರು ಪ್ರಾಧಿಕಾರದ ಜವಾಬ್ದಾರಿ ಹೊತ್ತಿದ್ದಾರೆ ಎಂಬ ಸಮರ್ಥನೆಯೂ ಸಹ ಕೇಳಿ ಬರುತ್ತಿದೆ. ಒಟ್ಟಾರೆ ಸರ್ಕಾರ ಜಿಲ್ಲೆಯ ಮೂವರು ಶಾಸಕರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿದ್ದು, ಬರಲಿರುವ ದಿನಗಳಲ್ಲಿ ಇವರಿಂದ ಪಕ್ಷಕ್ಕೆ ಆಗುವ ಲಾಭ ನಷ್ಟಗಳ ಮೇಲೆ ಪಕ್ಷದ ಬೆಳವಣಿಗೆ ನಿಂತಿದೆ ಎಂದರೆ ತಪ್ಪಾಗಲಾರದು.