ಬೈರೇಗೌಡರದು ಬಹುಮುಖ ಪ್ರತಿಭೆ: ದಾಮೋದರ ಶೆಟ್ಟಿ

| Published : Jan 27 2024, 01:17 AM IST

ಸಾರಾಂಶ

ಜನಪದ ಸಾಹಿತ್ಯಕ್ಕೆ ರಾಮನಗರ ಮತ್ತು ಚನ್ನಪಟ್ಟಣದ ಕೊಡುಗೆ ಅಪಾರ. ಇಲ್ಲಿನ ಪರಂಪರೆ ಮುಂದುವರಿಸಿಕೊಂಡು ಬಂದಿರುವವರಲ್ಲಿ ಬೈರೇಗೌಡ ಪ್ರಮುಖರು. ಅವರ ಈ ಮೂರು ಕೃತಿಗಳ ಶೀರ್ಷಿಕೆಯೇ ಅವರಲ್ಲಿರುವ ವಿಶೇಷತೆಯನ್ನು ಹೇಳುತ್ತದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಿಲ್ಲಾ ಕಸಾಪ ಸಹಯೋಗದಲ್ಲಿ ಸಾಹಿತಿ ಬೈರೇಗೌಡರ 3 ಕೃತಿ ಬಿಡುಗಡೆ ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಡಾ. ಎಂ. ಬೈರೇಗೌಡರ ಸಾಹಿತ್ಯದಲ್ಲಿ ಬದುಕಿನ ತತ್ವ ಎದ್ದು ಕಾಣುತ್ತದೆ. ಕಥೆ, ನಾಟಕ, ಜನಪದ ಸಾಹಿತ್ಯ, ಹಾಡುಗಾರಿಕೆ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಅವರದ್ದು ಬಹುಮುಖಿ ಪ್ರತಿಭೆ ಎಂದು ಸಾಹಿತಿ ಡಾ.ನಾ. ದಾಮೋದರ ಶೆಟ್ಟಿ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಜಿಲ್ಲಾ ಕಸಾಪ ಸಹಯೋಗದಲ್ಲಿ ಸಾಹಿತಿ ಡಾ.ಎಂ.ಬೈರೇಗೌಡರ ನವಿಲು ಮೊಟ್ಟೆ, ವೇಷದ ಹುಲಿ ಹಾಗೂ ಸರಸತಿಯಾಗಲೊಲ್ಲೆ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಹೊಸತನಕ್ಕಾಗಿ ಸದಾ ತುಡಿಯುವ ಬೈರೇಗೌಡರು, ಭಿನ್ನ ಆಯಾಮದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಜನಪದ ಸಾಹಿತ್ಯಕ್ಕೆ ರಾಮನಗರ ಮತ್ತು ಚನ್ನಪಟ್ಟಣದ ಕೊಡುಗೆ ಅಪಾರ. ಇಲ್ಲಿನ ಪರಂಪರೆ ಮುಂದುವರಿಸಿಕೊಂಡು ಬಂದಿರುವವರಲ್ಲಿ ಬೈರೇಗೌಡ ಪ್ರಮುಖರು. ಅವರ ಈ ಮೂರು ಕೃತಿಗಳ ಶೀರ್ಷಿಕೆಯೇ ಅವರಲ್ಲಿರುವ ವಿಶೇಷತೆಯನ್ನು ಹೇಳುತ್ತದೆ. ಇದಕ್ಕೆ ಅವರ ತಂದೆಯ ಪ್ರಭಾವ, ಬಾಲ್ಯದ ಅನುಭವ ಮತ್ತು ಬೆಳೆದ ಪರಿಸರವೂ ಕಾರಣ ಎಂದರು.

ನವಿಲು ಮೊಟ್ಟೆ ಪುಸ್ತಕ ಕುರಿತು ಮಾತನಾಡಿದ ಕತೆಗಾರ ಸ್ವಾಮಿ ಪೊನ್ನಾಚಿ, ಜನಪದೀಯ ನೆಲೆಯ ಹಾಡ್ಗತೆಯನ್ನು ಬೈರೇಗೌಡರು ಛಂದಸ್ಸಿಗೆ ಅಳವಡಿಸಿಕೊಂಡು ಕೃತಿಗಿಳಿಸಿದ್ದಾರೆ. ಅವರು ಇರುಳಿಗರ ಬದುಕಿನ ಪರಿಸರವನ್ನು ಮನ ಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಪುಸ್ತಕ ಇರುಳಿಗರ ಏಳು ಅಣ್ಣ-ತಮ್ಮಂದಿರ ಕತೆಯಷ್ಟೇ ಅಲ್ಲದೆ ಇರುಳಿಗರ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ತಿಳಿಸುತ್ತದೆ. ನಾಲ್ಕೈದು ಕಡೆ ಅವರು ಬಳಸಿರುವ ಕರಿ ನೀರು ಪದ ಅರ್ಕಾವತಿ ನದಿ ಕಲುಷಿತವನ್ನು ಧ್ವನಿಸುತ್ತದೆ. ಗ್ರಾಮೀಣ ಜನರ ಬದುಕನ್ನು ಹದವಾಗಿ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಪುಸ್ತಕವನ್ನು ಒಂದೇ ಉಸಿರಿನಲ್ಲಿ ಓದಿ ಮುಗಿಸಬೇಕೆಂಬ ತುಡಿತ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವೇಷದ ಹುಲಿ ಕುರಿತು ಮಾತನಾಡಿದ ಯುವ ಸಾಹಿತಿ ಅರುಣ್ ಕವಣಾಪುರ, ವಾಸ್ತವ, ಪುರಾಣ ಹಾಗೂ ಇತಿಹಾಸ ಕೃತಿಯಲ್ಲಿ ಮೇಳೈಸಿದೆ. ಐತಿಹ್ಯ ಕಥೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ಹೇಳುವಾಗ ಜನಪದದ ಸೊಗಡು ಇಣುಕಿದೆ. ಯಾರು ವೇಷದ ಹುಲಿ ಎಂಬ ಕುತೂಹಲದೊಂದಿಗೆ ಪುಸ್ತಕ ಓದುತ್ತಾ ಹೋದಂತೆ, ಕಡೆಗೆ ನಮ್ಮೊಳಗಿರುವ ಕ್ರೌರ್ಯವೇ ನಿಜವಾದ ಹುಲಿ ಎಂಬುದು ಮನದಟ್ಟಾಗುತ್ತದೆ ಎಂದರು.

ಸರಸತಿಯಾಗಲೊಲ್ಲೆ ಪುಸ್ತಕ ಕುರಿತು ಮಾತನಾಡಿದ ಅಧ್ಯಾಪಕ ಪ್ರಸನ್ನ ನಂಜಾಪುರ, ಅಕ್ಷರ ಚಳವಳಿ ಕೇಂದ್ರಿತ ಪುಸ್ತಕವಿದು. ಫುಲೆ ದಂಪತಿ ಚಿಂತನೆಗಳು ಆರಾಧನೆ ರೂಪವಾಗಿರದೆ ಆಚರಣೆ ರೂಪದಲ್ಲಿರಬೇಕೆಂಬುದನ್ನು ಶೀರ್ಷಿಕೆ ಧ್ವನಿಸುತ್ತದೆ. ಸತಿ ಪದ ಹೆಣ್ಣಿನ ಮೇಲಿನ ದೌರ್ಜನ್ಯಗಳ ವಿರುದ್ಧ ದನಿ ಎತ್ತುವ ರೂಪಕವಾಗಿ ಬಳಕೆಯಾಗಿದೆ. ಶೂದ್ರತ್ವ ಮೀರುವಿಕೆಯನ್ನು ನಾಟಕ ನವಿರಾಗಿ ಹೇಳುತ್ತದೆ ಎಂದು ಹೇಳಿದರು.

ವಿದ್ರೋಹಕ್ಕೆ ಅಕ್ಷರ ಬಳಸಬಾರದು:

ಸಾಹಿತಿ ಡಾ.ಎಂ.ಬೈರೇಗೌಡ ಮಾತನಾಡಿ, ಅಕ್ಷರವನ್ನು ದ್ರೋಹಕ್ಕೆ ಬಳಸದೇ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದಕ್ಕಾಗಿ ಬಳಸಬೇಕು. ಆ ತತ್ವದ ಮೇಲೆಯೇ ನಾನು ನಾಟಕ, ಬರವಣಿಗೆ, ಸಂಶೋಧನೆಯ ಕೆಲಸವನ್ನು ಬದುಕಿನುದ್ದಕ್ಕೂ ಮಾಡಿಕೊಂಡು ಬಂದಿದ್ದೇನೆ. ತಂದೆಯ ಆದರ್ಶ ಮತ್ತು ಬಾಲ್ಯದ ಅನುಭವಗಳ ಜತೆಗೆ, ಬದುಕಿನ ಹಾದಿಯಲ್ಲಿ ಜೊತೆಯಾದವರೆಲ್ಲರೂ ನನ್ನ ಕೆಲಸಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪ್ರೇರಣೆಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ, ಪ್ರಾಚಾರ್ಯ ಡಾ. ವಿ. ವೆಂಕಟೇಶ್, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ರಾಮನಗರ ತಾಲೂಕು ಅಧ್ಯಕ್ಷ ಬಿ.ಟಿ.ದಿನೇಶ್ ಬಿಳಗುಂಬ, ಕನಕಪುರದ ಶಿವ್ನಳ್ಳಿ ಶಿವಲಿಂಗಯ್ಯ, ಚನ್ನಪಟ್ಟಣದ ಶ್ರೀನಿವಾಸ್ ರಾಂಪುರ ಇದ್ದರು. ಗೋವಿಂದಹಳ್ಳಿ ಶಿವಣ್ಣ ಮತ್ತು ಬೇವೂರು ರಾಮಯ್ಯ ಕುವೆಂಪು ಗೀತೆಗಳನ್ನು ಪ್ರಸ್ತುತಪಡಿಸಿದರು.