ಬಗರ್‌ಹುಕುಂ ಸಾಗುಳಿದಾರರು, ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ: ಸಚಿವ ಮಧು ಬಂಗಾರಪ್ಪ

| Published : Aug 16 2024, 01:01 AM IST / Updated: Aug 16 2024, 11:23 AM IST

ಬಗರ್‌ಹುಕುಂ ಸಾಗುಳಿದಾರರು, ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ: ಸಚಿವ ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮುಳುಗಡೆ ಸಂತ್ರಸ್ಥರು ಮತ್ತು ಬಗರ್‌ಹುಕುಂ ಸಾಗುವಳಿದಾರರಿಗೆ ಶಾಶ್ವತ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.  

 ಶಿವಮೊಗ್ಗ :  ಮುಳುಗಡೆ ಸಂತ್ರಸ್ಥರು ಹಾಗೂ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಜಿಲ್ಲೆ ಮತ್ತು ಸರ್ಕಾರದ ಹಂತದಲ್ಲಿ ಸಭೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ಡಿ.ಎ.ಆರ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂತ್ರಸ್ತರ ಪರವಾಗಿ ಸುಪ್ರಿಂ ಕೋರ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸಲು ಹಿರಿಯ ವಕೀಲರೊಬ್ಬರನ್ನು ಈಗಾಗಲೇ ನೇಮಿಸಲಾಗಿದೆ. ವಿಧಾನಸಭೆಯಲ್ಲಿ ಐತಿಹಾಸಿಕ ನಿರ್ಣಯವನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಮುಖ್ಯ ಮಂತ್ರಿಗಳ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂತ್ರಸ್ಥರ ಪರಿಹಾರಕ್ಕಾಗಿ ಶಾಶ್ವತ ಕಾರ್ಯಪಡೆ ರಚಿಸಲು ಕ್ರಮ ವಹಿಸಲಾಗಿದೆ. ಹಲವು ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ ವನವಾಸಿಗಳನ್ನು ಒಕ್ಕಲೆಬ್ಬಿಸದಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಬಜೆಟ್‌ನಲ್ಲಿ ಪ್ರಸ್ತಾಪಿಸಿದಂತೆ ನಗರದ ಹೊರವಲಯ ಸೋಗಾನೆಯಲ್ಲಿ ಸುಮಾರು 98 ಎಕರೆ ಪ್ರದೇಶದಲ್ಲಿ ಫುಡ್‌ ಪಾರ್ಕ್ ಆರಂಭಿಸಲು ಕ್ರಮ ವಹಿಸಲಾಗಿದೆ. 

ಚಂದ್ರಗುತ್ತಿಯನ್ನು ಆಧುನಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.ಶರಾವತಿ ನದಿಯಿಂದ ಸೊರಬ, ಆನವಟ್ಟಿ ಮತ್ತು ಶಿರಾಳಕೊಪ್ಪ ಪಟ್ಟಣಗಳು ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಶಾಶ್ವತ ಶುದ್ಧ ಕುಡಿಯುವ ನೀರಿನ ಯೋಜನೆ ಯನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಯಿಂದ ನಗರದಲ್ಲಿ ಕಿದ್ವಾಯಿ ಮಾದರಿಯ ಕ್ಯಾನ್ಸ‌ರ್ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿ ಯಲ್ಲಿದೆ. ಶಿವಮೊಗ್ಗದಲ್ಲಿ ನವಜಾತ ಶಿಶುಗಳ ಆರೈಕೆಗಾಗಿ ಮಾನವ ಎದೆಹಾಲು ಸಂಸ್ಕರಣೆ ಹಾಗೂ ವಿತರಣಾ ಕೇಂದ್ರವನ್ನು ಈಗಾಗಲೇ ಆರಂಭಿಸಲಾಗಿದೆ. ಮೆಗಾನ್ ಆಸ್ಪತ್ರೆಯಲ್ಲಿ ಮೆದುಳು ರೋಗಗಳ ತಪಾಸಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರತ್ಯೇಕ ಘಟಕ ಜನವರಿಯಿಂದ ಕಾರ್ಯ ಆರಂಭಗೊಂಡಿದೆ ಎಂದರು.

ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಆಯುಷ್ಮಾನ್ ಯೋಜನೆಯಡಿ ಸರ್ಕಾರ ವೆಚ್ಚ ಮಾಡುತ್ತಿದ್ದ 8 ಕೋಟಿ ರು.ಗಳನ್ನು 20 ಕೋಟಿ ರು.ಗಳಿಗೆ ಹೆಚ್ಚಿಸಲಾಗಿದೆ. ರಾಜ್ಯದ ಜನರ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಜಿವನ ಮಟ್ಟ ಸುಧಾರಿಸಲು, ಯುವಜನರ ಹಲವು ಕನಸುಗಳಿಗೆ ಶಕ್ತಿ ತುಂಬಲು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಗಳನ್ನು ಅನುಷ್ಠಾನಗೊಳಿಸಿದೆ. ಮಹಿಳಾ ಫಲಾನುಭವಿಗಳು ಸೇರಿದಂತೆ ರಾಜ್ಯದ ಬಹುಪಾಲು ಜನರು ಸದರಿ ಯೋಜನೆಗಳ ಸಂಗತಿಯಾಗಿದೆ. ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಒಟ್ಟಾರೆಯಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ 30 ರಿಂದ 50 ಸಾವಿರದವರೆಗೆ ಆರ್ಥಿಕ ನೆರವು ಲಭಿಸುತ್ತಿದೆ. ಒಂದು ಗ್ರಾಮ ಪಂಚಾಯಿತಿಗೆ ವಾರ್ಷಿಕವಾಗಿ ಸುಮಾರು 9 ಕೋಟಿ ರು.ಗಳ ಹಣಕಾಸು ಮತ್ತಿತರ ಸೌಲಭ್ಯವು ಯಾವುದೇ ಮಧ್ಯವರ್ತಿಗಳಿಲ್ಲದೆ ತಲುಪಿತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಬಲ್ಕೀಶ್ ಬಾನು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಜಿ.ಪಂ. ಸಿಇಓ ಎನ್.ಹೇಮಂತ್,ಇತರೆ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು. 100 ಅಡಿ ಉದ್ದದ ಧ್ವಜ ಮೆರವಣಿಗೆ

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಲ್ಯಾಣ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆಯಿಂದ ವತಿಯಿಂದ ಶಿವಮೊಗ್ಗದಲ್ಲಿ 100 ಅಡಿ ಉದ್ದದ ಧ್ವಜ ಮೆರವಣಿಗೆ ನಡೆಯಿತು. ಶಿವಮೊಗ್ಗದ ಬಸ್ ನಿಲ್ದಾಣದಿಂದ ಅಮಿರ್ ಅಹಮದ್ ವೃತ್ತದವರೆಗೂ ನಡೆದ ಮೆರವಣಿಗೆಯಲ್ಲಿ ಶಾಲಾ ಮಕ್ಕಳು. ನೂರು ಅಡಿ ಉದ್ದದ ಭಾರತ ಬಾವುಟ ಹಿಡಿದು, ಭಾರತದ ಪರ ಘೋಷಣೆ ಕೂಗುತ್ತಾ ಮೂರು ಕಿ.ಮೀ. ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಇನ್ನು, ಡಿಆರ್‌ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ಮಹೋತ್ಸವದಲ್ಲಿ ವಿವಿಧ ತುಕಡಿಗಳು ಆಕರ್ಷಕ ಪಥ ಸಂಚಲನದಲ್ಲಿ ಸಾಗಿದರು. ಪಥ ಸಂಚಲನದಲ್ಲಿ ಪ್ರಥಮ ಸ್ಥಾನ ಮೊರಾರ್ಜಿ ವಸತಿ ಶಾಲೆ, ದ್ವಿತೀಯ ಸ್ಥಾನ ಭಾರತ್ ಸ್ಕೌಟ್ಸ್ ಬಾಲಕರ ಶಾಲೆ ಹಾಗೂ ತೃತೀಯ ಸ್ಥಾನವನ್ನು ಜ್ಞಾನದೀಪ ಶಾಲೆ ವಿದ್ಯಾರ್ಥಿಗಳು ಪಡೆದುಕೊಂಡರು. ಉತ್ತಮ ಸೇವೆ ಸಲ್ಲಿಸಿದ 5 ಜನ ಅಧಿಕಾರಿ, ಸಿಬ್ಬಂದಿಗಳು, ಅಲ್ಪಸಂಖ್ಯಾತ ಇಲಾಖೆಯ ಅಡಿ ಬರುವ ಪ್ರೌಢಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಅಂಗಾಂಗ ದಾನ ಮಾಡಿದ ದಿ.ಉಲ್ಲಾಸ್ , ದಿ.ಲಲಿತಮ್ಮ ಕುಟುಂಬ ಇವರನ್ನು ಸನ್ಮಾನಿಸಲಾಯಿತು.ಮಳೆ ಹಾನಿ; ತಕ್ಷಣದ ಪರಿಹಾರ ಸೂಚನೆ

ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ಭಾರೀ ಮಳೆಯಿಂದಾಗಿ ಜನ-ಜಾನುವಾರುಗಳು, ಮನೆಗಳು ಹಾನಿಗೊಳಗಾಗಿವೆ. ಹಾನಿಗೊಳಗಾಗಿರುವ ಮನೆಗಳ ಮಾಲೀಕರಿಗೆ ತಕ್ಷಣದ ಪರಿಹಾರ ಕ್ರಮವಾಗಿ ಅಗತ್ಯ ನೆರವನ್ನು ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಹಾನಿಗೊಳಗಾದ 294 ಶಾಲೆಗಳು, ಅಂಗನವಾಡಿಗಳು, ಇತರೆ ಕಟ್ಟಡಗಳು, ರಸ್ತೆ, ಸೇತುವೆಗಳ ದುರಸ್ತಿಗೂ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 41 ಕೆ.ಪಿ.ಎಸ್ ಶಾಲೆಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ 2023-24ನೇ ಸಾಲಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಮತ್ತು ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.