ಸಾರಾಂಶ
ಬೇಸಿಗೆಯಲ್ಲಿ ಹೊಂಡಗುಂಡಿಗಳ ಸವಾಲು । ಮಳೆಗಾಲದಲ್ಲಿ ಪ್ರವಾಹ: ಪದೇ ಪದೆ ಸಂಪರ್ಕ ಕಡಿತ.
ನೆಮ್ಮಾರ್ ಅಬೂಬಕರ್.ಕನ್ನಡಪ್ರಭ ವಾರ್ತೆ, ಶೃಂಗೇರಿ
ಹಾರಗೊಪ್ಪ ಸೇತುವೆಯಿದ್ದರೂ ಇಂದೋ ನಾಳೆಯೋ ಕುಸಿದು ಬೀಳುವ ಭೀತಿಯ ನಡುವೆಯೇ ಜನ ಅನ್ಯದಾರಿ ಕಾಣದೆ ಇದರ ಮೇಲೆಯೇ ಓಡಾಡ ಬೇಕಾದ ದುಸ್ಥಿತಿ ಇದೆ.ಹೊಂಡಗುಂಡಿಗಳೆ ತುಂಬಿರುವ ಈಸೇತುವೆ ಬೇಸಿಗೆಯಲ್ಲೆ ಓಡಾಡಲಾಗದೇ ಇರುವಾಗ ಇನ್ನೂ ಮಳೆಗಾಲದಲ್ಲಿ ಪ್ರವಾಹದ ನೀರಿಂದ ಸೇತುವೆ ತುಂಬಿದ ಕೆರೆಯಂತಾಗಿ ಸಂಪರ್ಕವೇ ಕಡಿತಗೊಳ್ಳುತ್ತದೆ. ತುಂಬಿದ ನೀರು ಇಳಿಯುವವರೆಗೂ ಗ್ರಾಮಸ್ಥರು ಅತ್ತಿಂದಿತ್ತ ಸಂಚರಿಸದಂತೆ ಆಗುತ್ತದೆ. ಅನೇಕ ದಶಕಗಳಿಂದ ಈ ಸಮಸ್ಯೆಯಲ್ಲೆ ಗ್ರಾಮಸ್ಥರು ಪರದಾಡುತ್ತಿದ್ದರೂ ಜನಪ್ರತಿನಿಧಿಗಳು, ಸರ್ಕಾರಗಳು ಬದಲಾದರೂ ಮುರುಕಲು ಸೇತುವೆ ಮಾತ್ರ ಇನ್ನೂ ಬದಲಾಗಿಲ್ಲ.
ಇದು ತಾಲೂಕಿನ ಬೇಗಾರು ಪಂಚಾಯಿತಿ ತಾರೊಳ್ಳಿಕೊಡಿಗೆ ಬೈಲ್ ಬಾರ್ ಸಂಪರ್ಕ ಹಾರಗೊಪ್ಪ ಸೇತುವೆ ಕಥೆ- ವ್ಯಥೆ. ನಕ್ಸಲ್ ಪೀಡಿತ ಪ್ರದೇಶವಾದ ಈ ಗ್ರಾಮ ಸುತ್ತಮುತ್ತ ಕೋಟೆ, ಶುಂಠಿಹಕ್ಲು ,ಕೆ.ಮಸಿಗೆ, ತಾರೊಳ್ಳಿಕೊಡಿಗೆ, ಬೈಲ್ ಬಾರ್ ಸೇರಿದಂತೆ ಹತ್ತಾರು ಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿ 158ಕ್ಕೂ ಅಧಿಕ ಕುಟುಂಬಗಳು ವಾಸವಿದ್ದು, ಈ ಮುರುಕಲು ಸೇತುವೆ, ಕಿತ್ತೆದ್ದು ಹೋಗಿರುವ ರಸ್ತೆ, ಸೇತುವೆ ಮೂಲಕವೇ ಶಾಲಾಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ಅಗತ್ಯ ಕೆಲಸ ಕಾರ್ಯಗಳಿಗೆ ಓಡಾಡಬೇಕಾದ ದಯನೀಯ ಪರಿಸ್ಥಿತಿಯಿಂದ ಮುಕ್ತಿ ಸಿಗದೆ ಸಂಚರಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.ಬೇಸಿಗೆಯಲ್ಲಿ ಹೇಗಾದರು ಸಂಚರಿಸಬಹುದು. ಆದರೆ ಮಳೆಗಾಲದಲ್ಲಿ ಗ್ರಾಮಸ್ಥರ ಗೋಳು ಹೇಳತೀರದು. ಸೇತುವೆ ಮೇಲೆ ಪ್ರವಾಹ ಉಕ್ಕಿ ಹರಿದು 2-3 ದಿನಗಳವರೆಗೂ ಕೆರೆಯಂತೆ ನೀರು ನಿಲ್ಲುವುದರಿಂದ ಗ್ರಾಮಸ್ಥರಿಗೆ ಈ ಮಾರ್ಗ ಹೊರತು ಪಡಿಸಿದರೇ ಇನ್ಯಾವುದೇ ಪರ್ಯಾಯ ಮಾರ್ಗವೇ ಇಲ್ಲದೆ ಮಳೆಗಾಲ ಮುಗಿಯುವವರೆಗೂ ಆಗಾಗ ಗ್ರಾಮಸ್ಥರಿಗೆ ಬಾಹ್ಯ ಪ್ರಪಂಚದ ಸಂಪರ್ಕವೇ ಕಡಿತಗೊಳ್ಳುತ್ತಿರುತ್ತದೆ.
ಮಳೆಗಾಲದಲ್ಲಿ ಇಲ್ಲಿನ ಗ್ರಾಮಸ್ಥರೊಬ್ಬರಿಗೆ ಹೃದಯಾಘಾತ ವಾಗಿ ತುರ್ತು ಚಿಕಿತ್ಸೆಗೆ ಕರೆದೊಯ್ಯಲು ಸಾಧ್ಯವಾಗದ ಹೃದಯವಿದ್ರಾವಕ ಘಟನೆಯೂ ನಡೆದಿತ್ತು. ಕೆಲದಿನಗಳ ಹಿಂದೆ ಶಾಲಾ ಬಾಲಕಿಯೊಬ್ಬಳು ಕಾಲು ಜಾರಿ ನೀರಿಗೆ ಬಿದ್ದಾಗ ಗ್ರಾಮಸ್ತರ ಸಮಯ ಪ್ರಜ್ಞೆಯಿಂದ ಸಾವಿನ ದವಡೆಯಿಂದ ಪಾರಾಗಿ ಜೀವ ಉಳಿಸಿಕೊಂಡಿದ್ದಳು. ಇಂತಹ ಹತ್ತಾರು ಘಟನೆ ಗಳು ಇಲ್ಲಿ ಸಂಭವಿಸುತ್ತಲೇ ಇವೆ. ಗ್ರಾಮಸ್ಥರು ಜೀವ ಅಂಗೈಯಲ್ಲಿಟ್ಟುಕೊಂಡು ಈ ಸೇತುವೆ ಮೇಲೆ ಓಡಾಡಲೇ ಬೇಕಾಗಿದೆ.ವರ್ಷಗಳು ಉರುಳುತ್ತಾ ಸೇತುವೆ ಕುಸಿಯುತ್ತಲೇ ಇದೆ. ಭರವಸೆಗಳ ಮೇಲೆ ಭರವಸೆ ಸಿಗುತ್ತಿದೆಯೇ ಹೊರತು ನಕ್ಸಲ್ ಪೀಡಿತ ಪ್ರದೇಶವಾಗಿದ್ದರೂ ಹರಿಜನ, ಗಿರಿಜನ ಕಾಲೋನಿಗಳಿದ್ದರೂ ಇಲ್ಲಿಗೆ ಯಾವುದೇ ಸರ್ಕಾರದ ಪ್ಯಾಕೇಜ್ ಗಳು ಬರಲೇ ಇಲ್ಲ. ಅಭಿವೃದ್ಧಿಯೆಂಬುದು ಇಲ್ಲಿ ಕೇವಲ ಮರಿಚೀಕೆಯಾಗೇ ಉಳಿದಿದೆ. ಕನಿಷ್ಟ ಮೂಲಭೂತ ಸೌಕರ್ಯಗಳು ಇಲ್ಲದಿದ್ದರೂ ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರತಿ ದಿನ ಬಿದರಗೋಡು, ಬೇಗಾರು ಮತ್ತು ಪಟ್ಟಣಕ್ಕೆ ಅಗತ್ಯ ಕೆಲಸ ಕಾರ್ಯಗಳಿಗೆ ಬರಬೇಕಿದೆ.
ಸೇತುವೆ ನಿರ್ಮಾಣ, ರಸ್ತೆ ದುರಸ್ತಿಗೆ ಕಳೆದೆರೆಡು ದಶಕಗಳಿಂದ ಗ್ರಾಮಸ್ಥರು ನಿರಂತರವಾಗಿ ಹೋರಾಡುತ್ತಲೇ ಬಂದಿದ್ದಾರೆ. ಅನೇಕ ಮನವಿಗಳನ್ನು ನೀಡಿದ್ದಾರೆ. ವಾಡ್‌ರ್ಸಭೆ, ಗ್ರಾಮಸಭೆ, ಜನಸಂಪರ್ಕ ಸಭೆಗಳಲ್ಲಿ ತಮ್ಮ ಸಮಸ್ಯೆಗಳ ನಿವಾರಣೆಗೆ ಅಹವಾಲು ಸಲ್ಲಿಸುತ್ತಿದ್ದರೂ ಈವರೆಗೂ ಯಾವ ಜನಪ್ರತಿನಿಧಿ, ಸರ್ಕಾರ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಇಲ್ಲಿ ವಾಹನಗಳು ಬರಲು ಹಿಂದೇಟು ಹಾಕುತ್ತಿದ್ದು, ಕನಿಷ್ಟ ಕಾಲ್ನಡಿಗೆಗೂ ಪರದಾಡುವಂತಹ ಪರಿಸ್ಥಿತಿ ಇದೆ.ಈ ಭಾಗದಲ್ಲಿ ಭಾರೀ ಮಳೆ ಬೀಳುವುದರಿಂದ ನೀರು ಉಕ್ಕಿ ಹರಿಯುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೆ ನೀರಿನ ರಭಸದಲ್ಲಿ ಕೊಚ್ಚಿ ಹೋಗುವುದು ಖಚಿತ.ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ. ವಿದ್ಯಾರ್ಥಿಗಳ ಭವಿಷ್ಯ, ಗ್ರಾಮಸ್ಥರ ಸಂಕಷ್ಟ ಪರಿಗಣಿಸಿ ವಿದ್ಯಾರ್ಥಿಗಳು, ಚಿಕಿತ್ಸೆಗೆ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ, ಕೃಷಿ ಚಟುವಟಿಕೆಗಳಿಗೆ ಓಡಾಡುವ ಗ್ರಾಮಸ್ಥರಿಗೆ ನಿರ್ಭಿತಿಯಿಂದ, ಧೈರ್ಯವಾಗಿ ಓಡಾಡಲು ಶಾಶ್ವತ ಸೇತುವೆ ನಿರ್ಮಾಣ ಮಾಡಲು ಮುಂದಾಗಬೇಕಿದೆ ಎಂಬುದು ಈ ಗ್ರಾಮಸ್ಥರ ಒಕ್ಕೊರಲ ಒತ್ತಾಯ.
ರಸ್ತೆ , ಸೇತುವೆ ದುರಸ್ತಿ ತುರ್ತು ಅವಶ್ಯಕ:ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದು ಸೇತುವೆ ಇದಾಗಿದೆ. ಮಳೆಗಾಲದಲ್ಲಿ ಗ್ರಾಮಸ್ಥರು ತೀವ್ರ ತೊಂದರೆ ಎದುರಿಸಬೇಕಾಗುತ್ತದೆ. ಶಾಲಾಕಾಲೇಜು ವಿದ್ಯಾರ್ಥಿಗಳು ಪರದಾಡಬೇಕು. ತುರ್ತು ಚಿಕಿತ್ಸೆಗೆ ರೋಗಿಗಳು ಜೀವ ಉಳಿಸಿಕೊಳ್ಳಲು ಪರದಾಡಬೇಕಿದೆ. ಈ ಸೇತುವೆ ನಿರ್ಮಾಣಕ್ಕೆ ಇದುವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸಬೇಕು.
-- ಡಾ.ಅಣ್ಣಾದೊರೆ.ಕಲಿಗೆ, ಶೃಂಗೇರಿ.
-ದಶಕಗಳಿಂದಲೂ ಬೇಡಿಕೆಗೆ ಸ್ಪಂದಿಸಿಲ್ಲ.
ಗ್ರಾಮಸ್ಥರು ರಸ್ತೆ ದುರಸ್ತಿ, ಸೇತುವೆ ನಿರ್ಮಾಣಕ್ಕಾಗಿ ಕಳೆದೆರೆಡು ದಶಕಗಳಿಂದ ಹೊರಾಡುತ್ತಲೇ ಇದ್ದಾರೆ. ಆದರೆ ಯಾವುದೇ ಅಹವಾಲು, ಮನವಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಪ್ರತೀ ವರ್ಷ ಮನವಿ ನೀಡುತ್ತಲೇ ಇದ್ದೇವೆ. ಅಧಿಕಾರಿಗಳು ನಮ್ಮ ಬೇಡಿಕೆ ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ರಸ್ತೆ ಡಾಂಬರೀಕರಣ, ಸೇತುವೆ ನಿರ್ಮಾಣವೂ ಆಗಿಲ್ಲ. ಇನ್ನಾದರೂ ನಮ್ಮ ಬೇಡಿಕೆ ಗಳಿಗೆ ಸ್ಪಂದಿಸಿ ಇಲ್ಲೊಂದು ಸೇತುವೆ ನಿರ್ಮಿಸಬೇಕು.---ಕೇಶವ
ಗ್ರಾಪಂ ಮಾಜಿ ಅಧ್ಯಕ್ಷ, ಬೀಸದಬೈಲ್9 ಶ್ರೀ ಚಿತ್ರ 3-
ಶೃಂಗೇರಿ ತಾಲೂಕಿನ ಬೇಗಾರು ಪಂಚಾಯಿತಿ ವ್ಯಾಪ್ತಿಯ ಶಿಥಿಲಾವಸ್ಥೆಯಲ್ಲಿರುವ ತಾರೋಳ್ಳಿಕೊಡಿಗೆ ಬೈಲ್ ಬಾರ್ ಸಂಪರ್ಕ ಹಾರಗೊಪ್ಪ ಸೇತುವೆ.9 ಶ್ರೀ ಚಿತ್ರ 4-
ಶೃಂಗೇರಿ ಬೇಗಾರು ಪಂಚಾಯಿತಿ ತಾರೊಳ್ಳಿಕೊಡಿಗೆ ಬೈಲ್ ಬಾರ್ ಸಂಪರ್ಕ ಹದಗೆಟ್ಟಿರುವ ರಸ್ತೆ,