ರಾಮನಗರ: ಬಿಡದಿ ಹೋಬಳಿಯ ಮಂಡಲಹಳ್ಳಿಯಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ಭೂಸ್ವಾಧೀನಕ್ಕಾಗಿ ಜೆಎಂಸಿ ಸರ್ವೇ ವೇಳೆ ಸಂಭವಿಸಿದ ಗಲಾಟೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿತರಾಗಿದ್ದ 39 ರೈತರಿಗೆ ಇಲ್ಲಿನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಮಂಡಲಹಳ್ಳಿ ಗ್ರಾಮದ ಗಲಾಟೆ ಸಂಬಂಧ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ 239/2026ರ ಪ್ರಕರಣದಲ್ಲಿ 11 ರೈತರು, ರಸ್ತೆ ತಡೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಸಂಖ್ಯೆ 995/ 2026ರ ಪ್ರಕರಣದಲ್ಲಿ 13 ರೈತರಿಗೆ ಹಾಗೂ ಕ್ರಿಮಿನಲ್ ಸಂಖ್ಯೆ 1002/2026 ಪ್ರಕರಣದಲ್ಲಿ 15 ರೈತರು ಸೇರಿ ಒಟ್ಟು ನಾಲ್ಕು ಪ್ರಕರಣಗಳಿಂದ 39 ರೈತರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು.

ಜೆಎಂಎಫ್‌ ನ್ಯಾಯಾಲಯ ವಿಚಾರಣೆ ನಡೆಸಿ ಕ್ರಿಮಿನಲ್ ಸಂಖ್ಯೆ 995/ 2026ರ ಪ್ರಕರಣದ 13 ಹಾಗೂ ಕ್ರಿಮಿನಲ್ ಸಂಖ್ಯೆ 1002/2026 ಪ್ರಕರಣದ 15 ರೈತರಿಗೆ ಜಾಮೀನು ಮಂಜೂರು ಮಾಡಿತು. ಮತ್ತೊಂದೆಡೆ ಜಿಲ್ಲಾ ಸತ್ರ ನ್ಯಾಯಾಲಯ ಸಿಆರ್ 239/2026ರ ಪ್ರಕರಣದ 11 ಆರೋಪಿತ ರೈತರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಮೊಕದ್ದಮೆ ಸಂಖ್ಯೆ 240 / 2026ರಲ್ಲಿ ಯಾವುದೇ ಆರೋಪಿಗಳು ಸಿಗದ ಕಾರಣ ಈ ಪ್ರಕರಣವೂ ದೋಷಾರೋಪಣ ಪಟ್ಟಿ ಹಂತದಲ್ಲಿ ಇಡಲಾಗಿದೆ.

ಕಳೆದ ಜುಲೈ 13ರಂದು ಮಂಡಲಹಳ್ಳಿ ಗಲಾಟೆ ಸಂಬಂಧ ಕಂದಾಯ ಇಲಾಖೆ ವಾಹನ ಚಾಲಕ ಮಹಮ್ಮದ್ ಸಮೀರ್ ಹಾಗೂ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮುರಳಿ ನೀಡಿದ ಪ್ರತ್ಯೇಕ ದೂರಿನ ಮೇರೆಗೆ 11ಕ್ಕೂ ಹೆಚ್ಚು ರೈತರ ಮೇಲೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಶಾಂತಿ ಭಂಗ, ಕೊಲೆ ಯತ್ನ, ದೈಹಿಕ ಹಲ್ಲೆಯಂತಹ ಆರೋಪದಡಿ ಬಿಡದಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

ಕಾರು ಚಾಲಕ ನೀಡಿದ ದೂರಿನ ಅನ್ವಯ ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪ್ರಕಾಶ್, ನಾಗರಾಜ್, ಕೃಷ್ಣ, ಟಿ.ಯಶವಂತ್, ರೇವಣ್ಣ, ಜಯಮ್ಮ, ಭಾಗ್ಯ, ಮೋಹನ್, ವರಲಕ್ಷ್ಮಿ, ಹರೀಶ್ ಹಾಗೂ ಇತರರ ವಿರುದ್ಧ BNS 189(2), 126(2), 352, 351(2), 109(1), 115(2), 118(1), 132, 133, 74, 190 ಅಡಿ ಪ್ರಕರಣ ದಾಖಲಿಸಲಾಗಿತ್ತು.


ಮತ್ತೊಂದು ಪ್ರಕರಣದಲ್ಲಿ ಇನ್ಸ್ ಪೆಕ್ಟರ್ ಮುರುಳಿ ನೀಡಿದ ದೂರಿನ ಅನ್ವಯ ಅಪರಿಚಿತ ರೈತರ ವಿರುದ್ಧ BNS 189(2), 126(2), 352, 351(2), 109(1), 115(2), 118(1) 132, 133, 74, 190 ಅಡಿ ದೂರು ದಾಖಲು ಮಾಡಿಕೊಳ್ಳಲಾಗಿತ್ತು.

ಬಾಕ್ಸ್‌.........

ಸತ್ಯಕ್ಕೆ ಸಂದ ಜಯ- ನಿಖಿಲ್ ಕುಮಾರಸ್ವಾಮಿ

ರಾಮನಗರ: ಬಿಡದಿಯ ರಾಜಕೀಯ ಪ್ರೇರಿತ ಸುಳ್ಳು ಎಫ್‌ಐಆರ್‌ ಪ್ರಕರಣದಲ್ಲಿ ರಾಮನಗರ ನ್ಯಾಯಾಲಯವು ಸ್ಥಳೀಯ 11 ರೈತರು ಹಾಗೂ ನಿವಾಸಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದು ನಮ್ಮ ಕಾನೂನು ಹೋರಾಟಕ್ಕೆ ಸಿಕ್ಕ ದೊಡ್ಡ ಜಯ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ನಮ್ಮ ಭೂಮಿ ಮತ್ತು ಜೀವನೋಪಾಯಕ್ಕಾಗಿ ಧ್ವನಿ ಎತ್ತುವವರನ್ನು ಅಧಿಕಾರಬಲದಿಂದ ಹತ್ತಿಕ್ಕಲು ಸಾಧ್ಯವಿಲ್ಲ. ಶ್ರೀ ಪ್ರದೀಪ್‌ ಅವರ ನೇತೃತ್ವದ ನಮ್ಮ ವಕೀಲರ ತಂಡದ ಕಾನೂನು ಸಮರ ಇಲ್ಲಿಗೆ ಮುಗಿಯುವುದಿಲ್ಲ; ಈ ಸುಳ್ಳು ಪ್ರಕರಣಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಬಿಡದಿಯ ಜನರ ಪರವಾಗಿ ನಾವು ನೆಲದಲ್ಲೂ ನಿಂತಿದ್ದೇವೆ. ನ್ಯಾಯಾಲಯದಲ್ಲೂ ನಿಂತಿದ್ದೇವೆ. ಸಂಪೂರ್ಣ ನ್ಯಾಯ ಸಿಗುವವರೆಗೂ ಅವರ ಪರವಾಗಿ ಹೋರಾಡಲಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

27ಕೆಆರ್ ಎಂಎನ್ 2.ಜೆಪಿಜಿ

ನ್ಯಾಯಾಲಯದಲ್ಲಿ ಜಾಮೀನು ಮಂಜೂರಾದ ರೈತರು.