ಸಾರಾಂಶ
ಸಭೆಯಲ್ಲಿ ಒಟ್ಟು 21 ರೈತರಿಗೆ 37.8 ಎಕರೆಯಷ್ಟು ಜಮೀನು ಮಂಜೂರು ಮಾಡಲಾಗಿದೆ. ಸಕಾಲಕ್ಕೆ ದಾಖಲೆಗಳನ್ನು ಅಧಿಕಾರಿಗಳು ಸಿದ್ದಮಾಡಿದ್ದು, ಅವರು ಇದೇ ರೀತಿ ಎಲ್ಲಾ ಅರ್ಜಿಗಳ ವಿಲೇವಾರಿಗೆ ಶ್ರಮ ತೆಗೆದುಕೊಳ್ಳಬೇಕು. ಸದ್ಯ ಫಾರಂ ನಂ 53 ರಲ್ಲಿ ಇನ್ನೂ 900 ಅರ್ಜಿಗಳಿದ್ದು, ಆದಷ್ಟು ಶೀಘ್ರವಾಗಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ.
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಅನೇಕ ರೈತರು ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುತ್ತಿದ್ದು, ಆ ಜಮೀನನ್ನು ಅಕ್ರಮ ಸಕ್ರಮ ಯೋಜನೆಯಡಿ ತಮಗೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದು, ಆದಷ್ಟು ಶೀಘ್ರವಾಗಿ ಅರ್ಹ ರೈತರಿಗೆ ಭೂ ಮಂಜೂರು ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.ಇಲ್ಲಿಯ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಕ್ರಮ- ಸಕ್ರಮ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಅನೇಕ ರೈತರು ಸಾಗುವಳಿ ಚೀಟಿ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಕೆಲವೊಂದು ಕಾರಣಾಂತರಗಳಿಂದ ಅವರಿಗೆ ಜಮೀನು ನೀಡುವುದು ತಡವಾಗಿದೆ. ಹಂತ ಹಂತವಾಗಿ ಅರ್ಹ ಫಲಾನುಭವಿಗಳಿಗೆ ಜಮೀನು ನೀಡುವ ಕಾರ್ಯ ನಡೆಯಲಿದೆ ಎಂದರು.
ಸಭೆಯಲ್ಲಿ ಒಟ್ಟು 21 ರೈತರಿಗೆ 37.8 ಎಕರೆಯಷ್ಟು ಜಮೀನು ಮಂಜೂರು ಮಾಡಲಾಗಿದೆ. ಸಕಾಲಕ್ಕೆ ದಾಖಲೆಗಳನ್ನು ಅಧಿಕಾರಿಗಳು ಸಿದ್ದಮಾಡಿದ್ದು, ಅವರು ಇದೇ ರೀತಿ ಎಲ್ಲಾ ಅರ್ಜಿಗಳ ವಿಲೇವಾರಿಗೆ ಶ್ರಮ ತೆಗೆದುಕೊಳ್ಳಬೇಕು. ಸದ್ಯ ಫಾರಂ ನಂ 53 ರಲ್ಲಿ ಇನ್ನೂ 900 ಅರ್ಜಿಗಳಿದ್ದು, ಆದಷ್ಟು ಶೀಘ್ರವಾಗಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂದರು.ಮುಂದಿನ 15 ದಿನಗಳ ಬಳಿಕ ಪುನಃ ಸಭೆ ನಡೆಸಿ ಮತ್ತಷ್ಟು ಅರ್ಜಿಗಳನ್ನು ವಿಲೆ ಮಾಡಲಾಗುತ್ತದೆ. ಇದಾದ ಬಳಿಕ ಫಾರಂ ನಂಬರ್ 57 ಅರ್ಜಿಗಳನ್ನು ಪರಿಶೀಲನೆ ನಡೆಸಿ ಅದರಲ್ಲಿ ಅರ್ಜಿ ಸಲ್ಲಿಸಿದ ರೈತರಿಗೂ ಆದಷ್ಟು ಶೀಘ್ರ ಜಮೀನು ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ದರಕಾಸ್ತು ಸಮಿತಿ ಸದಸ್ಯರಾದ ಡಿ.ಎಲ್.ಪರಿಮಳ, ಚಂದ್ರಶೇಖರರೆಡ್ಡಿ, ನರಸಿಂಹಮೂರ್ತಿ ಹಾಜರಿದ್ದರು.