ಸಾರಾಂಶ
ಎರಡು ವರ್ಷಕ್ಕೊಮ್ಮೆ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಉತ್ಸವ ಈ ವರ್ಷ ಮೇ ತಿಂಗಳಿನಲ್ಲಿ ನಡೆದಿದೆ. ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಶ್ರೀ ಭಗವತಿ ದೇವರ ಉತ್ಸವವು ಗುರುವಾರ ಶ್ರದ್ಧಾ ಭಕ್ತಿಯಿಂದ ಆರಂಭಗೊಂಡಿತು.ಬೆಳಗ್ಗೆ ಎಡಿಕೇರಿ ದೊಡ್ಡ ಮನೆಯಿಂದ ಭಂಡಾರ ತಂದು ದೇವಾಲಯದಲ್ಲಿ ಇರಿಸಿ ತಂಡ್ರ ಹೊಳೆಯಲ್ಲಿ ಜಳಕ ನೆರವೇರಿಸಿದ ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಜರುಗಿತು. ಅನಂತರ ಪೀಲಿಯಾಟ್ ಹಾಗೂ ಬೋಡ್ ನಮ್ಮೆ ನೆರವೇರಿದವು. ಈ ಸಂದರ್ಭ ಗ್ರಾಮಸ್ಥರು ವಿಶೇಷ ವೇಷಧರಿಸಿ ದೇವರ ಉತ್ಸವದಲ್ಲಿ ಕುಣಿದು ಸಾಂಪ್ರದಾಯಿಕ ಆಚರಣೆ ನೆರವೇರಿಸಿದರು. ನಂತರ ಭಂಡಾರದ ಮನೆಗೆ ಭಂಡಾರವನ್ನು ತೆಗೆದುಕೊಂಡು ಹೋಗಲಾಯಿತು.
ಶುಕ್ರವಾರ ಬೆಳಗ್ಗೆ ಉತ್ಸವದ ಅಂಗವಾಗಿ ಆರಾಟ್ ಬೊಳಕಾಟ್ ನಡೆಯಲಿದೆ. ಒಂಬತ್ತು ಗಂಟೆಗೆ ಮಹಾಪೂಜೆ ನೆರವೇರಲಿದೆ. ಮಧ್ಯಾಹ್ನ 12:30ಕ್ಕೆ ದೇವರನ್ನು ರಾಟೆಯಲ್ಲಿ ಕೂರಿಸಿ ಸಾಂಪ್ರದಾಯಿಕವಾಗಿ ತೂಗಲಾಗುವುದು. ಬಳಿಕ ಕ್ಷೇತ್ರಪಾಲ, ಶಾಸ್ತಾವು ಹಾಗೂ ಭದ್ರಕಾಳಿ ತೆರೆಗಳು ನಡೆಯಲಿವೆ.ಗುರುವಾರ ನಡೆದ ಬೊಡ್ ನಮ್ಮೆ ಉತ್ಸವದಲ್ಲಿ ತಕ್ಕ ಮುಖ್ಯಸ್ಥರು, ನಾಡಿನ ಭಕ್ತರು, ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಎರಡು ವರ್ಷಕ್ಕೊಮ್ಮೆ ಏಪ್ರಿಲ್ ತಿಂಗಳಲ್ಲಿ ನಡೆಯುವ ಉತ್ಸವ ಈ ವರ್ಷ ಮೇ ತಿಂಗಳಲ್ಲಿ ನಡೆಯುತ್ತಿದ್ದು ಭಕ್ತರು ಸಂಭ್ರಮದಿಂದ ಪಾಲ್ಗೊಂಡಿದ್ದರು.