ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಳ್ಳಾರಿಗೆ ಭೇಟಿ ನೀಡಿದ ಹುಬ್ಬಳ್ಳಿಯ ಎಫ್‌ಎಸ್‌ಎಲ್‌, ಬಾಂಬ್‌ ನಿಷ್ಕ್ರಿಯ ದಳ ನಗರದ ಸಿರುಗುಪ್ಪ ರಸ್ತೆಯಲ್ಲಿನ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸ ಹಾಗೂ ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ವೇಳೆ ಎರಡು ಜೀವಂತ ಗುಂಡಿನ ಶೆಲ್‌ ಪತ್ತೆ 

ಬಳ್ಳಾರಿ: ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಳ್ಳಾರಿಗೆ ಭೇಟಿ ನೀಡಿದ ಹುಬ್ಬಳ್ಳಿಯ ಎಫ್‌ಎಸ್‌ಎಲ್‌, ಬಾಂಬ್‌ ನಿಷ್ಕ್ರಿಯ ದಳ ನಗರದ ಸಿರುಗುಪ್ಪ ರಸ್ತೆಯಲ್ಲಿನ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸ ಹಾಗೂ ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ವೇಳೆ ಎರಡು ಜೀವಂತ ಗುಂಡಿನ ಶೆಲ್‌ ಪತ್ತೆಯಾಗಿವೆ.

ಟಿಯರ್‌ ಗ್ಯಾಸ್‌ ಬಿದ್ದ ಸ್ಥಳ, ಸೋಡಾ ಬಾಟಲ್‌ ಪತ್ತೆಯಾದ ಸ್ಥಳವನ್ನು ಈ ತಂಡ ಮಾರ್ಕ್‌ ಮಾಡಿತು. ಇದೇ ವೇಳೆ ರೆಡ್ಡಿ ಅವರ ಗ್ಲಾಸ್‌ ಹೌಸ್‌ನ ಕಚೇರಿ ಹೊರ ಭಾಗದಲ್ಲಿ ಅಳವಡಿಸಿರುವ ಗಾಜು ಒಡೆದಿರುವುದು ಎಫ್‌ಎಸ್‌ಎಲ್ ಹಾಗೂ ಬಾಂಬ್ ನಿಷ್ಕ್ರಿಯ ತಂಡ ಪರಿಶೀಲಿಸಿತಲ್ಲದೆ, ಜನಾರ್ದನ ರೆಡ್ಡಿ ನಿವಾಸದ ಬಳಿ ಹಾಗೂ ಘಟನಾ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿತು.

ಶೋಧ ಕಾರ್ಯ ವೇಳೆ ಪತ್ತೆಯಾದ ಗುಂಡು ಬ್ಯಾನರ್ ಗಲಾಟೆ ವೇಳೆ ರಸ್ತೆ ಬದಿಯಲ್ಲಿ ಶಾಸಕ ಭರತ್‌ ರೆಡ್ಡಿ ವಾಸ್ತವ್ಯ ಹೂಡಿದ್ದ ಸ್ಥಳದಲ್ಲಿ ಪತ್ತೆಯಾಗಿದೆ ಎನ್ನಲಾಗಿದ್ದು, ಇದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಪರಸ್ಪರ ಗುಂಡಿನ ದಾಳಿ ನಡೆದಿರಬಹುದೇ ಎಂಬ ಗುಮಾನಿ ಮೂಡಿಸಿದ್ದು, ತನಿಖೆಯಿಂದ ಸತ್ಯಾಂಶ ಗೊತ್ತಾಗಲಿದೆ. ಬ್ಯಾನರ್‌ ಗಲಾಟೆ ವೇಳೆ ನಡೆದ ಗುಂಪು ಘರ್ಷಣೆಯಲ್ಲಿ ಸ್ಫೋಟಕ ಬಳಕೆ ಬಗ್ಗೆ, ಫೈರಿಂಗ್‌ಗೆ ಸಂಬಂಧಿಸಿದಂತೆ ಬುಲೆಟ್‌ ಪತ್ತೆ ಹಚ್ಚಲು ಎನ್‌ಎಲ್‌ಜೆಡಿ ಮತ್ತು ಡಿಎಸ್‌ಎಂಡಿ ಮಷಿನ್‌ಗಳ ಮೂಲಕ ಶೋಧ ನಡೆಸಿತು.

ವೀಡಿಯೋ ನೀಡಲು ಮನವಿ :

ಶಾಸಕ ಜನಾರ್ದನ ರೆಡ್ಡಿ ಮನೆಯ ಮುಂದೆ ಜ. 1ರಂದು ಬ್ಯಾನರ್‌ ಹರಿದ ವಿಚಾರವಾಗಿ ನಡೆದ ಗಲಾಟೆಯ ಕುರಿತು ರೆಕಾರ್ಡ್‌ ಮಾಡಿದ ದೃಶ್ಯಾವಳಿಗಳು ಇದ್ದಲ್ಲಿ ಸಾರ್ವಜನಿಕರು ಹೆಚ್ಚಿನ ತನಿಖೆಗಾಗಿ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ತಮ್ಮ ಮೊಬೈಲ್‌ ಹಾಗೂ ಇತರ ಎಲೆಕ್ಟಾನಿಕ್‌ ಸಾಧನಗಳಲ್ಲಿ ರೆಕಾರ್ಡಿಂಗ್‌ ಮಾಡಿದ್ದ ದೃಶ್ಯಾವಳಿಗಳು ಇದ್ದರೆ ಹೆಚ್ಚಿನ ತನಿಖೆಗಾಗಿ ವಾಟ್ಸ್‌ಆ್ಯಪ್‌ ಸಂಖ್ಯೆ 9480803045 ನಂಬರ್‌ಗೆ ಅಥವಾ ಖುದ್ದಾಗಿ ಠಾಣೆಗೆ ಹಾಜರಾಗಿ ಮಾಹಿತಿ ನೀಡಬಹುದು ಎಂದು ಪೊಲೀಸರು ಕೋರಿದ್ದಾರೆ.

ಎರಡು ಬಾರಿ ಮರಣೋತ್ತರ ಪರೀಕ್ಷೆ?: 

ಗಲಭೆ ಪ್ರಕರಣದಲ್ಲಿ ಗುಂಡೇಟಿನಿಂದ ಮೃತಪಟ್ಟ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ರೆಡ್ಡಿ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಎರಡು ಬಾರಿ ನಡೆಸಲಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಮಾಧ್ಯಮಗಳ ಮುಂದೆ ಸೋಮವಾರ ಆರೋಪಿಸಿದ್ದಾರೆ.

ಮೊದಲ ಬಾರಿಗೆ ಗುಂಡನ್ನು ಹೊರತೆಗೆಯದೆ ಪ್ರಕರಣವನ್ನು ಮುಚ್ಚಿಹಾಕುವ ಯತ್ನದೊಂದಿಗೆ ಮರಣೋತ್ತರ ಪರೀಕ್ಷೆ ನಡೆಸದೆ ಅಂತ್ಯಸಂಸ್ಕಾರಕ್ಕೆ ಪ್ಲ್ಯಾನ್‌ ಮಾಡಲಾಗಿತ್ತು. ಬಳಿಕ, ತೀವ್ರ ಚರ್ಚೆಗೆ ಕಾರಣವಾಗುತ್ತಿದ್ದಂತೆ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಶ್ರೀರಾಮುಲು ದೂರಿದರು. 

ರೆಡ್ಡಿ ಮನೆಯಲ್ಲಿ ದೊಣ್ಣೆಗಳು?: 

ಜನಾರ್ದನ ರೆಡ್ಡಿ ನಿವಾಸದಲ್ಲಿ ರಾಶಿ ರಾಶಿ ದೊಣ್ಣೆಗಳನ್ನು ಇಟ್ಟಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬ್ಯಾನರ್ ಗಲಾಟೆ ವೇಳೆ ನಡೆದ ಗುಂಪು ಘರ್ಷಣೆ ಒಂದೇ ಕಡೆಯಿಂದ ನಡೆದಿಲ್ಲ. ಎರಡೂ ಕಡೆಯಿಂದ ಆಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವಿಶ್ಲೇಷಿಸುತ್ತಿದ್ದಾರೆ.

ಘಟನೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕೆಲವು ಮುಖಂಡರು ಹಾಗೂ ಬೆಂಬಲಿಗರು ದೊಣ್ಣೆಗಳನ್ನು ಹಿಡಿದು ನಿಂತಿರುವುದು, ಕೂಗಾಟ ನಡೆಸುವ ವೀಡಿಯೋಗಳನ್ನು ಎರಡು ಕಡೆಯವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಗಲಭೆ ಪ್ರಕರಣವನ್ನು ಜೀವಂತವಾಗಿರಿಸಿದ್ದಾರೆ.

ಇಂದು ಡಿಕೆಶಿ ಬಳ್ಳಾರಿಗೆ: 

ಬ್ಯಾನರ್ ಗಲಭೆ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬಳ್ಳಾರಿಗೆ ಆಗಮಿಸಲಿದ್ದು, ಪಕ್ಷದ ಮುಖಂಡರ ಜತೆ ಚರ್ಚೆ ನಡೆಸುವ ಅವರು, ಬಳಿಕ ಮೃತ ಯುವಕನ ಮನೆಗೆ ತೆರಳಿ ಕುಟುಂಬ ಸದಸ್ಯರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಖಾಸಗಿ ಹೋಟೆಲ್‌ವೊಂದರಲ್ಲಿ ಪಕ್ಷದ ನಾಯಕರು ಹಾಗೂ ಪ್ರಮುಖರ ಸಭೆ ಕರೆದಿದ್ದಾರೆ.