ಬಮ್ಮಿಗಟ್ಟಿ ಸರ್ಕಾರಿ ಶಾಲೆ ಮಕ್ಕಳಿಗೆ ವಕ್ಫ್ ಭಯ!

| Published : Jul 23 2025, 03:07 AM IST

ಸಾರಾಂಶ

ಈ ಶಾಲಾ ಮೈದಾನಕ್ಕೆ ಅಂಟಿಕೊಂಡು ವಕ್ಫ್ ಬೋರ್ಡ್‌ಗೆ ಸೇರಿದ ರಿಸನಂ-6ರ 13 ಗುಂಟೆಯ ಕೋಲು ಪಟ್ಟಿ ಇದೆ. ಸರಿಯಾದ ನಿರ್ವಹಣೆ ಇಲ್ಲದೇ ಅಲ್ಲಿ ನೀರು ನಿಂತು ಅಕ್ಷರಶಃ ಕೊಳಚೆಯಾಗಿದೆ. ಕಸ, ಕಂಟಿಗಳು ಅಪಾರವಾಗಿ ಬೆಳೆದಿವೆ. ಅದೀಗ ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಸದಾ ಕೊಳಚೆ ನಿಲ್ಲುವುದರಿಂದ ರೋಗರುಜಿನಗಳ ತಾಣವಾಗಿದೆ.

ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ: ರಾಜ್ಯದಲ್ಲಿ ವಕ್ಫ್ ಗದ್ದಲ ಸದ್ಯಕ್ಕೆ ತಣ್ಣಗಾಗಿದ್ದರೂ ವಕ್ಫ್ ಆಸ್ತಿ ವಿವಾದದಿಂದಾಗಿ ಅನೇಕರು ಇನ್ನೂ ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವುದಕ್ಕೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಸರ್ಕಾರಿ ಶಾಲೆಯ 1200 ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ!

ಮಳೆಗಾಲ ಶುರುವಾದರೆ ಈ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಕಾರಣ ತಮ್ಮ ಶಾಲೆ ಎದುರಿಗಿರುವ ಕೆಸರು, ಕಸ, ಪೊದೆಯಂಥ ಕಂಟಿಗಳಲ್ಲಿ ವಾಸವಾಗಿರುವ ವಿಷ ಸರ್ಪಗಳು ಆಗಾಗ ಶಾಲೆಗೆ ನುಗ್ಗುತ್ತಿರುವುದು!

ಧೈರ್ಯ ಮಾಡಿ ಶಾಲೆಗೆ ಬಂದರೆ ಯಾವುದೇ ಕಾರಣಕ್ಕೂ ಆಟವಾಡಲು ಮೈದಾನಕ್ಕೆ ಇಳಿಯುವುದಿಲ್ಲ. ಕೊಠಡಿ ಬಿಟ್ಟು ಮೈದಾನಕ್ಕೆ ಬರುವುದೇ ಇಲ್ಲ. ಅಷ್ಟು ಭಯ ಹುಟ್ಟಿಸಿವೆ ಅಲ್ಲಿನ ವಿಷ ಜಂತುಗಳು.

ವಕ್ಫ್ ಆಸ್ತಿ ಕಿರಿಕಿರಿ: ಈ ಶಾಲಾ ಮೈದಾನಕ್ಕೆ ಅಂಟಿಕೊಂಡು ವಕ್ಫ್ ಬೋರ್ಡ್‌ಗೆ ಸೇರಿದ ರಿಸನಂ-6ರ 13 ಗುಂಟೆಯ ಕೋಲು ಪಟ್ಟಿ ಇದೆ. ಸರಿಯಾದ ನಿರ್ವಹಣೆ ಇಲ್ಲದೇ ಅಲ್ಲಿ ನೀರು ನಿಂತು ಅಕ್ಷರಶಃ ಕೊಳಚೆಯಾಗಿದೆ. ಕಸ, ಕಂಟಿಗಳು ಅಪಾರವಾಗಿ ಬೆಳೆದಿವೆ. ಅದೀಗ ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಸದಾ ಕೊಳಚೆ ನಿಲ್ಲುವುದರಿಂದ ರೋಗರುಜಿನಗಳ ತಾಣವಾಗಿದೆ.

ಮೂಲತಃ ಇದು ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಸೇರಿದ ಖಬರಸ್ತಾನ. ಒಟ್ಟು 11.20 ಎಕರೆ ವಿಸ್ತೀರ್ಣವಿದೆ. ಇದರಲ್ಲಿ ತಾಲೂಕು ರಸ್ತೆ ಹಾದುಹೋಗಿದ್ದರಿಂದ ಎರಡು ತುಂಡಾಗಿ ಸರ್ಕಾರಿ ಶಾಲೆಯ ಜಾಗೆಗೆ ಅಂಟಿಕೊಂಡು ಈ 13 ಗುಂಟೆಯ ಕೋಲು ಪಟ್ಟಿ ಉಳಿದಿದೆ.

ಈ ಶಾಲೆಯಲ್ಲಿ ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲ ಧರ್ಮೀಯ, ಎಲ್ಲ ಸಮುದಾಯಗಳ ಮಕ್ಕಳು ಓದುತ್ತಿದ್ದಾರೆ. ಹಾಗಾಗಿ ಶಾಲೆ ಮಕ್ಕಳ ಹಿತದೃಷ್ಟಿಯಿಂದ ಮುಸ್ಲಿಂ ಸಮುದಾಯದವರು ಈ ಕೋಲುಪಟ್ಟಿಯಲ್ಲಿ ಸುಮಾರು ವರ್ಷಗಳಿಂದ ಶವಗಳನ್ನು ಹೂಳುತ್ತಿಲ್ಲ. ಆದರೆ, ಅದರ ಸರಿಯಾದ ನಿರ್ವಹಣೆಯನ್ನೂ ಯಾರೂ ಮಾಡುತ್ತಿಲ್ಲ. ಹಾಗಾಗಿ ವಿಷಜಂತುಗಳ ಆವಾಸಸ್ಥಾನವಾಗಿ ಅದು ಮಕ್ಕಳಲ್ಲಿ ಭಯ ಹುಟ್ಟಿಸಿದೆ.

ಶಾಲಾ ಮೈದಾನಕ್ಕೆ ಜಾಗೆ: ಮಕ್ಕಳಲ್ಲಿನ ಭಯ ಕಂಡು ಊರಿನ ಹಿರಿಯರೆಲ್ಲ ಸೇರಿ ಈ 13 ಗುಂಟೆ ಜಾಗೆಯನ್ನು ಸರ್ಕಾರಿ ಶಾಲೆಗೆ ಬಿಟ್ಟುಕೊಡುವಂತೆ ಸ್ಥಳೀಯ ಮುಸ್ಲಿಂ ಸಮುದಾಯದ ಹಿರಿಯರಲ್ಲಿ ವಿನಂತಿಸಿದ್ದಾರೆ. ಅದಕ್ಕೆ ಅವರು, ಈ ಆಸ್ತಿ ಹಸ್ತಾಂತರದ ಅಧಿಕಾರ ನಮಗಿಲ್ಲ, ವಕ್ಫ್ ಬೋರ್ಡಗೆ ಇದೆ ಎಂದಿದ್ದಾರೆ. ಆಗ ಗ್ರಾಮದ ಹತ್ತಾರು ಜನ ಪ್ರಮುಖರು ಸೇರಿ ಧಾರವಾಡದ ವಕ್ಫ್ ಕಚೇರಿಗೆ ಹೋಗಿ ವಿಷಯ ವಿವರಿಸಿ ಆಸ್ತಿ ಹಸ್ತಾಂತರಿಸುವಂತೆ ಮನವಿ ಮಾಡಿದ್ದಾರೆ.

ಈ ಮನವಿಗೆ ಸ್ಪಂದಿಸಿದ ವಕ್ಫ್ ಬೋರ್ಡ್ ಅಧಿಕಾರಿ ಗ್ರಾಮದಲ್ಲಿನ ಉಭಯ ಧರ್ಮೀಯರ ಸಮ್ಮತವಿದ್ದರೆ, ಸೌಹಾರ್ದಯುತವಾಗಿ ಸರ್ಕಾರಿ ಶಾಲೆಗೆ ಈ ಜಾಗೆ ಬಳಸಿಕೊಳ್ಳುವುದಾದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಸಮ್ಮತಿ ಸೂಚಿಸಿದ್ದಾರೆ.

ಸಾಲದ್ದಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳಿಗೂ ಈ ಬೇಡಿಕೆಯ ಮನವಿ ಸಲ್ಲಿಸಲಾಗಿದ್ದರೂ ಹತ್ತಾರು ವರ್ಷಗಳಿಂದ ಈ ಸಮಸ್ಯೆ ಮಾತ್ರ ಬಗೆಹರಿಯದೇ ಹಾಗೆಯೇ ಉಳಿದಿದೆ. ವಿದ್ಯಾರ್ಥಿಗಳ ಓದು ಆತಂಕದಲ್ಲೇ ಮುಂದುವರೆದಿದೆ.

ಶಾಲೆಗೆ 5 ಎಕರೆ ದಾನ: ಊರಲ್ಲಿನ ಸರ್ಕಾರಿ ಶಾಲಾ ಕಟ್ಟಡಕ್ಕೆ ಜಾಗೆಯ ಕೊರತೆ ಎದುರಾದಾಗ ಗ್ರಾಮದ ಗಣ್ಯರಾಗ ಗುರುಪಾದಪ್ಪ ಮೆಣಸಿನಕಾಯಿ ಅವರು ರಿಸಂ-2/5 ರಲ್ಲಿನ ತಮ್ಮ ಬರೋಬ್ಬರಿ 5 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ.

ಅದರಲ್ಲಿ 1ರಿಂದ ಪಿಯುಸಿ ವರೆಗಿನ 1200ಕ್ಕೂ ಹೆಚ್ಚು ಮಕ್ಕಳ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಸರ್ಕಾರ ಕರ್ನಾಟಕ ಪಬ್ಲಿಕ್‌ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ನಿರ್ಮಿಸಿದೆ. ಜತೆಗೆ ಶೌಚಾಲಯ, ಗ್ರಂಥಾಲಯ, ನೀರಿನ ಟ್ಯಾಂಕ್, ಶಿಕ್ಷಕರ ವಸತಿ ಗೃಹ ಇತ್ಯಾದಿಗಳನ್ನು ನಿರ್ಮಿಸಿದೆ. ತಕ್ಕ ಮಟ್ಟಿಗೆ ಆಟದ ಮೈದಾನವೂ ಇದೆ.

ಮಳೆಗಾಲ ಬಂತೆಂದರೆ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಾರೆ. ಬಂದರೂ ಸದಾ ಭಯದಲ್ಲಿ ಇರುತ್ತಾರೆ. ಊರಿನ ಮುಸ್ಲಿಂ ಬಂಧುಗಳು, ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳೂ ಸಮ್ಮತಿಸಿದ್ದಾರೆ. ಸರ್ಕಾರ ಬೇಗನೇ ಈ ಜಾಗೆಯನ್ನು ಸರ್ಕಾರಿ ಶಾಲೆಗೆ ಒಪ್ಪಿಸಬೇಕು ಎಂದು ಬಮ್ಮಿಗಟ್ಟಿ ಗ್ರಾಮದ ಗಣ್ಯರಾದ ಬಿ.ಎಂ. ಟವಳಿ ಹೇಳಿದರು.

ಮೊದಲು ಇಲ್ಲಿ ಕೆಲವು ಗೋರಿಗಳು ಇದ್ದವು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವೇ ಈಗ ಇಲ್ಲಿ ಶವ ದಫನ್‌ ಮಾಡುತ್ತಿಲ್ಲ. ಇದನ್ನು ಬಿಟ್ಟುಕೊಡುವ, ಹಸ್ತಾಂತರಿಸುವ ಅಧಿಕಾರ ನಮಗಿಲ್ಲ. ವಕ್ಫ್ ಬೋರ್ಡ ಶಾಲೆಗೆ ಈ ಆಸ್ತಿ ಬಿಟ್ಟುಕೊಟ್ಟರೆ ನಮ್ಮದೇನೂ ತಕರಾರಿಲ್ಲ ಎಂದು ಗ್ರಾಮದ ಇಸ್ಮಾಯಿಲ್ ಮಿಶ್ರಿಕೋಟಿ ಹೇಳಿದರು.