ಕಟ್ಟೆಮಾಡು ದೇಗುಲದಲ್ಲಿ ವಸ್ತ್ರಸಂಹಿತೆ ಜಾರಿಗೆ ತಡೆ

| Published : Feb 13 2025, 12:49 AM IST

ಕಟ್ಟೆಮಾಡು ದೇಗುಲದಲ್ಲಿ ವಸ್ತ್ರಸಂಹಿತೆ ಜಾರಿಗೆ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ದೇವಸ್ಥಾನದಲ್ಲಿ ಜಾರಿಗೆ ತರಲಾಗಿರುವ ವಸ್ತ್ರ ಸಂಹಿತೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕು ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ದೇವಸ್ಥಾನದಲ್ಲಿ ಜಾರಿಗೆ ತರಲಾಗಿರುವ ವಸ್ತ್ರಸಂಹಿತೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ವಸ್ತ್ರಸಂಹಿತೆಗೆ ಸಂಬಂಧಿಸಿದ ದೇವಸ್ಥಾನದ ಬೈಲಾದಲ್ಲಿರುವ ವಿವಾದಾತ್ಮಕ ಅಂಶಗಳನ್ನು ಆಕ್ಷೇಪಿಸಿ ಮಡಿಕೇರಿ ನಿವಾಸಿ ಸಿ.ಎ ಸಂಜು ಹಾಗೂ ವಿರಾಜಪೇಟೆ ನಿವಾಸಿ ಅಮಿತ್ ಪಿ. ಭೀಮಯ್ಯ ಎಂಬುವರು ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರ ಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಬರುವ ಯಾವುದೇ ವ್ಯಕ್ತಿಯನ್ನು ದೇವಾಲಯದ ಆವರಣ ಪ್ರವೇಶಿಸುವುದಕ್ಕೆ ದೇವಸ್ಥಾನದ ಆಡಳಿತ ಮಂಡಳಿಯು ನಿರ್ಬಂಧ ಹೇರಬಾರದು ಎಂದು ನಿರ್ದೇಶಿಸಿ ಮಧ್ಯಂತರ ಆದೇಶ ಮಾಡಿದೆ.

ಇದೇ ವೇಳೆ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಕೊಡಗು ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ, ಕಟ್ಟೆಮಾಡು ಮಹಾಮೃತ್ಯುಂಜಯ ದೇವಸ್ಥಾನ ಆಡಳಿತ ಮಂಡಳಿ, ಕೊಡಗು ಜಿಲ್ಲಾಧಿಕಾರಿ ಹಾಗೂ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಫೆ.27ಕ್ಕೆ ಮುಂದೂಡಿತು.

ಆಡಳಿತ ಮಂಡಳಿ ರೂಪಿಸಿರುವ ಬೈಲಾದಲ್ಲಿ ವಸ್ತ್ರಸಂಹಿತೆಗೆ ಸಂಬಂಧಿಸಿದ ಸೆಕ್ಷನ್ 4(7)ರಲ್ಲಿ ಯಾವುದೇ ವ್ಯಕ್ತಿಯು ದೇವಸ್ಥಾನದ ಆವರಣದಲ್ಲಿ ನಿರ್ದಿಷ್ಟ ಸಮುದಾಯದ ಯಾವುದೇ ಆಚರಣೆ ಮಾಡುವಂತಿಲ್ಲ. ಕೊಡವರು ತಮ್ಮ ಸಂಪ್ರದಾಯಿಕ ಉಡುಪನ್ನು ಧರಿಸಿ ದೇವಸ್ಥಾನದ ಆವರಣಕ್ಕೆ ಪ್ರವೇಶಿಸಬಾರದು ಎಂದು ಹೇಳಲಾಗಿದೆ. ಇದು ಕಾನೂನು ಬಾಹಿರವಾಗಿದ್ದು, ಈ ಸೆಕ್ಷನ್‌ ಜಾರಿಗೆ ತಡೆ ನೀಡಬೇಕು. ಸಾಂಪ್ರದಾಯಿಕ ಉಡುಪು ಧರಿಸಿ ಬರುವ ಕೊಡವ ಹಾಗೂ ಕೊಡವ ಭಾಷಿಕ ಜನರಿಗೆ ಮಹಾಮೃತ್ಯುಂಜಯ ದೇವಸ್ಥಾನದ ಪ್ರವೇಶಿಸಲು ಮತ್ತು ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲು ಅಡ್ಡಿಪಡಿಸದಂತೆ ದೇವಸ್ಥಾನದ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.