ಸಾರಾಂಶ
ಬೆಂಗಳೂರು : ಪೂರ್ವಾನುಮತಿ ಪಡೆಯದೆ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರ ಮನೆಗೆ ಭೇಟಿ ನೀಡುವ ಪೊಲೀಸ್ ಅಧಿಕಾರಿ-ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ತಮ್ಮ ಇಲಾಖೆಯ ಘಟಕಗಳ ಮುಖ್ಯಸ್ಥರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಚಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರ ‘ಮೆಮೋ’ ತೀವ್ರ ಚರ್ಚೆ ಹುಟ್ಟು ಹಾಕಿದೆ. ವರ್ಗಾವಣೆ ಲಾಬಿ ಹಿನ್ನೆಲೆಯಲ್ಲಿ ಗೃಹ ಸಚಿವರ ಮನೆಗೆ ಪೊಲೀಸರ ಪ್ರವೇಶಕ್ಕೆ ಡಿಜಿ ನಿರ್ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತಿದಿನ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರ ಮನೆಗೆ ಸಚಿವರ ಕಚೇರಿಯಿಂದ ಪೂರ್ವಾನುಮತಿ ಪಡೆಯದೆ ಪೊಲೀಸರು ಭೇಟಿ ನೀಡಿರುವ ಬಗ್ಗೆ ಮಾಹಿತಿ ಬಂದಿದೆ. ಇದು ಇಲಾಖೆಯ ನಿಯಮ ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿದೆ. ಹೀಗಾಗಿ ಸಚಿವರ ಕಚೇರಿಯಿಂದ ಅನುಮತಿ ಪಡೆಯದೆ ಗೃಹ ಸಚಿವರ ಮನೆಗೆ ಪೊಲೀಸರು ತೆರಳಬಾರದು. ಈ ಬಗ್ಗೆ ತಮ್ಮ ಘಟಕದ ಎಲ್ಲ ಇನ್‌ಸ್ಪೆಕ್ಟರ್ ಹಾಗೂ ಎಸಿಪಿ ಸೇರಿ ಅಧಿಕಾರಿ-ಸಿಬ್ಬಂದಿಗೆ ನಿರ್ದೇಶನ ನೀಡಬೇಕು ಹಾಗೂ ಈ ನಿಯಮ ಉಲ್ಲಂಘಿಸಿ ಮತ್ತೆ ಸಚಿವರ ಮನೆಗೆ ತೆರಳುವವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಘಟಕಗಳ ಮುಖ್ಯಸ್ಥರಿಗೆ ಡಿಜಿಪಿ ಸೂಚಿಸಿ ಮೆಮೋ ಕಳುಹಿಸಿದ್ದಾರೆ.
ವರ್ಗಾವಣೆ ಸಲುವಾಗಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಪರಮೇಶ್ವರ್ ಮನೆಗೆ ಪೊಲೀಸರು ಜಮಾಯಿಸುತ್ತಿದ್ದರು. ಈ ಬಗ್ಗೆ ಡಿಜಿಪಿ ಅವರ ಬಳಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಹೀಗಾಗಿ ಸಚಿವರ ಮನೆಗೆ ಪೊಲೀಸರ ಭೇಟಿ ನಿರ್ಬಂಧಿಸಿದ್ದಾರೆ ಎನ್ನಲಾಗಿದೆ.