ಸಾರಾಂಶ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೈಪಾಸ್ ರಸ್ತೆಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಮ್ಮದು ಐದು ನದಿಗಳು ಹುಟ್ಟುವ ಜಿಲ್ಲೆಯಾಗಿದೆ. ಇಲ್ಲಿ ಪರಿಸರ ಉಳಿಸದೇ ಹೋದರೆ ನದಿ ಮೂಲ ಗಳಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಪರಿಸರ ಕಾಳಜಿಯನ್ನು ಹೊಂದಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಕರೆ ನೀಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛ ಚಾರಿಟಬಲ್ ಟ್ರಸ್ಟ್ ನಿಂದ ನಗರ ಬೈಪಾಸ್ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಜಿಲ್ಲೆ ಪ್ರಪಂಚದಲ್ಲೇ ಭೌಗೋಳಿಕವಾಗಿ ವಿಶಿಷ್ಠವಾದ ಜಿಲ್ಲೆ. ಎರಡನೇ ಸ್ವಿಡ್ಜರ್‌ಲೆಂಡ್ ಎಂದು ಕರೆಯಲಾಗುತ್ತಿದೆ. ಆದರೆ ಇತ್ತೀಚೆಗೆ ಪ್ರವಾಸಿಗರು ಹೆಚ್ಚಾಗಿ ಬಂದು ಪರಿಸರ ಹಾಳಾಗುತ್ತಿದೆ ಎನ್ನುವ ದೂರುಗಳಿವೆ. ಈ ಕಾರಣಕ್ಕೆ ಈಗಾಗಲೇ ಜಿಲ್ಲಾಡಳಿತ, ಹಲವಾರು ಸಂಘ ಸಂಸ್ಥೆಗಳೊಂದಿಗೆ ಚರ್ಚೆ ಮಾಡಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದೆ ಎಂದರು.ಎಲ್ಲವನ್ನೂ ಸಂಘ ಸಂಸ್ಥೆಗಳು, ಸರ್ಕಾರವೇ ನಡೆಸಲಿ ಎಂದುಕೊಳ್ಳುವುದು ಸರಿಯಲ್ಲ. ಸರ್ಕಾರ, ಸ್ಥಳೀಯ ಸಂಸ್ಥೆಗಳು ಪರಿಸರ ಉಳಿಸುವ ನಿಟ್ಟಿನಲ್ಲಿ ಹೊರಡಿಸುವ ಆದೇಶಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ಕರೆ ನೀಡಿದರು.ಹೊಸದಾಗಿ ಮನೆ ನಿರ್ಮಿಸಿಕೊಳ್ಳುವವರು ಕಡ್ಡಾಯವಾಗಿ ಮನೆ ಮುಂದೆ ಒಂದು ಸಸಿ ನೆಡಬೇಕು. ಸೋಲಾರ್ , ಮಳೆ ನೀರು ಕೊಯ್ಲು ಅಳವಡಿಸಬೇಕು ಎನ್ನುವ ನಿರ್ಣಯವನ್ನು ತೆಗೆದುಕೊಂಡಿದ್ದರೂ ಜನರು ಪಾಲಿಸುತ್ತಿಲ್ಲ. ಅಧಿಕಾರಿಗಳು ಸಹ ಗಮನ ಹರಿಸುತ್ತಿಲ್ಲ. ಮುಂದೆ ಯಾರೇ ಮನೆ ನಿರ್ಮಿಸಿದರೂ ಈ ಮೂರೂ ನಿರ್ಣಯಗಳನ್ನು ಕಡ್ಡಾಯವಾಗಿ ಪಾಲಿಸುವಂತಾಗಬೇಕು. ಮಳೆ ನೀರನ್ನು ಹರಿದು ಹೋಗಲು ಬಿಡುವುದು ಸುಲಭ ಆದರೆ ಅದನ್ನು ಶೇಖರಣೆ ಮಾಡಿಕೊಂಡರೆ ಬೋರ್‌ವೆಲ್‌ಗಳು ಮರು ಪೂರಣ ಆಗುತ್ತದೆ. ಬೋರ್‌ವೆಲ್ ಕೊರೆಸಲು ತೋರಿಸುವ ಆಸಕ್ತಿ ಮಳೆ ನೀರು ಕೊಯ್ಲು ಅಳವಡಿಸಲು ತೋರುವುದಿಲ್ಲ. ನೀರು ಸಹ ಇಂದು ಆಸ್ತಿ ಇದ್ದಂತಾಗಿದೆ. ಬೇಕಾ ಬಿಟ್ಟಿ ವ್ಯಯ ಆಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದರು.ಸ್ವಚ್ಛ ಟ್ರಸ್ಟ್‌ನ ಅಧ್ಯಕ್ಷೆ ಡಾ.ಶುಭ ವಿಜಯ್ ಮಾತನಾಡಿ, ಇಡೀ ನಗರವನ್ನು ಹಸಿರೀಕರಣ ಮಾಡಬೇಕು ಎನ್ನುವುದು ಟ್ರಸ್ಟ್‌ನ ಉದ್ದೇಶ. ಬೈಪಾಸ್‌ನ ಒಂದೂವರೆ ಕಿ.ಮೀ.ನಷ್ಟು ಉದ್ದದ ರಸ್ತೆಯಲ್ಲಿ ಸುಮಾರು 300 ರಿಂದ 400 ಗಿಡಗಳನ್ನು ನೆಡಬೇಕು ಎಂದು ತೀರ್ಮಾನಿಸಿದ್ದೇವೆ. ಗಿಡಗಳ ನಿರ್ವಹಣೆಗೆ ಅಕ್ಕ ಪಕ್ಕದ ಅಂಗಡಿ ಮುಂಗಟ್ಟುಗಳ ವರ್ತಕರ ಸಹಕಾರ ಕೋರಿದ್ದೇವೆ. ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆಗಾಗ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆಗೆ ಮನವಿ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸ್ವಚ್ಛ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಗೀತಾ ವೆಂಕಟೇಶ್, ಟ್ರಸ್ಟೀಗಳಾದ ಶುಭಾ ರಾಮೇಗೌಡ, ಪ್ರಣೂಪ ನಾಗರಾಜ್, ಉಮಾ ನಾಗೇಶ್, ಲಕ್ಷ್ಮೀದೇವಮ್ಮ, ಅನುಪಮಾ ಮನ್ಸೂರ್, ವಸಂತ ರಾಮಚಂದ್ರ, ಕೃಷ್ಣವೇಣಿ, ಸೌಜನ್ಯ, ಅಶ್ವಿನ್, ವಸಂತ ಮಂಜುನಾಥ್ ಇದ್ದರು. 10 ಕೆಸಿಕೆಎಂ 2ಚಿಕ್ಕಮಗಳೂರಿನ ಬೈಪಾಸ್ ರಸ್ತೆಯಲ್ಲಿ ಸ್ವಚ್ಛ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿದರು. ಡಾ. ಶುಭಾ ವಿಜಯ್, ಡಾ.ಗೀತಾ ವೆಂಕಟೇಶ್ ಇದ್ದರು.