ಬನದ ಹುಣ್ಣಿಮೆ ಸಂಕ್ರಾಂತಿ ಹಬ್ಬದ ಸಡಗರ

| Published : Jan 14 2025, 01:02 AM IST

ಸಾರಾಂಶ

ಪಟ್ಟಣದ ವ್ಯಾಪಾರ ಕೇಂದ್ರ ಸ್ಥಾನದಲ್ಲಿ ತಾಲೂಕಿನ ವಿವಿಧಡೆಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಗಮಿಸಿದ್ದ ಜನತೆ ಹೂವು, ಹಣ್ಣು ಕಾಯಿ, ಅರಿಶಿಣ ಕುಂಕುಮ ಹಾಗೂ ಎಳ್ಳು ಬೆಲ್ಲ ಮತ್ತು ಕಪ್ಪುಕಬ್ಬಿನ ಜಲ್ಲೆ, ಅವರೆಕಾಯಿ ಖರೀದಿ ಭರಾಟೆ ಜೋರಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣದ ವ್ಯಾಪಾರ ಕೇಂದ್ರ ಸ್ಥಾನದಲ್ಲಿ ತಾಲೂಕಿನ ವಿವಿಧಡೆಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಗಮಿಸಿದ್ದ ಜನತೆ ಹೂವು, ಹಣ್ಣು ಕಾಯಿ, ಅರಿಶಿಣ ಕುಂಕುಮ ಹಾಗೂ ಎಳ್ಳು ಬೆಲ್ಲ ಮತ್ತು ಕಪ್ಪುಕಬ್ಬಿನ ಜಲ್ಲೆ, ಅವರೆಕಾಯಿ ಖರೀದಿ ಭರಾಟೆ ಜೋರಾಗಿ ನಡೆಯಿತು.

ಪಟ್ಟಣಕ್ಕೆ ತಾಲೂಕಿನ ವಿವಿಧ ಗ್ರಾಮಗಳಿಂದ ಖರೀದಿಗಾಗಿ ಬಂದಿದ್ದ ಜನರು ಸಂಕ್ರಾಂತಿ ಹಬ್ಬದ ವಿಶೇಷ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಹಬ್ಬಕ್ಕೆ ಬೇಕಾದ ಪದಾರ್ಥಗಳು ಹಾಗೂ ದವಸ-ಧಾನ್ಯ, ಎಳ್ಳು-ಬೆಲ್ಲ, ಎಲೆ-ಅಡಿಕೆ, ಹೂವು-ಹಣ್ಣು ಮತ್ತು ಇನ್ನಿತರ ಪದಾರ್ಥಗಳ ಬೆಲೆ ಏರಿಕೆ ನಡುವೆಯೂ ಖರೀದಿ ಮಾಡಿದರು. ಗ್ರಾಹಕರು ಸಂಕ್ರಾಂತಿ ಹಬ್ಬಕ್ಕೆ ತಮಿಳುನಾಡಿನ ಕಪ್ಪು ಕಬ್ಬಿನ ಜಲ್ಲೆಯನ್ನು ತಮಿಳುನಾಡಿನಿಂದ ತಂದು ಪಟ್ಟಣದಲ್ಲಿ ಮಾರಾಟ ಮಾಡಿದರು. ಸಾಂಪ್ರದಾಯವಾಗಿ ಪೂಜಾ ಸಾಮಗ್ರಿಗಳು ಹೊಸ ಬಟ್ಟೆ ಇನ್ನಿತರ ಪದಾರ್ಥಗಳನ್ನು ಗ್ರಾಹಕರು ಖರೀದಿ ಮಾಡಿದರು.

ಸೋಮವಾರ ಕಟ್ಟು ಕಾವಲು: ಸಂಕ್ರಾಂತಿ ಹಬ್ಬದ ಪ್ರಾರಂಭದ ದಿನ ವಿಶೇಷವಾಗಿ ಗ್ರಾಮಾಂತರ ಹಾಗೂ ಹಳ್ಳಿಗಳಲ್ಲಿ ಕಟ್ಟು ಕಾವಲು ಸಾಂಪ್ರದಾಯದಂತೆ ಜಮೀನು ಹಳ್ಳತೊರೆಗಳಲ್ಲಿ ಸಿಗುವ ಬೇವಿನ ಸೊಪ್ಪು ಹಾಗೂ ಉತ್ರಾಣಿಕಡ್ಡಿ ಹಾಗೂ ಅಣ್ಣೆ ಸೊಪ್ಪಿನಗೊಂಡೆ ವಿವಿಧ ಬಗೆಯ ಹಸಿರು ಮತ್ತು ಹಳದಿ ಬಣ್ಣದ ಗರಿಗಳನ್ನು ಸಂಗ್ರಹಿಸಿ ಹಬ್ಬಕ್ಕೆ ಮನೆಗಳಲ್ಲಿ ಪೂಜೆ ಸಲ್ಲಿಸಿ ಕಟ್ಟುಕಾವಲು ಪ್ರಾರಂಭದ ದಿನ ಗ್ರಾಮಾಂತರ ಪ್ರದೇಶದಲ್ಲಿ ಹಾಗೂ ಪಟ್ಟಣ ಪ್ರದೇಶದಲ್ಲಿ ಪೂಜೆ ಹಮ್ಮಿಕೊಳ್ಳಲಾಗಿತ್ತು.

ವಿವಿಧ ದೇವಾಲಯಗಳಲ್ಲಿ ಪೂಜೆಗೆ ಸಿದ್ಧತೆ:

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ಹಬ್ಬದ ದಿನ ವಿಶೇಷ ಪೂಜೆಗೆ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಲೆಮಾದೇಶ್ವರ ಬೆಟ್ಟದಲ್ಲಿ ಸಕಲ ಸಿದ್ಧತೆಯೊಂದಿಗೆ ಕ್ರಮ ಕೈಗೊಳ್ಳಲಾಗಿದೆ. ವಿವಿಧ ದೇವಾಲಯಗಳನ್ನು ಸಹ ಬನದ ಹುಣ್ಣಿಮೆ ವಿಶೇಷ ಪೂಜೆಯ ಅಂಗವಾಗಿ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಾಲಯ, ಆಂಜನೇಯಸ್ವಾಮಿ, ಮಾದೇಶ್ವರ ಮೈಸೂರು ಮಾರಮ್ಮನ ವಿವಿಧ ದೇವಾಲಯಗಳಲ್ಲಿ ಹಬ್ಬದ ಪೂಜೆ ಪ್ರಾರಂಭವಾಗಿದೆ.