ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ: ಬಾಳೆಹಣ್ಣು ಕೆಜಿಗೆ ₹15-20ಗೆ ಇದ್ದಿದ್ದು, ದಿಢೀರ್ ಆಗಿ ಕೇವಲ ₹5-6ಕ್ಕೆ ಕುಸಿದಿದ್ದು, ಬಾಳೆ ಬೆಳೆದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಈಗಲೂ ಮಾರುಕಟ್ಟೆಯಲ್ಲಿ ಬಾಳೆಹಣ್ಣಿಗೆ ಉತ್ತಮ ದರವಿದ್ದು, ಬೆಳೆದ ರೈತರಿಗೆ ಸಿಗುತ್ತಿಲ್ಲ, ಗ್ರಾಹಕರಿಗೆ ಬರೆ ತಪ್ಪಿಲ್ಲ, ವ್ಯಾಪಾರಿಗಳು ಮಾತ್ರ ಬರಪೂರ್ ಲಾಭ ಮಾಡಿಕೊಳ್ಳುತ್ತಿದ್ದಾರೆ.ಹೊಲದಲ್ಲಿ ಕಟಾವಿಗೆ ಬಂದಿರುವ ಬಾಳೆ ಬೆಳೆ ಅಲ್ಲಿಯೇ ಹಣ್ಣಾಗಿ ಉದುರುತ್ತಿದೆ. ಹೀಗಾಗಿ, ಎಷ್ಟಕ್ಕಾದರೂ ಸರಿ ಕಡಿದುಕೊಂಡು ಹೋಗಿ ಎಂದು ರೈತರೇ ವ್ಯಾಪಾರಸ್ಥರ ಬಳಿ ದುಂಬಾಲು ಬೀಳುತ್ತಿದ್ದಾರೆ. ಆದರೂ ಬಾಳೆಯನ್ನು ತೆಗೆದುಕೊಂಡು ಹೋಗುವವರು ಮಾತ್ರ ಬರುತ್ತಿಲ್ಲ.
ಕೊಪ್ಪಳ ಜಿಲ್ಲೆಯಾದ್ಯಂತ ಸುಮಾರು 5 ಸಾವಿರ ಹೆಕ್ಟರ್‌ಗೂ ಅಧಿಕ ಬಾಳೆ ಬೆಳೆದಿದ್ದು, ಆ ಎಲ್ಲ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ಎಕರೆ ಬಾಳೆ ಬೆಳೆಯಲು ಒಂದರಿಂದ ಒಂದೂವರೆ ಲಕ್ಷ ಖರ್ಚು ಮಾಡಿದ್ದಾರೆ. ಈಗ ಬೆಳೆದ ಬಾಳೆಹಣ್ಣನ್ನೆಲ್ಲ ಮಾರಿದರೂ ಖರ್ಚು ಮಾಡಿದಷ್ಟು ಹಣ ಬರುವುದಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.ತಗ್ಗದ ದರ: ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಬಾಳೆ ಹಣ್ಣಿನ ದರ ತಗ್ಗಿಯೇ ಇಲ್ಲ. ಗ್ರಾಹಕರಿಗೆ ಈಗಲೂ ₹50-60ಕ್ಕೆ ಡಜನ್ ನಂತೆಯೇ ಬಾಳೆಹಣ್ಣು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ತಗ್ಗದಿದ್ದರೂ ರೈತರಿಂದ ಖರೀದಿಸುವಲ್ಲಿ ಮಾತ್ರ ದರ ಪಾತಳಕ್ಕೆ ಕುಸಿದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಲೂ ಮಾರುಕಟ್ಟೆಯಲ್ಲಿ ಗ್ರಾಹಕರು ದುಬಾರಿಗೆ ಕೊಂಡುಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಎಲ್ಲ ಸೀಜನ್ ನಲ್ಲಿಯೂ ಹಸಿರು ಬಾಳೆ ಡಜನ್‌ಗೆ ₹50-60 ಇದ್ದೇ ಇರುತ್ತದೆ. ಹಬ್ಬದ ಸಂದರ್ಭಗಳಲ್ಲಿ ಮಾತ್ರ ₹70-80ಕ್ಕೆ ಇರುತ್ತದೆ. ಆದರೆ, ಮಧ್ಯವರ್ತಿಗಳು ರೈತರಿಂದ ಯಾಕೆ ಇಷ್ಟೊಂದು ಅಗ್ಗದ ದರದಲ್ಲಿ ಖರೀದಿಸುತ್ತಿದ್ದಾರೆ ಎನ್ನುವುದಕ್ಕೆ ಯಾರ ಬಳಿಯೂ ಉತ್ತರ ಇಲ್ಲ.ರೈತರೇ ಮಾರಾಟ ಮಾಡಲು ಚಿಂತನೆ: ಮಾರುಕಟ್ಟೆಯಲ್ಲಿ ಈಗಲೂ ₹50-60ಕ್ಕೆ ಡಜನ್ ಬಾಳೆಹಣ್ಣು ಮಾರಾಟ ಆಗುತ್ತಿರುವುದರಿಂದ ರೈತರು ತಾವೇ ಹಣ್ಣು ಮಾಡಿ, ಬಿಡಿಯಾಗಿಯೇ ಮಾರಾಟ ಮಾಡಲು ಚಿಂತನೆ ನಡೆಸಿದ್ದಾರೆ.
ತಾಲೂಕಿನ ಡೊಂಬರಳ್ಳಿ ಗ್ರಾಮದ ರೈತರು ಈ ಕುರಿತು ಚರ್ಚೆ ಮಾಡಿದ್ದರು. ನಿತ್ಯವೂ ನಾಲ್ಕಾರು ಲೋಡ್ ಬಾಳೆಹಣ್ಣನ್ನು ಡಜನ್‌ಗೆ ಕೇವಲ ₹20-25ಕ್ಕೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಇಷ್ಟು ದರಕ್ಕೆ ಮಾರಾಟವಾದರೆ ರೈತರಿಗೆ ದೊಡ್ಡ ಲಾಭವಾಗುತ್ತದೆ. ಈ ದರವನ್ನು ನೀಡದೆ ಮಧ್ಯವರ್ತಿಗಳು ಮೋಸ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರ್ಕಾರ ಖರೀದಿಸಲಿ: ಸರ್ಕಾರ ಶಾಲೆಗಳಲ್ಲಿ ಮಕ್ಕಳಿಗೆ ಬಾಳೆಹಣ್ಣನ್ನು ಸಹ ವಿತರಣೆ ಮಾಡುತ್ತದೆ. ಪ್ರತಿ ಬಾಳೆ ಹಣ್ಣಿಗೆ ₹5ರಂತೆ ನೀಡುತ್ತದೆ. ಇದನ್ನು ರೈತರಿಂದಲೇ ಖರೀದಿ ಮಾಡಿದರೆ ರೈತರಿಗೂ ಅನುಕೂಲವಾಗುತ್ತದೆ. ಆಗ ರೈತರಿಗೆ ದೊಡ್ಡ ಲಾಭವಾಗುತ್ತದೆ. ಹೀಗಾಗಿ, ಸರ್ಕಾರ ಶಾಲೆಗಳಲ್ಲಿ ವಿತರಣೆ ಮಾಡುವ ಬಾಳೆ ಹಣ್ಣನ್ನು ನೇರವಾಗಿ ರೈತರಿಂದಲೇ ಖರೀದಿ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.
ಮಾರುಕಟ್ಟೆಯಲ್ಲಿ ಬಾಳೆಹಣ್ಣಿನ ದರ ಕುಸಿದಿಲ್ಲ. ಆದರೆ, ರೈತರಿಂದ ಖರೀದಿಸುವಾಗ ಪಾತಳಕ್ಕೆ ಕುಸಿದಿದೆ. ಕೆಜಿಗೆ ₹15-20ಕ್ಕೆ ಖರೀದಿ ಮಾಡುತ್ತಿದ್ದವರು ಈಗ 5-6 ರುಪಾಯಿಗೆ ಕೆಜಿ ಕೇಳುತ್ತಿದ್ದಾರೆ. ಇದರಿಂದ ಮಾಡಿದ ಖರ್ಚು ಸಹ ಬರುವುದಿಲ್ಲ ಎಂದು ರೈತ ಲಕ್ಷ್ಮಣಗೌಡ ಪೊಲೀಸ್ ಪಾಟೀಲ್ ತಿಳಿಸಿದರು.ಮಾರುಕಟ್ಟೆಯಲ್ಲಿ ಬಾಳೆಹಣ್ಣಿನ ದರ ಪಾತಳಕ್ಕೆ ಕುಸಿದಿದ್ದರಿಂದ ರೈತರೇ ಮಾರಾಟ ಮಾಡಲು ಚಿಂತನೆ ನಡೆಸಿದ್ದಾರೆ. ಈ ಕುರಿತು ಎಲ್ಲರೂ ಚರ್ಚೆ ಮಾಡಿದ್ದೇವೆ ಎಂದು ರೈತ ಹನುಮರಡ್ಡಿ ಕರಡ್ಡಿ ಹೇಳಿದರು.