ಬಂಟಕಲ್ಲು: ‘ಮಿಯೊವಾಕಿ ವನ’ ನಿರ್ಮಾಣಕ್ಕೆ ಚಾಲನೆ

| Published : Jun 25 2024, 12:31 AM IST

ಸಾರಾಂಶ

ಬಂಟಕಲ್ಲು ನಿವಾಸಿ ಆಲ್ಫ್ರೆಡ್ ವಿನ್ಸೆಂಟ್ ಮೋನಿಸ್‌ ಅವರ ಪ್ರಾಯೋಜಕತ್ವದಲ್ಲಿ ಸ್ವಂತ ಭೂಮಿಯಲ್ಲಿ ಇಂದ್ರಪ್ರಸ್ಥ ಅರಣ್ಯೀಕರಣ ಯೋಜನೆಯಡಿಯಲ್ಲಿ ‘ಮಿಯೊವಾಕಿ ವನ’ ನಿರ್ಮಾಣಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಯೋಜನೆಯ ಸಂಪನ್ಮೂಲ ವ್ಯಕ್ತಿ ಕಟಪಾಡಿ ಮಹೇಶ್ ಶೆಣೈ ಗಿಡ ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಬಂಟಕಲ್ಲು ನಿವಾಸಿ ಆಲ್ಫ್ರೆಡ್ ವಿನ್ಸೆಂಟ್ ಮೋನಿಸ್‌ ಅವರ ಪ್ರಾಯೋಜಕತ್ವದಲ್ಲಿ ಸ್ವಂತ ಭೂಮಿಯಲ್ಲಿ ಇಂದ್ರಪ್ರಸ್ಥ ಅರಣ್ಯೀಕರಣ ಯೋಜನೆಯಡಿಯಲ್ಲಿ ‘ಮಿಯೊವಾಕಿ ವನ’ ನಿರ್ಮಾಣಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಯೋಜನೆಯ ಸಂಪನ್ಮೂಲ ವ್ಯಕ್ತಿ ಕಟಪಾಡಿ ಮಹೇಶ್ ಶೆಣೈ ಗಿಡ ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಕಾಡುಗಳು ನಾಶವಾಗುತ್ತಿವೆ. ಜೀವ ಅನಿಲ ಆಮ್ಲಜನಕದ ಪ್ರಮಾಣ ಇಳಿಮುಖವಾಗುತ್ತಿದೆ. ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಅಧಿಕಗೊಳ್ಳುತ್ತಿದೆ. ಮಳೆಗಾಲದಲ್ಲೂ ಸೆಕೆ ಜಾಸ್ತಿ ಆಗುತ್ತಿದೆ. ಉಡುಪಿಯಂತಹ ಕರಾವಳಿ ಭಾಗದಲ್ಲೂ ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ. ಇದಕ್ಕೆಲ್ಲಾ ಪರಿಹಾರವಾಗಿ ‘ಮಿಯೊವಾಕಿ ವನ’ ನಿರ್ಮಾಣವಾಗಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಣಿಪಾಡಿ ರತ್ನಾಕರ ಶೆಟ್ಟಿ ವಹಿಸಿದ್ದರು. ಶಿರ್ವ ಗ್ರಾ.ಪಂ. ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್, ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಾತನಾಡಿದರು.

ಉಪಸ್ಥಿತರಿದ್ದ ಆಸಕ್ತರಲ್ಲಿ ೬೦ಕ್ಕೂ ಅಧಿಕ ಮಂದಿ ‘ಮಿಯೊವಾಕಿ ವನ’ ನಿರ್ಮಾಣಕ್ಕೆ ಸಂಕಲ್ಪ ಮಾಡಿದರು.

ರಾಜೀವನಗರ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಎಸ್.ಎಸ್.ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಆಲ್ಫ್ರೆಡ್ ವಿನ್ಸೆಂಟ್ ಮೋನಿಸ್ ವಂದಿಸಿದರು...............

ಏನಿದು ಮಿಯವಾಕಿ ವನ?

ಕನಿಷ್ಟ ಅರ್ಧ ಸೆಂಟ್ಸ್ ಜಾಗ ಇದ್ದರೂ ಈ ಮಾದರಿ ಕಾಡು ನಿರ್ಮಾಣ ಮಾಡಬಹುದು. ಒಂದು ಸೆಂಟ್ಸ್, ಐದು ಸೆಂಟ್ಸ್ ಜಾಗದಲ್ಲೂ ‘ಮಿಯೊವಾಕಿ ವನ’ ನಿರ್ಮಿಸಬಹುದಾಗಿದೆ. ಜಪಾನ್ ದೇಶದ ಸಸ್ಯಶಾಸ್ತ್ರಜ್ಞ ಡಾ.ಅಖೀರಾ ಮಿಯೊವಾಕಿ ಈ ಅರಣ್ಯ ವಿಧಾನವನ್ನು ಪ್ರಾರಂಭಿಸಿದರು. ಈ ವಿಧಾನದಲ್ಲಿ ಗಿಡಕ್ಕೆ ಕೇವಲ ೧೮ ತಿಂಗಳ ನಿರಂತರ ಆರೈಕೆ ನೀಡಿದರೆ ಸಾಕು. ಕೇವಲ ಹತ್ತು ವರ್ಷದಲ್ಲಿ ಸಸಿಗಳು ಹತ್ತುಪಟ್ಟು ವೇಗದಲ್ಲಿ ಬೆಳೆದು ಅರಣ್ಯವಾಗುತ್ತದೆ. ಆಸಕ್ತರಿಗೆ ಉಚಿತ ಮಾಹಿತಿ, ತರಬೇತಿ ನೀಡಲಾಗುವುದು ಎಂದು ಮಹೇಶ್ ಶೆಣೈ ಹೇಳಿದರು.