ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಕೆಡಿಪಿ ಸಭೆಗೆ ಮುತ್ತಿಗೆ ಎಚ್ಚರಿಕೆ

| Published : Jun 25 2024, 12:31 AM IST

ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಕೆಡಿಪಿ ಸಭೆಗೆ ಮುತ್ತಿಗೆ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮಸ್ಯೆ ಬಗೆಹರಿಸಲಿಲ್ಲ ಎಂದರೆ ಇತಿಹಾಸ ನಿರ್ಮಾಣ ಮಾಡುವ ಚಳವಳಿ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಾವೇರಿ

ರೈತರ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟಿಸಿ ನೀಡಲಾಗಿದ್ದ ಗಡುವು ಮುಗಿದರೂ ಈ ವರೆಗೆ ಯಾವೊಬ್ಬ ಜನಪ್ರತಿನಿಧಿಯೂ ಸ್ಪಂದಿಸಿಲ್ಲ. ಜು. ೨ರೊಳಗಾಗಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಅಂದು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಕೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಕೇಂದ್ರ ಸರ್ಕಾರ ಎಂಎಸ್‌ಪಿ ಪ್ರಕಾರ ಬೆಳೆಗಳಿಗೆ ದರ ನಿಗದಿ ಮಾಡಿದ್ದು, ಹೇಳಿಕೆಗಳಿಗೆ ಮಾತ್ರ ಸಿಮೀತವಾಗಿದೆ. ಅಲ್ಲದೆ ಬೆಳೆಗಳಿಗೆ ದರ ನಿಗದಿ ಕೂಡ ಅವೈಜ್ಞಾನಿಕವಾಗಿದೆ. ಗೋವಿನಜೋಳ ಖರೀದಿ ಕೇಂದ್ರ ತೆರೆದಿಲ್ಲ. ಹೆಸರಿಗೆ ಮಾತ್ರ ಏಕೆ ಜಾರಿಗೆ ಎಂದು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದ ಅವರು, ಎಂಎಸ್‌ಪಿಗೆ ಕಾನೂನಾತ್ಮಕ ರೂಪ ನೀಡಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ನಿರಂತರ ೧೩ ತಿಂಗಳ ಹೋರಾಟ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ ಎಂದರು.

ಎನ್‌ಡಿಆರ್‌ಎಫ್ ನಿಯಮದನ್ವಯ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಷ್ಟೇ ಬರ ಪರಿಹಾರವನ್ನು ರಾಜ್ಯ ಸರ್ಕಾರ ಎಸ್‌ಡಿಆರ್‌ಎಫ್ ಅಡಿಯಲ್ಲಿ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ೧೦ ಸಾವಿರಕ್ಕೂ ಅಧಿಕ ರೈತರ ಬಾಕಿ ಬರ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕು. ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಹಲವು ಬಾರಿ ಮನವಿ ಮಾಡಲಾಗಿದೆ. ರೈತರ ಬೇಡಿಕೆಗಳನ್ನು ಈಗಲಾದರೂ ಈಡೇರಿಸದಿದ್ದಲ್ಲಿ ಎಲ್ಲ ಸರ್ಕಾರಿ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ಘೋಷಿಸಿದರು.

ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ರೈತರ ಬೆಳೆಗಳಿಗೆ ನಿಗದಿಯಾಗಿರುವ ಎಂಎಸ್‌ಪಿ ದರ ಕುಸಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಕೃಷಿ ಪರಿಕರಗಳ ದರ ಹೆಚ್ಚಳವಾಗುತ್ತವೆ. ತಾಂತ್ರಿಕ ದೋಷದ ಹೆಸರಲ್ಲಿ ಹತ್ತು ಸಾವಿರಕ್ಕೂ ಅಧಿಕ ರೈತರಿಗೆ ಈ ವರೆಗೆ ಬರ ಪರಿಹಾರ ಬಂದಿಲ್ಲ. ಜನಪ್ರತಿನಿಧಿಗಳಿಗೆ ಈ ಬಗ್ಗೆ ಅರಿವು ಇಲ್ಲ ಅನಿಸುತ್ತದೆ. ಬರಗಾಲದ ಪರಿಸ್ಥಿತಿಯಲ್ಲಿ ರೈತರು ಸಂಕಷ್ಟದಲ್ಲಿದ್ದು, ₹೮೫೦೦ ನೀಡುವ ಬದಲು ₹೨೫ ಸಾವಿರ ಪರಿಹಾರ ನೀಡಬೇಕು. ಅಲ್ಲದೇ ಜಿಲ್ಲೆಯ ಹಾಲು ಒಕ್ಕೂಟ ಹಾಲಿನ ದರವನ್ನು ಎರಡು ರು. ಕಡಿತಗೊಳಿಸಿರುವುದು ತಪ್ಪು. ಜು. ೨ರ ವರೆಗೆ ಕಾಲಾವಕಾಶ ಕೊಡುತ್ತೇವೆ. ಸಮಸ್ಯೆ ಬಗೆಹರಿಸಲಿಲ್ಲ ಎಂದರೆ ಇತಿಹಾಸ ನಿರ್ಮಾಣ ಮಾಡುವ ಚಳವಳಿ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಪ್ರಮುಖರಾದ ಶಿವಬಸಪ್ಪ ಗೋವಿ, ಸುರೇಶ ಚಲವಾದಿ, ಎಚ್.ಎಚ್. ಮುಲ್ಲಾ, ಮರಿಗೌಡ ಪಾಟೀಲ, ಶಿವಯೋಗಿ ಹೊಸಗೌಡ್ರ ಇತರರು ಇದ್ದರು.