ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಜನರ ಕ್ಷಮೆ ಕೇಳಲಿ

| Published : Jun 25 2024, 12:31 AM IST

ಸಾರಾಂಶ

ನಗರದಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಕಚೇರಿಗೆ ಕರಾಳ ದಿನದ ಪೋಸ್ಟರ್ ಅಂಟಿಸುವ ಹೋರಾಟ ಸೋಮವಾರ ನಡೆಸಿದರು.

ಕನ್ನಡಪ್ರಭ ವಾರ್ತೆ ತುಮಕೂರುನಗರದಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಕಚೇರಿಗೆ ಕರಾಳ ದಿನದ ಪೋಸ್ಟರ್ ಅಂಟಿಸುವ ಹೋರಾಟ ಸೋಮವಾರ ನಡೆಸಿದರು.ನಗರದ ಭದ್ರಮ್ಮ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದ ಬಿಜೆಪಿ ಮುಖಂಡರು ಕರಾಳ ದಿನದ ಪೋಸ್ಟರ್ ಹಿಡಿದು ಸಮೀಪದಲ್ಲೇ ಇದ್ದ ಕಾಂಗ್ರೆಸ್ ಕಚೇರಿಯತ್ತ ನುಗ್ಗಿದರು. ಸ್ಥಳದಲ್ಲಿದ್ದ ಪೊಲೀಸರು ಬಿಜೆಪಿ ಮುಖಂಡರನ್ನು ತಡೆದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಬಿಗಡಾಯಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ದರು.ಕಾಂಗ್ರೆಸ್‌ನ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರಿ ಜನಸಮಾನ್ಯರಿಗೆ ಸಂಕಷ್ಟ ತಂದೊಡ್ಡಿದ್ದರು. ಕಾಂಗ್ರೆಸ್‌ನ ಈ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ನೀತಿಯನ್ನು ಭಾರತೀಯರು ಎಂದೂ ಮರೆಯಲು ಸಾಧ್ಯವಿಲ್ಲ. ಪ್ರತಿ ವರ್ಷ ಜೂನ್ 25 ಬಂದರೆ ರಾಷ್ಟ್ರದ ಇತಿಹಾಸಕ್ಕೆ ಅಂಟಿದ ಕಪ್ಪು ಛಾಯೆ ನೆನಪಾಗುತ್ತದೆ. ಆದರೆ ಕಾಂಗ್ರೆಸ್‌ಗೆ ಇದರ ಬಗ್ಗೆ ಎಳ್ಳಷ್ಟೂ ಪಶ್ಚಾತಾಪವಿಲ್ಲ. ಕಾಂಗ್ರೆಸ್ ಪಕ್ಷ ದೇಶದ ಜನರ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ಪ್ರಧಾನ ಕಾರ್ಯದರ್ಶಿ ಸಂದೀಪ್‌ಗೌಡ, ಗಂಗರಾಜು, ಎಸ್.ಪಿ.ಚಿದಾನಂದ್, ರಾಜ್ಯ ಬಿಜೆಪಿ ವಕ್ತಾರ ಎಚ್.ಎನ್.ಚಂದ್ರಶೇಖರ್, ಬಿಜೆಪಿ ನಗರ ಅಧ್ಯಕ್ಷ ಹನುಮಂತರಾಜು, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಆಂಜನಪ್ಪ, ನಗರ ಅಧ್ಯಕ್ಷ ಹನುಮಂತರಾಯಪ್ಪ, ನಗರ ಪಾಲಿಕೆ ಮಾಜಿ ಸದಸ್ಯರಾದ ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಮುಖಂಡರಾದ ಪುಟ್ಟರಾಜು, ಬೆಳ್ಳಿ ಲೋಕೇಶ್, ಗಣೇಶ್‌ಪ್ರಸಾದ್, ಪುರುಷೋತ್ತಮ್, ಗಂಗಾಧರ್, ವೆಂಕಟೇಶಾಚಾರ್, ನಂದಿನಾಥ್, ಲತಾ, ರವಿ ಭಾಗವಹಿಸಿದ್ದರು.