ಸಾರಾಂಶ
ಹೊಸಕೋಟೆಯ ಸ್ಯಾಟಲೈಟ್ ರಿಂಗ್ ರೋಡ್ ಇಂಟರ್‌ಚೇಂಜ್‌ನಿಂದ (ಎಸ್‌ಟಿಆರ್‌ಆರ್) ಚೆನ್ನೈವರೆಗಿನ ಒಟ್ಟು 280 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ವೇ ಈ ವರ್ಷ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಾಮಗಾರಿ ಪೂರ್ಣಗೊಂಡು ಅಧಿಕೃತವಾಗಿ ಉದ್ಘಾಟನೆಯಾದ ಬಳಿಕ ಟೋಲ್ ಶುಲ್ಕ ವಿಧಿಸಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ. ಬ್ರಹ್ಮಂಕರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ದಕ್ಷಿಣ ಭಾರತದ ಎರಡು ಪ್ರಮುಖ ಮಹಾನಗರಗಳನ್ನು ಕೇವಲ ಮೂರ್ನಾಲ್ಕು ಗಂಟೆಯೊಳಗೆ ಸಂಪರ್ಕಿಸುವ ಬಹುನಿರೀಕ್ಷೆಯ ನಾಲ್ಕು ಪಥಗಳ ‘ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ’ನ ಕರ್ನಾಟಕ ಭಾಗದ 71 ಕಿ.ಮೀ. ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.ಅನಧಿಕೃತವಾಗಿ ಸಂಚಾರಕ್ಕೆ ಮುಕ್ತಗೊಳಿಸಿರುವುದರಿಂದ ಸದ್ಯ ಟೋಲ್ ಶುಲ್ಕ ಇರುವುದಿಲ್ಲ. ರಸ್ತೆ ಮಾರ್ಗಸೂಚಕ ಫಲಕಗಳು, ಎಚ್ಚರಿಕೆ ಚಿಹ್ನೆಗಳು, ಡಿಜಿಟಲ್ ಫಲಕಗಳು ಅಳವಡಿಸುವುದು ಸೇರಿ ಎಕ್ಸ್‌ಪ್ರೆಸ್‌ವೇನ ಕರ್ನಾಟಕ ಭಾಗದ ಬಹುತೇಕ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಹೊಸಕೋಟೆಯ ಸ್ಯಾಟಲೈಟ್ ರಿಂಗ್ ರೋಡ್ ಇಂಟರ್‌ಚೇಂಜ್‌ನಿಂದ (ಎಸ್‌ಟಿಆರ್‌ಆರ್) ಚೆನ್ನೈವರೆಗಿನ ಒಟ್ಟು 280 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ವೇ ಈ ವರ್ಷ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಾಮಗಾರಿ ಪೂರ್ಣಗೊಂಡು ಅಧಿಕೃತವಾಗಿ ಉದ್ಘಾಟನೆಯಾದ ಬಳಿಕ ಟೋಲ್ ಶುಲ್ಕ ವಿಧಿಸಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ. ಬ್ರಹ್ಮಂಕರ್ ತಿಳಿಸಿದರು.ಈ ಎಕ್ಸ್‌ಪ್ರೆಸ್‌ವೇ ಗೆ ಮಾಲೂರು, ಬಂಗಾರಪೇಟೆ ಮತ್ತು ಆಂಧ್ರಪ್ರದೇಶ ಗಡಿಯ ಸುಂದರಪಾಳ್ಯದಲ್ಲಿ ಮೂರು ಇಂಟರ್‌ಚೇಂಜ್ ಇವೆ. ವಾಹನಗಳ ಗರಿಷ್ಠ ವೇಗ 100 ಕಿ.ಮೀ. ನಿಗದಿಪಡಿಸಲಾಗಿದೆ. ಎಕ್ಸ್‌ಪ್ರೆಸ್‌ವೇ ಬಳಸುವವರು ಸಂಚಾರ ನಿಯಮಗಳನ್ನು ಪಾಲಿಸಬೇಕು. ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಕರ್ನಾಟಕ ಭಾಗದ ಮಾರ್ಗ ಮಾತ್ರ ಪೂರ್ಣಗೊಂಡಿರುವ ಕಾರಣ ವಾಹನ ಸವಾರರು ಸೂಕ್ತ ಯೋಜನೆಯೊಂದಿಗೆ ಪ್ರಯಾಣ ಬೆಳೆಸಬೇಕು ಎಂದು ಅವರು ತಿಳಿಸಿದ್ದಾರೆ.
2023ರಲ್ಲಿ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. 2024ರ ಅಕ್ಟೋಬರ್ ವೇಳೆಗೆ 280 ಕಿ.ಮೀ. ಉದ್ದದ ಕಾಮಗಾರಿ ಪೂರ್ಣಗೊಳಿಸುವ ಗುರಿ ನೀಡಲಾಗಿತ್ತು. ಕಾಮಗಾರಿ ವಿಳಂಬವಾದ ಕಾರಣ ಈ ವರ್ಷದ ಡಿಸೆಂಬರ್‌ಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.