ಶಾಲೆಗೆ ನವೀನ ಸ್ಪರ್ಶ ನೀಡಿದ ಬೆಂಗಳೂರಿನ ಭರವಸೆ ಬಳಗ

| Published : Nov 13 2024, 12:01 AM IST

ಸಾರಾಂಶ

ಸರ್ಕಾರದ ಜೊತೆಗೆ ಸಮಾಜ ಸೇವಕರು, ಭರವಸೆ ಟ್ರಸ್ಟ್ ನಂತಹ ಸಂಘ, ಸಂಸ್ಥೆಗಳು ಸಹಕಾರ ನೀಡಿದರೆ ಶಾಲೆಗಳು ಅಭಿವೃದ್ಧಿಯಾಗಲು ಸಾಧ್ಯ .

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

69ನೇ ಕನ್ನಡ ರಾಜ್ಯೋತ್ಸವ ಹಾಗೂ ಹಿರಿಯ ನಟ ದಿ.ಶಂಕರ್ ನಾಗ್ ಹುಟ್ಟುಹಬ್ಬದ ಪ್ರಯುಕ್ತ ತಾಲೂಕಿನ ಕರೋಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಬೆಂಗಳೂರಿನ ಭರವಸೆ ಬಳಗ ಹೊಸದಾಗಿ ಸುಣ್ಣ, ಬಣ್ಣ ಬಳಿದು ಹಾಗೂ ಸ್ವಾತ್ಯಂತ್ರಕ್ಕಾಗಿ ಹೋರಾಡಿದ ಮಹನೀಯರ ಭಾವಚಿತ್ರ ಬಿಡಿಸಿ ನವೀನ ಸ್ಪರ್ಶ ನೀಡಿದೆ.

ಭರವಸೆ ಬಳಗದ ಪ್ರಮುಖ ಸದಸ್ಯ ಸುನಿಲ್ ಗೌಡ ಮಾತನಾಡಿ, ಟ್ರಸ್ಟ್ ಮೂಲಕ ಹಲವು ಸಮಾಜಮುಖಿ ಕಾರ್ಯಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಸರ್ಕಾರಿ ಶಾಲೆ ಉಳಿವಿಗಾಗಿ ಶಾಲೆಗಳಿಗೆ ಸುಣ್ಣ, ಬಣ್ಣವನ್ನು ಬಳಿಸುವ ಕಾಯಕ ಕೈಗೊಂಡಿದ್ದೇವೆ ಎಂದರು.

ಶಾಲಾ ಮುಖ್ಯ ಶಿಕ್ಷಕ ಮಂಜೇಗೌಡ ಮಾತನಾಡಿ, ಸರ್ಕಾರದ ಜೊತೆಗೆ ಸಮಾಜ ಸೇವಕರು, ಭರವಸೆ ಟ್ರಸ್ಟ್ ನಂತಹ ಸಂಘ, ಸಂಸ್ಥೆಗಳು ಸಹಕಾರ ನೀಡಿದರೆ ಶಾಲೆಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ತಿಳಿಸಿದರು.

ಮುಖಂಡ ಪುಟ್ಟೇಗೌಡ ಮಾತನಾಡಿ, ಗ್ರಾಮದ ಶಾಲಾ ಕಟ್ಟಡ ಕಳೆದ 15 ವರ್ಷದಿಂದ ಸುಣ್ಣಬಣ್ಣ ಕಾಣದೇ ಹಳೆಯದಾಗಿತ್ತು. ಬೆಂಗಳೂರಿನ ಭರವಸೆ ಬಳಗ ಸುಣ್ಣ, ಬಣ್ಣ ಬಳಿದು ಸರ್ಕಾರಿ ಶಾಲೆಯನ್ನು ಸುಂದರಗೊಳಿಸಿ ಹೊಸ ವಿನ್ಯಾಸ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಕ್ಕಳನ್ನು ಆಕರ್ಷಿಸಲು ಕೆಲವೊಂದು ಬಣ್ಣ ಬಣ್ಣದ ಚಿತ್ತಾರವನ್ನು ಶಾಲೆ ಗೋಡೆ ಹಾಗೂ ಕಾಂಪೌಂಡ್ ಮೇಲೆ ಬಿಡಿಸಿದ್ದಾರೆ. ರಾಷ್ಟ್ರ ಮತ್ತು ರಾಜ್ಯದ ಮಹನೀಯರ ಭಾವಚಿತ್ರ ಸೇರಿ ಹಲವು ಚಿತ್ರ ಹಾಗೂ ಸಂದೇಶಗಳನ್ನು ಶಾಲೆ ಗೋಡೆ ಮೇಲೆ ಕುಂಚದಿಂದ ಸೃಷ್ಟಿಸಿದ ಭರವಸೆಯ ಬಳಗದ ಸದಸ್ಯರಿಗೆ ಗ್ರಾಮಸ್ಥರು, ಶಾಲಾ ಎಸ್.ಡಿ.ಎಂ.ಸಿ ವತಿಯಿಂದ ಅಭಿನಂದಿಸಲಾಯಿತು.

ಎನ್ ಜಿಒ ಭರವಸೆ ಪ್ರಮುಖ ಸದಸ್ಯರಾದ ಅನುಷ, ಸುನಿಲ್,ಮಂಜೇಶ್, ಅಭಿಷೇಕ್, ಯೋಗೇಶ್, ಆರ್ಶಿತ್, ಪೂಜಾ, ಮನೀಶ್, ನಿಷತ್, ಗ್ರಾಪಂ ಸದಸ್ಯ ಅನಿಲ್, ಎಸ್ ಡಿಎಂಸಿ ಅಧ್ಯಕ್ಷ ಶೇಖರ್, ರೈತ ಮುಖಂಡ ಕರೋಟಿ ತಮ್ಮಯ್ಯ, ಪುಟ್ಟೇಗೌಡ, ಅಂಗಡಿ ರಮೇಶ್ ಸೇರಿದಂತೆ ಉಪಸ್ಥಿತರಿದ್ದರು.