ಬಂಗಾರು ಹನುಮಂತ ಪರ ವೈ.ಎಂ. ಕೌಶಿಕ್ ಬಿರುಸಿನ ಪ್ರಚಾರ

| Published : Nov 09 2024, 01:19 AM IST

ಸಾರಾಂಶ

ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಹಿತ ಕಾಯಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ.

ಬಳ್ಳಾರಿ: ಸಂಡೂರು ಉಪ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಪುತ್ರ ವೈ.ಎಂ. ಕೌಶಿಕ್ ಬಿಜೆಪಿ ಅಭ್ಯರ್ಥಿ ಪರ ಸಂಡೂರು ಪಟ್ಟಣದಲ್ಲಿ ಬಿರುಸಿನ ಪ್ರಚಾರ ನಡೆಸಿ, ಮತದಾನಕ್ಕೆ ಮನವಿ ಮಾಡಿದರು.ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಹಿತ ಕಾಯಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ದೇಶದ ಸುಭದ್ರತೆಗೆ ಹೆಚ್ಚಿನ ಒತ್ತು ನೀಡಿದೆ. ಭಾರತವು ವಿಶ್ವಗುರುವನ್ನಾಗಿಸುವ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನು ಚುನಾಯಿಸುವ ಮೂಲಕ ರಾಷ್ಟ್ರಪ್ರೇಮ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವುದರಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ ಸಾಧ್ಯವಾಗಲಿದೆ. ಪ್ರತಿ ಹಳ್ಳಿಗಳಲ್ಲೂ ಮೂಲ ಸೌಕರ್ಯಗಳನ್ನು ಕಲ್ಪಿಸಲು ಹಾಗೂ ಜನರ ಆಶೋತ್ತರಗಳಿಗೆ ಸ್ಪಂದಿಸಲು ಸಹಕಾರಿಯಾಗಲಿದೆ ಎಂದರು.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಅನೇಕ ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಹಿತ ಕಾಯಲು ಯಡಿಯೂರಪ್ಪ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದರು. ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಹ ಸಮರ್ಥ ನಾಯಕರಾಗಿದ್ದು ತಂದೆಯಂತೆಯೇ ಜನಪರ ಕೆಲಸಕ್ಕಾಗಿ ತುಡಿಯುತ್ತಿದ್ದಾರೆ. ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ಬಂಗಾರು ಹನುಮಂತು ಅವರಿಗೆ ಮತ ನೀಡಿ, ಆಶೀರ್ವದಿಸಿ ಗೆಲ್ಲಿಸಿದಲ್ಲಿ ನರೇಂದ್ರ ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಂಬಲಿಸಿದಂತಾಗುತ್ತದೆ ಎಂದು ವೈ.ಎಂ.ಕೌಶಿಕ್ ಮತದಾರರಲ್ಲಿ ಮನವಿ ಮಾಡಿದರು. ಪಟ್ಟಣದ ಮನೆಮನೆಗೆ ತೆರಳಿ ಪ್ರಚಾರ ಕೈಗೊಂಡ ಕೌಶಿಕ್ ಅವರು ಸಂಡೂರಿನಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಲಿದೆ ಎಂದರು.

ಬಿಜೆಪಿ ಮಹಿಳಾ ಮೋರ್ಚಾದ ಹಂಪಿ ರಮಣ, ಭಾಗ್ಯಮ್ಮ, ಸ್ಥಳೀಯ ಮುಖಂಡರಾದ ಪ್ರಕಾಶ್ ಗೌಡ, ನಾಗರಾಜ್ ಇನ್ನಿತರ ಮುಖಂಡರು -ಕಾರ್ಯಕರ್ತರು ಉಪಸ್ಥಿತರಿದ್ದರು.