ಬ್ಯಾಂಕ್‌ಗಳಲ್ಲಿ ಕನ್ನಡ ಗೊತ್ತಿರುವ ಅಧಿಕಾರಿಗಳನ್ನು ನೇಮಿಸಿ : ಸಂಸದ ಕೋಟ ಶ್ರೀನಿವಾಸ ಪೂಜಾರಿ,

| Published : Nov 09 2024, 01:19 AM IST / Updated: Nov 09 2024, 09:23 AM IST

ಬ್ಯಾಂಕ್‌ಗಳಲ್ಲಿ ಕನ್ನಡ ಗೊತ್ತಿರುವ ಅಧಿಕಾರಿಗಳನ್ನು ನೇಮಿಸಿ : ಸಂಸದ ಕೋಟ ಶ್ರೀನಿವಾಸ ಪೂಜಾರಿ,
Share this Article
  • FB
  • TW
  • Linkdin
  • Email

ಸಾರಾಂಶ

ರಜತಾದ್ರಿಯ ಜಿಲ್ಲಾಡಳಿತ ಕೇಂದ್ರದ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾ ಅಗ್ರಣಿ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ಪಿಎಂ ವಿಶ್ವಕರ್ಮ ಯೋಜನೆ, ಸ್ವನಿಧಿ, ಮುದ್ರಾ ಮತ್ತು ಕೇಂದ್ರ ಸರ್ಕಾರದ ಇತರ ಸಾಲ ಯೋಜನೆಗಳ ಸಂಪರ್ಕ ಕಾರ್ಯಕ್ರಮ ನಡೆಯಿತು.

  ಮಣಿಪಾಲ :  ರಾಷ್ಟ್ರೀಕೃತ ಬ್ಯಾಂಕ್‌ಗಳು ಜನಸಾಮಾನ್ಯರ ಬ್ಯಾಂಕ್‌ಗಳಾಗಬೇಕು. ಆದರೆ ಬ್ಯಾಂಕ್‌ಗಳಲ್ಲಿ ಪರಭಾಷಿಕ ಸಿಬ್ಬಂದಿಯಿಂದ ಸಾಮಾನ್ಯ ಜನರು ದೂರವಾಗುತ್ತಿದ್ದಾರೆ. ಆದ್ದರಿಂದ ಕನ್ನಡ ಭಾಷೆ ಗೊತ್ತಿರುವ ಸಿಬ್ಬಂದಿಯನ್ನು ನೇಮಿಸಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬ್ಯಾಂಕ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ಅವರು ಶುಕ್ರವಾರ ಇಲ್ಲಿನ ರಜತಾದ್ರಿಯ ಜಿಲ್ಲಾಡಳಿತ ಕೇಂದ್ರದ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾ ಅಗ್ರಣಿ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ನಡೆದ ಪಿಎಂ ವಿಶ್ವಕರ್ಮ ಯೋಜನೆ, ಸ್ವನಿಧಿ, ಮುದ್ರಾ ಮತ್ತು ಕೇಂದ್ರ ಸರ್ಕಾರದ ಇತರ ಸಾಲ ಯೋಜನೆಗಳ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಸಂಸದರು ಪಿಎಂ ವಿಶ್ವಕರ್ಮ ಯೋಜನೆಯಡಿ ಸಾಲ ಮಂಜೂರಾತಿ ಪತ್ರಗಳನ್ನು, ಕೌಶಲಾಭಿವೃದ್ಧಿ ಪ್ರಮಾಣ ಪತ್ರವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಸಾಂಪ್ರದಾಯಿಕ ಉದ್ಯೋಗವನ್ನು ಮಾಡುತ್ತಿರುವವರಿಗೆ ತರಬೇತಿ ನೀಡಿ ಕೌಶಲ್ಯವನ್ನು ಉನ್ನತೀಕರಿಸುವುದು ಈ ಯೋಜನೆಯ ಉದ್ದೇಶ. ಕೌಶಲ್ಯಾಭಿವೃದ್ಧಿ ಹೊಂದುವುದರೊಂದಿಗೆ ಇನ್ನೂ ನಾಲ್ಕು ಮಂದಿಗೆ ಉದ್ಯೋಗ ನೀಡಬೇಕು ಎನ್ನುವುದು ಈ ಯೋಜನೆಯ ಗುರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ, ಸುರೇಶ್ ಶೆಟ್ಟಿ, ಜಿ.ಪಂ. ಮುಖ್ಯ‌ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ್ ಹೇರೂರು, ಕೆನರಾ ಬ್ಯಾಂಕ್‌ ಮಹಾಪ್ರಬಂಧಕ ಜಯಪ್ರಕಾಶ್‌ ಮೊದಲಾದವರು ಇದ್ದರು.

ಕಾರ್ಯಕ್ರಮವನ್ನು ಪ್ರಶಾಂತ್ ಹಾವಂಜೆ ನಿರೂಪಿಸಿದರು. ಅಗ್ರಣಿ ಬ್ಯಾಂಕ್ ಪ್ರಬಂಧಕ ಹರೀಶ್ ಸ್ವಾಗತಿಸಿದರು.  

ಉಡುಪಿ ಜಿಲ್ಲೆಯಲ್ಲಿ 17,000 ಅರ್ಜಿ ಸಲ್ಲಿಕೆ

ಈ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 17 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿ, 6,338 ಅರ್ಜಿಗಳು ರಾಜ್ಯ ಸಮಿತಿಯಿಂದ ಅನುಮೋದನೆಗೊಂಡಿವೆ. 9 ನೋಂದಾಯಿತ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತಿದೆ.

ಉದ್ಯೋಗ ಸೃಜನಾ ಯೋಜನೆಯಡಿ 203 ಫಲಾನುಭವಿಗಳಿಗೆ 2113.22 ಲಕ್ಷ ರು., ಮುದ್ರಾ ಯೋಜನೆಯಡಿ 18521 ಫಲಾನುಭವಿಗಳಿಗೆ 306.42 ಕೋಟಿ ರು. ಸಾಲ ವಿತರಿಸಲಾಗಿದೆ. ಸ್ವನಿಧಿ ಯೋಜನೆಯಡಿ ಪ್ರಥಮ ಹಂತದಲ್ಲಿ 4690 ಫಲಾನುಭವಿಗಳಿಗೆ 4.68 ಕೋಟಿ ರು., ದ್ವಿತೀಯ ಹಂತದಲ್ಲಿ 2853 ಫಲಾನುಭವಿಗಳಿಗೆ 5.70 ಕೋಟಿ ರು., ತೃತೀಯ ಹಂತದಲ್ಲಿ 845 ಫಲಾನುಭವಿಗಳಿಗೆ 5.70 ಕೋಟಿ ಸಾಲ ಮಂಜೂರಾಗಿದೆ ಎಂದು ಸಂಸದರು ಹೇಳಿದರು.