ಸಾರಾಂಶ
ಪ್ರೊಫೆಸರ್ ಬಸವನಾಳ ಅವರು ಬಾಳಿದ್ದು ಅಲ್ಪಕಾಲೀಕ. ಆದರೆ ಸಾಧನೆ ಮಾತ್ರ ದೊಡ್ಡದು. ನಡೆ-ನುಡಿಯಲ್ಲಿ ಸತ್ಯ ಶುದ್ಧತೆ ಅವರಲ್ಲಿತ್ತು. ಪತ್ರಿಕಾ ಸಂಪಾದಕರಾಗಿ ಕೆಲಕಾಲ ಬದ್ಧತೆಯಿಂದ ಕಾರ್ಯ ನಿರ್ವಹಿಸಿದರು.
ಧಾರವಾಡ:
ಪ್ರೊಫೆಸರ್ ಶಿ.ಶಿ. ಬಸವನಾಳ ಕನ್ನಡದ ಬಹುದೊಡ್ಡ ವಿದ್ವಾಂಸರು. ಶಿಕ್ಷಣ, ಪತ್ರಿಕೋದ್ಯಮ ಹಾಗೂ ಸಮಾಜ ಸೇವೆಗೆ ಸಲ್ಲಿಸಿದ ಕೊಡುಗೆ ಸ್ಮರಣೀಯ ಎಂದು ಹಿರಿಯ ಸಂಗೀತಗಾರ ಡಾ. ಮೃತ್ಯುಂಜಯ ಶೆಟ್ಟರ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ಕೆಎಲ್‌ಇ ಸಂಸ್ಥೆಯ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊ. ಶಿ.ಶಿ. ಬಸವನಾಳ ದತ್ತಿಯಲ್ಲಿ ‘ಶಿ. ಶಿ. ಬಸವನಾಳರ ಜೀವನ ಹಾಗೂ ಸಾಧನೆ’ ಕುರಿತು ಮಾತನಾಡಿದರು.
ಕೆಎಲ್‌ಇ ಸಂಸ್ಥೆ ಸ್ಥಾಪಕ ಸಪ್ತರ್ಷಿಗಳಲ್ಲಿ ಅವರೊಬ್ಬರು. ಬಸವನಾಳ ಅವರು ಬಹುಭಾಷಾ ಪಂಡಿತರಾಗಿದ್ದರು. ವೀರಶೈವ ಲಿಂಗಾಯತ ಸಮುದಾಯದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಮಹಾನುಭಾವರು. ಅನೇಕ ಕೃತಿಗಳ ಸಂಪಾದನೆ ಮಾಡಿದ ಅವರು ವಚನ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಸ್ಮರಣೀಯ ಎಂದರು.ಶ್ರೇಷ್ಠ ಶಿಕ್ಷಣ ತಜ್ಞರಾದ ಅವರು ಶಿಕ್ಷಣದಿಂದ ಮಾತ್ರ ಏನೆಲ್ಲಾ ಸಾಧಿಸಬಹುದೆಂಬ ಭಾವನೆಯಿಂದ ಇಂದು ಅದೇ ಕೆಎಲ್‌ಇ ಸಂಸ್ಥೆ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಸಂಸ್ಥೆಯಾಗಿದೆ. ಪ್ರೊಫೆಸರ್ ಬಸವನಾಳ ಅವರು ಬಾಳಿದ್ದು ಅಲ್ಪಕಾಲೀಕ. ಆದರೆ ಸಾಧನೆ ಮಾತ್ರ ದೊಡ್ಡದು. ನಡೆ-ನುಡಿಯಲ್ಲಿ ಸತ್ಯ ಶುದ್ಧತೆ ಅವರಲ್ಲಿತ್ತು. ಪತ್ರಿಕಾ ಸಂಪಾದಕರಾಗಿ ಕೆಲಕಾಲ ಬದ್ಧತೆಯಿಂದ ಕಾರ್ಯ ನಿರ್ವಹಿಸಿದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿದರು. ಡಾ. ಮೃತ್ಯುಂಜಯ ಶೆಟ್ಟರ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಲ್ಲಮಪ್ರಭು ಕಡಕೋಳ ತಬಲ, ಪರಶುರಾಮ ಕಟ್ಟಿಸಂಗಾವಿ ಹಾರ್ಮೋನಿಯಂ ಸಾತ್ ನೀಡಿದರು. ದತ್ತಿದಾನಿ ರವೀಂದ್ರ ಬಸವನಾಳ ಇದ್ದರು. ಪ್ರಾಚಾರ್ಯ ವೀರೇಶ ಅಂಗಡಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀಶೈಲ ತುಂಗಳ ನಿರೂಪಿಸಿದರು, ವೀರಣ್ಣ ಒಡ್ಡಿನ ವ೦ದಿಸಿದರು.