ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಬಾಂಗ್ಲಾದೇಶದಿಂದ ಭಾರತದ ಗಡಿ ನುಸುಳಿ ಬಂದಂತಹ ಅಕ್ರಮ ವಲಸಿಗರು ಅರಸೀಕೆರೆ ತಾಲೂಕು ಒಂದರಲ್ಲೆ ಮೂರರಿಂದ ಮೂರೂವರೆ ಸಾವಿರದಷ್ಟು ಮತದಾರರಾಗಿದ್ದಾರೆ. ಇಂತಹ ನುಸುಳುಕೋರರಿಗೆ ನಕಲಿ ದಾಖಲೆ ಸೃಷ್ಟಿಸಿ ಆಧಾರ್ ನೋಂದಣಿ ಮಾಡುತ್ತಿರುವ ಜಾಲದ ಮೂಲವನ್ನು ಮೊದಲು ಪತ್ತೆಹಚ್ಚಿ ಇಷ್ಟು ದೊಡ್ಡ ದೇಶದ್ರೋಹಿ ಜಾಲಕ್ಕೆ ಕಡಿವಾಣ ಹಾಕಬೇಕೆಂದು ಜೆಡಿಎಸ್ ಪಕ್ಷದ ಮುಖಂಡ ಎನ್.ಆರ್. ಸಂತೋಷ್ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಹಾಸನ ನಗರದ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟದಲ್ಲೇ ಇರುವ ಆಧಾರ್ ನೋಂದಣಿ ಕೇಂದ್ರದಲ್ಲಿಯೇ ಬಾಂಗ್ಲಾದೇಶದ ವಲಸಿಗರಿಗೆ ನಕಲಿ ದಾಖಲೆ ಮೂಲಕ ಆಧಾರ್ ಕಾರ್ಡ್ ನೀಡುತ್ತಿರುವ ಬಗ್ಗೆ ಪತ್ತೆಯಾಗಿದೆ. ಪುಡಿಗಾಸಿನ ಆಸೆಗೆ ದೇಶದ್ರೋಹಿಗಳು ಇಂತಹ ಕೆಲಸ ಮಾಡುತ್ತಿದ್ದಾರೆ. ಇದೆಲ್ಲಾ ನೋಡಿದರೇ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ವೈಫಲ್ಯತೆ ಎದ್ದು ಕಾಣುತ್ತದೆ. ೨೦೦೮ರಿಂದ ಇಲ್ಲಿವರೆಗೂ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಯಾವ ಒತ್ತಡಕ್ಕೂ ಮಣಿಯದೆ ನಕಲಿ ದಾಖಲೆ ಸೃಷ್ಠಿಸಿ ಆಧಾರ್ ಕಾರ್ಡ್ ಪಡೆದಿರುವವರನ್ನು ಕೂಡಲೇ ಅನರ್ಹಗೊಳಿಸಬೇಕು. ಜೊತೆಗೆ ಈ ಗಂಭೀರ ವಿಚಾರವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಕೊಟ್ಟು ತನಿಖೆ ಮಾಡಿಸಿ ಇದರ ಹಿಂದೆ ಇರುವ ದೊಡ್ಡ ಜಾಲವನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು. ಅರಸೀಕೆರೆಯ ನಗರಸಭೆಯಲ್ಲಿ ಅಧ್ಯಕ್ಷರಾಗಿ ಒಬ್ಬ ಮಹಾಶಯ ಕುಳಿತಿದ್ದು, ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿಯೇ ಗೆದ್ದು ಇದೀಗ ಪಕ್ಷ ವಿರೋಧಿ ಕೆಲಸ ಮಾಡಿರುವ ಸದಸ್ಯರನ್ನು ಅನರ್ಹ ಮಾಡುವಂತೆ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಎಸ್. ಲಿಂಗೇಶ್ ಅವರು ಉಪವಿಭಾಗಾಧಿಕಾರಿಗೆ ಪತ್ರ ಬರೆದಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಪಕ್ಷ ವಿರೋಧಿ ಕೆಲಸ ಮಾಡಿರುವ ಸದಸ್ಯರನ್ನು ಅನರ್ಹಗೊಳಿಸಬೇಕು ಎಂದು ಮನವಿ ಮಾಡಿದರು.
ಜೆಡಿಸ್ ಪಕ್ಷದಿಂದ ಓರ್ವ ಅಭ್ಯರ್ಥಿಯನ್ನು ಗುರುತಿಸಿ ಅಧ್ಯಕ್ಷರನ್ನಾಗಿ ಮಾಡುವ ಸಂಬಂಧ ಸಭೆ ಕರೆಯಲಾಗಿದ್ದರೂಆಗಮಿಸಲಿಲ್ಲ ಹಾಗೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡು ಪಕ್ಷ ವಿರೋಧಿ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಪಾರದರ್ಶಕವಾಗಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಜೆಡಿಎಸ್‌ನಲ್ಲೆ ಇದ್ದು ಜೆಡಿಎಸ್ ಸದಸ್ಯನಿಗೆ ಬೆಂಬಲ ಸೂಚಿಸಿದ್ದೇವೆ ಎಂದು ಹೇಳುವ ಸದಸ್ಯರು ಇತ್ತೀಚೆಗೆ ರಾಷ್ಟ್ರೀಯ ನಾಯಕರದ ಎಚ್ ಡಿ ದೇವೇಗೌಡರು ಹಾಸನಕ್ಕೆ ಆಗಮಿಸಿದಾಗ ಏಕೆ ಭೇಟಿ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದರೊಂದಿಗೆ ಶಿವಲಿಂಗೇಗೌಡರ ಅಣತಿಯಂತೆ ಈ ಸದಸ್ಯರು ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅರಸೀಕೆರೆಯ ರಾಮಸ್ವಾಮಿ, ಗ್ರಾಪಂ ಸದಸ್ಯ ಉಮೇಶ್, ಯಾದವ ಸಮಾಜದ ನಾಯಕರಾದ ಮಹೇಶ್ ಇತರರು ಉಪಸ್ಥಿತರಿದ್ದರು.