ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯೊಳಗೆ ವಲಸಿಗರ ಹೆಸರಿನಲ್ಲಿ ಬಾಂಗ್ಲಾದೇಶಿಯರು ನಲೆಸಿದ್ದಾರೆ. ನಾಗಮಂಗಲ ತಾಲೂಕಿನಲ್ಲೇ ಎರಡು ಸಾವಿರಕ್ಕೂ ಹೆಚ್ಚು ಬಾಂಗ್ಲಾ ದೇಶದವರು ವಾಸಿಸುತ್ತಿದ್ದು, ಈ ಬಗ್ಗೆ ಸಮಗ್ರವಾಗಿ ತನಿಖೆ ನೆಡಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ ಆರೋಪಿಸಿದರು.

ಬಾಂಗ್ಲಾ ದೇಶಿಯರು ಅಕ್ರಮವಾಗಿ ನೆಲೆಸಿರುವ ಬಗ್ಗೆ ಚುನಾವಣಾ ಆಯೋಗ, ಪೊಲೀಸ್ ಮಹಾನಿರ್ದೇಶಕರು, ಜಿಲ್ಲಾ ಪೊಲೀಸ್ ಅಧೀಕ್ಷಕರು ಸೇರಿದಂತೆ ಹಲವರಿಗೆ ದೂರು ನೀಡಿದ್ದೇನೆ. ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉತ್ತರ ಭಾರತದ ಹಲವು ರಾಜ್ಯಗಳ ವಾಸಿಗಳೆಂದು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಾಸಸ್ಥಳ ದೃಢೀಕರಣ ಪತ್ರಗಳನ್ನು ಸೃಷ್ಟಿಸಿಕೊಂಡಿದ್ದು, ಈ ದಾಖಲಾತಿಗಳನ್ನು ಮುಂದಿಟ್ಟುಕೊಂಡು ಪೊಲೀಸರು ಜನನ ಪ್ರಮಾಣ ಪತ್ರ, ಶಾಲಾ ದಾಖಲಾತಿಗಳನ್ನು ಪರಿಶೀಲಿಸಿದಾಗ ಇವರು ಬಾಂಗ್ಲಾ ದೇಶದ ವಲಸಿಗರೆಂಬುದು ದೃಢಪಟ್ಟಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಅದೇ ಮಾದರಿಯಲ್ಲಿ ನಾಗಮಂಗಲ ತಾಲೂಕಿನ ಸ್ಟಾರ್ ಚಿಕನ್ ಇವರ ಸಂಸ್ಥೆಗಳಲ್ಲಿ ಕೆಲವು ಬಾಂಗ್ಲಾ ದೇಶಿಯರು ಕೆಲಸ ಮಾಡುತ್ತಿರುವುದಾಗಿ ಮಾಹಿತಿದಾರೊಬ್ಬರು ಮೌಖಿಕವಾಗಿ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ನಾಗಮಂಗಲ ಉಪ ವಿಭಾಗದ ಡಿವೈಎಸ್ಪಿ ಅವರಿಗೆ ಸೂಚಿಸಲಾಗಿತ್ತು. ಸ್ಟಾರ್ ಚಿಕನ್ ರವರ ಸಮೂಹ ಸಂಸ್ಥೆಗಳಿಗೆ ಖುದ್ದು ಭೇಟಿ ನೀಡಿ ಕೂಲಿ ಕಾರ್ಮಿಕರ ಆಧಾರ್ ಕಾರ್ಡ್‌ಗಳನ್ನು ಪಡೆದು ಮಾತ್ರ ಪರಿಶೀಲಿಸಲಾಗಿರುತ್ತದೆ. ಆಧಾರ್ ಕಾರ್ಡ್‌ಗಳ ಪರಿಶೀಲನೆಯಿಂದ ಬೇರೆ ರಾಜ್ಯದವರೆಂದು ತಿಳಿದು ಬಂದಿದೆ. ಗುಪ್ತ ಮಾಹಿತಿ ಪ್ರಕಾರ ಇವರೆಲ್ಲರೂ ಬಾಂಗ್ಲಾದೇಶಿಯರು ಎಂಬ ಮಾಹಿತಿ ಇರುವುದಾಗಿ ದೂರಿದರು.

ಸತ್ತ ವ್ಯಕ್ತಿಯ ಹೆಸರಿನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡು ಸರ್ಕಾರಿ ಜಮೀನನ್ನು ಪರಭಾರೆ ಮಾಡಿರುವ ಹಾಗೂ ಅಕ್ರಮ ಖಾತೆ ಮಾಡಿರುವ, ಸತ್ತ ವ್ಯಕ್ತಿಯ ಹೆಸರಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿ ಆಸ್ತಿ ಪರಭಾರೆ ಮಾಡಿರುವ ಪ್ರಕರಣಗಳೂ ಕಣ್ಣಮುಂದಿವೆ. ಅವರ ಬಳಿ ಇರುವ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್‌ಗಳೇ ಅಂತಿಮ ದಾಖಲೆಯಲ್ಲ. ಅದರಿಂದ ಹೊರಕ್ಕೂ ಜನನ ಪ್ರಮಾಣಪತ್ರ, ಶಾಲಾ ದಾಖಲಾತಿಗಳನ್ನು ಪರಿಶೀಲಿಸಬೇಕಿರುವುದು ಅನಿವಾರ್ಯವಾಗಿದೆ ಎಂದು ಹೇಳಿದರು.


ಕುಸಿದ ಕಾನೂನು ಸುವ್ಯವಸ್ಥೆ:

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಅಪರಾಧ ಪ್ರಕರಣಗಳು ಹೆಚ್ಚಿವೆ. ಕೊಲೆ-ಸುಲಿಗೆ ಪ್ರಕರಣಗಳೂ ಸಹ ಅತಿಯಾಗಿವೆ. ಇತ್ತೀಚೆಗೆ ಟ್ರಕ್ ಚಾಲಕನ ಮೇಲೆ ಶೂಟೌಟ್ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಆದರೂ ಪೊಲೀಸ್ ಅಧಿಕಾರಿಗಳು ಅಪರಾಧಗಳ ತಡೆಗೆ ದಿಟ್ಟತನ ತೋರದಿರುವುದು ಅಪರಾಧಿಗಳಿಗೆ ಇಂತಹ ಕೃತ್ಯಗಳನ್ನು ಮತ್ತಷ್ಟು ನಡೆಸಲು ಪ್ರೇರಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶಿಯರನ್ನು ಗುರುತಿಸಿ ಹೊರಹಾಕುವುದು ದೇಶದ ಭದ್ರತೆ ದೃಷ್ಟಿಯಿಂದಲೂ ಅಗತ್ಯವಾಗಿದೆ ಎಂದರು.

ಆಯಾ ರಾಜ್ಯಗಳ ಡಿಜಿಗಳಿಗೆ ಪತ್ರ: ಡಾ.ವಿ.ಶೋಭಾರಾಣಿ

ಪೊಲೀಸ್ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿ ಇರುವಂತೆ ಬಾಂಗ್ಲಾದೇಶಿಯರು ಯಾರೂ ನಮ್ಮ ಜಿಲ್ಲೆಯಲ್ಲಿ ಇಲ್ಲ. ಉತ್ತರ ಭಾರತದ ಹಲವು ರಾಜ್ಯದವರು ಇಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಜಿಲ್ಲಾಧಿಕಾರಿಯವರ ಆದೇಶದಂತೆ ನಾಗಮಂಗಲ ತಾಲೂಕಿನ ಕೋಳಿಫಾರಂ, ಫೀಡ್ಸ್ ಕಾರ್ಖಾನೆ ಸೇರಿದಂತೆ ಇನ್ನಿತರ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವವರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿಳಾಸ, ಪಾನ್‌ಕಾರ್ಡ್, ಶಾಲಾ ದಾಖಲಾತಿಗಳನ್ನು ಸಂಗ್ರಹಿಸಲಾಗುತ್ತಿದೆ. ಆ ಮಾಹಿತಿಯನ್ನು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಮೂಲಕ ಆಯಾ ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕರಿಗೆ ಕಳುಹಿಸಿ ಅವರು ನೀಡಿರುವ ಮಾಹಿತಿ ಸರಿಯಾಗಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲಾಗುವುದು. ಒಂದು ವೇಳೆ ವ್ಯತ್ಯಾಸ ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಆರಕ್ಷಕ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದರು.