ಉಪನಗರ ರೈಲ್ವೆ ಚುರುಕಿಗೆ ಬ್ಯಾಂಕ್‌ ಸಲಹೆ

| Published : Jun 21 2024, 02:01 AM IST / Updated: Jun 21 2024, 08:04 AM IST

ಸಾರಾಂಶ

 ಉಪನಗರ ರೈಲ್ವೆ ಯೋಜನೆಯನ್ನು ಚುರುಕುಗೊಳಿಸಲು ಬೆಂಗಳೂರು ಮೆಟ್ರೋಪಾಲಿಟನ್ ಭೂಸಾರಿಗೆ ಪ್ರಾಧಿಕಾರವನ್ನು (ಬಿಎಂಎಲ್‌ಟಿಎ) ಸಕ್ರಿಯಗೊಳಿಸಿ ಅದರ ನೆರವು ಪಡೆಯಬೇಕೆಂದು ಕರ್ನಾಟಕ ರೈಲ್ವೇ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆ-ರೈಡ್‌) ಸಾಲ ನೀಡುತ್ತಿರುವ ಅಂತಾರಾಷ್ಟ್ರೀಯ ಬ್ಯಾಂಕ್‌ಗಳು ಸಲಹೆ ನೀಡಿವೆ.

 ಬೆಂಗಳೂರು : ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು (ಬಿಎಸ್‌ಆರ್‌ಪಿ) ಚುರುಕುಗೊಳಿಸಲು ಬೆಂಗಳೂರು ಮೆಟ್ರೋಪಾಲಿಟನ್ ಭೂಸಾರಿಗೆ ಪ್ರಾಧಿಕಾರವನ್ನು (ಬಿಎಂಎಲ್‌ಟಿಎ) ಸಕ್ರಿಯಗೊಳಿಸಿ ಅದರ ನೆರವು ಪಡೆಯಬೇಕೆಂದು ಕರ್ನಾಟಕ ರೈಲ್ವೇ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆ-ರೈಡ್‌) ಸಾಲ ನೀಡುತ್ತಿರುವ ಅಂತಾರಾಷ್ಟ್ರೀಯ ಬ್ಯಾಂಕ್‌ಗಳು ಸಲಹೆ ನೀಡಿವೆ.

ಕೆ-ರೈಡ್, ಕೆಎಫ್‌ಡಬ್ಲ್ಯೂ ಅಭಿವೃದ್ಧಿ ಬ್ಯಾಂಕ್, ಜರ್ಮನಿ ಮತ್ತು ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (ಇಐಬಿ) ಪಾಲುದಾರಿಕೆಯಲ್ಲಿ ಕೈಗೆತ್ತಿಕೊಂಡಿರುವ ಬಿಎಸ್‌ಆರ್‌ಪಿಗೆ ಸಾಲದ ನೆರವಿನ ಕುರಿತಂತೆ ನಗರದಲ್ಲಿ ನಡೆದ ಮೂರು ದಿನಗಳ ಪರಿಶೀಲನಾ ಸಭೆಯಲ್ಲಿ ಅಂತಾರಾಷ್ಟ್ರೀಯ ಬ್ಯಾಂಕುಗಳು ಈ ಅಭಿಪ್ರಾಯ ವ್ಯಕ್ತಪಡಿಸಿವೆ.

ಕೈಗಾರಿಕೆ, ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ, ‘ಬಿಎಸ್‌ಆರ್‌ಪಿ ಯೋಜನೆ 148 ಕಿ.ಮೀ. ಉಪನಗರ ರೈಲು ಯೋಜನೆಯಾಗಿದೆ. ದೇಶದ ಮುಂದಿನ ಎಲ್ಲಾ ಉಪನಗರ ರೈಲು ಯೋಜನೆಗಳಿಗೆ ಮೇಲ್ಪಂಕ್ತಿಯಾಗಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಯೋಜನಾ ಪರಿಶೀಲನಾ ತಂಡವು, ಅಭಿವೃದ್ಧಿ ಆಯುಕ್ತರಾದ ಡಾ। ಶಾಲಿನಿ ರಜನೀಶ್ ಜೊತೆಗೆ ಸಂವಾದ ನಡೆಸಿತು. ಈ ವೇಳೆ ಇಐಬಿ ತಂಡದ ಅಧಿಕಾರಿ ಏಂಜಲಿಕಿ ಕೊಪ್ಸಶೆಲ್ಲಿ, ‘ಉಪನಗರ ರೈಲ್ವೇ ಯೋಜನೆಯು ಮಾದರಿ ಯೋಜನೆಯಾಗಿದೆ. ಈ ಯೋಜನೆ ಬಲವರ್ಧನೆಗೆ ಬಿಎಂಎಲ್‌ಟಿಎ ಯನ್ನು ಪುನಃ ಸಕ್ರಿಯಗೊಳಿಸಿ ಅದರ ನೆರವು ಪಡೆಯಬೇಕು ಎಂದರು.

ಕೆಎಫ್ ಡಬ್ಲ್ಯೂ ಅಭಿವೃದ್ಧಿ ಬ್ಯಾಂಕ್ ಮತ್ತು ಯುರೋಪಿಯನ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ (ಇಐಬಿ) ಹಿರಿಯ ಅಧಿಕಾರಿಗಳು ಬಿಎಸ್‌ಆರ್‌ಪಿ ಕಾಮಗಾರಿ ನಡೆಯುತ್ತಿರುವ ಕೇಂದ್ರೀಯ ವಿದ್ಯಾಲಯ, ಮತ್ತಿಕೆರೆ, ಜಯರಾಮ ಸ್ಲಮ್ ಕಾಲೋನಿ ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣ ಜಾಗಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.

ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕಿ ಡಾ। ಎನ್.ಮಂಜುಳಾ ಇದ್ದರು.