ಬ್ಯಾಂಕ್ ವಸೂಲಾತಿಗೆ ಕಠಿಣ ಕ್ರಮ ಕೈಗೊಳ್ಳಬಾರದು: ಡಿಸಿ ಮೀನಾ ನಾಗರಾಜ್
KannadaprabhaNewsNetwork | Published : Oct 28 2023, 01:15 AM IST
ಬ್ಯಾಂಕ್ ವಸೂಲಾತಿಗೆ ಕಠಿಣ ಕ್ರಮ ಕೈಗೊಳ್ಳಬಾರದು: ಡಿಸಿ ಮೀನಾ ನಾಗರಾಜ್
ಸಾರಾಂಶ
ಬ್ಯಾಂಕ್ ವಸೂಲಾತಿಗೆ ಕಠಿಣ ಕ್ರಮ ಕೈಗೊಳ್ಳಬಾರದು: ಡಿಸಿ ಮೀನಾ ನಾಗರಾಜ್
ಡಿಸಿ ಕಚೇರಿಯಲ್ಲಿ ಕಾಫಿ ಬೆಳೆಗಾರರ ಹಾಗೂ ಬ್ಯಾಂಕ್ ಅಧಿಕಾರಿಗಳ ಸಭೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ರೈತರ ಸಂಕಷ್ಟದ ಸಮಯದಲ್ಲಿ ಬ್ಯಾಂಕ್‌ಗಳು ಕಠಿಣವಾದ ವಸೂಲಾತಿ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಬ್ಯಾಂಕ್ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಫೆಸಿ ಆಕ್ಟ್- 2002 ನಂತೆ ಈಗಿನ ಬರಗಾಲದ ಪರಿಸ್ಥಿತಿಯಲ್ಲಿ ತೀವ್ರ ವಸೂಲಾತಿ ಕ್ರಮ ಕೈಗೊಳ್ಳದಂತೆ ಬ್ಯಾಂಕಿನವರಿಗೆ ಸೂಚಿಸಿದರಲ್ಲದೆ, ಸ್ನೇಹ ಪರವಾಗಿ ವರ್ತಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದರು. ಸಾಲ ಮೇಳದಲ್ಲಿ ಘರ್-ಘರ್ ಕಿಶಾನ್ ಕ್ರೆಡಿಟ್ ಕಾರ್ಡ್ ವಿತರಿಸಬೇಕು. ಅಲ್ಲದೆ ಪ್ರಧಾನ ಮಂತ್ರಿ ಅವಾಸ್ ಯೋಜನೆ ಯಡಿ ಮಂಜೂರಾದ ಅರ್ಹ ನಾಗರಿಕರಿಗೆ ಸಾಲ ವಿತರಣೆ ಮಾಡಬೇಕು. ಈ ಯೋಜನೆಯಲ್ಲಿ ಈಗಾಗಲೇ 650 ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಿರುವುದಕ್ಕೆ ಬ್ಯಾಂಕ್‌ನವರನ್ನು ಶ್ಲಾಘಿಸಿ ಅಭಿನಂದಿಸಿದರು. ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಎಚ್.ಟಿ. ಮೋಹನ್ ಕುಮಾರ್ ಮಾತನಾಡಿ, ಇಂದಿನ ಬರಗಾಲ ಪರಿಸ್ಥಿತಿಯಲ್ಲಿ ರೈತರಿಂದ ಸಾಲ ವಸೂಲಾತಿ ಕ್ರಮ ಕೈಗೊಳ್ಳಬಾರದು, ಒಟಿಎಸ್ ನಲ್ಲಿ ರೈತರ ಸಾಲ ಕ್ಲಿಯರ್ ಮಾಡಿಸಿ ಮರು ಸಾಲದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಕರ್ನಾಟಕ ರಾಜ್ಯ ರೈತ ಹಾಗೂ ಗ್ರೀನ್ ಆರ್ಮಿ ಇಂಡಿಯಾದ ಸಿ.ಟಿ.ತುಳಸಿ ಗೌಡ ಮಾತನಾಡಿ, ಸರ್ಫೆಸಿ ಕಾಯ್ದೆಯನ್ನು ರದ್ದು ಪಡಿಸಬೇಕು. ಖಾಸಗಿ ಕಂಪನಿಗಳಂತೆ ಬ್ಯಾಂಕ್‌ಗಳು ಗುಂಡಾ ಪ್ರವೃತ್ತಿ ಬಿಟ್ಟು ರೈತರ ಪರವಾಗಿ ಮಾನವೀಯತೆ ಯಿಂದ ನಡೆದು ಕೊಳ್ಳಬೇಕು ಎಂದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುರೇಶ್ ಮಾತನಾಡಿ, ಈಗಿನ ಬರಗಾಲದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಲ ವಸೂಲಾತಿ ಬಗ್ಗೆ ತೀವ್ರ ಕ್ರಮ ಕೈಗೊಳ್ಳದಂತೆ ಸಂಬಂಧಪಟ್ಟ ಬ್ಯಾಂಕಿನ ಮೇಲಾಧಿಕಾರಿಗಳಿಗೆ ಮನವಿ ಮಾಡುವಂತೆ ಸಭೆಯಲ್ಲಿ ಹಾಜರಿದ್ದ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರಲ್ಲದೆ ಒಟಿಎಸ್ ಯೋಜನೆಯಲ್ಲಿ ಆದ್ಯತೆಯುಳ್ಳ ಎಲ್ಲಾ ರೈತರಿಗೆ ಮರು ಸಾಲ ಕೊಡಬೇಕೆಂದು ತಿಳಿಸಿ ಸಭೆಯಲ್ಲಿ ಚರ್ಚಿಸಿದ ಮಾಹಿತಿಯನ್ನು ಎಸ್‌ಎಲ್‌ಬಿಸಿ ಹಾಗೂ ಎಲ್ಲಾ ಬ್ಯಾಂಕುಗಳ ವರಿಷ್ಠಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು. ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮ, ಕರ್ನಾಟಕ ಬೆಳೆಗಾರರ ಒಕ್ಕೂಟದ ಖಜಾಂಚಿ ಎಚ್.ಎಂ. ಉಮೇಶ್, ವಸ್ತಾರೆ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಡಿ.ಮಲ್ಲೇಶ್, ಆವುತಿ ಬೆಳೆಗಾರರ ಸಂಘದ ಶ್ರೀಧರ್, ಕೆಜಿಎಫ್ ಮಾಜಿ ಅಧ್ಯಕ್ಷ ಜೈರಾಂ ಹಾಗೂ ಜಿಲ್ಲೆ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು. 27 ಕೆಸಿಕೆಎಂ 4 ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಸಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಕಾಫಿ ಬೆಳೆಗಾರರ ಹಾಗೂ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಯಿತು.