ಬ್ಯಾಂಕರ್‌ಗಳು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಿ

| Published : Sep 25 2025, 01:03 AM IST

ಬ್ಯಾಂಕರ್‌ಗಳು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯ ಎಲ್ಲ ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ಎಲ್ಲ ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನಡೆದ ಬ್ಯಾಂಕ್ ಸುರಕ್ಷತೆ ಹಾಗೂ ಭದ್ರತಾ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಜನರು ತಮ್ಮ ಹಣ, ಆಭರಣಗಳನ್ನು ಸುರಕ್ಷತೆ ದೃಷ್ಟಿಯಿಂದ ಬ್ಯಾಂಕ್‌ನಲ್ಲಿಡುತ್ತಾರೆ. ಅವರ ವಸ್ತುಗಳ ಸುರಕ್ಷತೆ ಬ್ಯಾಂಕ್‌ ಜವಾಬ್ದಾರಿ. ಆರ್‌ಬಿಐ ನಿಯಮದನ್ವಯ ಗ್ರಾಹಕರ ವಸ್ತುಗಳ ಸುರಕ್ಷತೆ ಒದಗಿಸುವುದು ಅತ್ಯವಶ್ಯಕ ಹಾಗೂ ಸುರಕ್ಷತೆ ಪ್ರಮುಖವಾಗಿದೆ. ಜನರ ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಲು ಭದ್ರತಾ ವ್ಯವಸ್ಥೆ ಕುರಿತಂತೆ ನಿರ್ಲಕ್ಷ್ಯ ವಹಿಸದೆ ಎಸ್‌ಒಪಿ ಹಾಗೂ ಆರ್‌ಬಿಐ ನಿರ್ದೇಶನಗಳನ್ನು ಪಾಲಿಸಬೇಕು. ಬ್ಯಾಂಕ್ ವ್ಯವಸ್ಥಾಪಕರು ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಇತ್ತೀಚೆಗೆ ಕಳ್ಳತನ, ದರೋಡೆ ಪ್ರಕರಣಗಳು ನಡೆದಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಯಕೊಳ್ಳಬೇಕು. ಬ್ಯಾಂಕ್‌ಗಳು ಲಾಕರ್ ವ್ಯವಸ್ಥೆ, ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಗಳ ನಿಯೋಜನೆ ಹಾಗೂ ಭದ್ರತಾ ಸಿಬ್ಬಂದಿಗಳಿಗೆ ತುರ್ತು ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಸೂಕ್ತ ತರಬೇತಿ ನೀಡಬೇಕು. ಸಿಸಿಟಿವಿ ಅಳವಡಿಕೆ, ಸ್ಟ್ರಾಂಗ್‌ರೂಂ ಮತ್ತು ನಗದು ವಾಹನಗಳಿಗೆ ಡಬಲ್ ಲಾಕಿಂಗ್-ಡಿಜಿಟಲ್ ಲಾಕ್ ವ್ಯವಸ್ಥೆ, ಬ್ಯಾಂಕ್ ಆವರಣ ಹಾಗೂ ಎಟಿಎಂ ಆವರಣಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ಹಣ ಮತ್ತು ಆಭರಣಗಳಿಗಾಗಿ ಸುರಕ್ಷಿತ ಸೇಫ್ ಲಾಕರ್ ವ್ಯವಸ್ಥೆ ಮತ್ತು ಬ್ಯಾಂಕ್‌ಗಳಲ್ಲಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಯನ್ನು ಮತ್ತು 112 ನಂಬರ್‌ನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶನ ಮಾಡಬೇಕು. ಗ್ರಾಹಕರಿಗೆ ಸೈಬರ್ ವಂಚನೆಯ ಕುರಿತು ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸಬೇಕು. ಕಳ್ಳತನದ ಸೂಚನೆ ಬಂದಲ್ಲಿ ಕೂಡಲೇ ಸೈರನ್-ಅಲಾರಾಂ ಒತ್ತಿ ಪೊಲೀಸರಿಗೆ ಮಾಹಿತಿ ನೀಡುವ ವ್ಯವಸ್ಥೆಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಸಾರ್ವಜನಿಕರ ವಿಶ್ವಾಸ ಬ್ಯಾಂಕ್‌ನಲ್ಲಿದ್ದು ಭದ್ರತಾ ಹಾಗೂ ಸುರಕ್ಷತೆಗೆ ಒತ್ತು ನೀಡಬೇಕು. ಯಾವುದೇ ಭದ್ರತಾ ಲೋಪ ಆಗದಂತೆ ಸುರಕ್ಷತಾ ಕ್ರಮ ಅನುಸರಿಸಬೇಕು ಎಂದು ಹೇಳಿದರು.

ಎಸ್ಪಿ ಲಕ್ಷ್ಮಣ ನಿಂಬರಗಿ, ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪ ವಿಭಾಗಾಧಿಕಾರಿ ಅನುರಾಧ ವಸ್ತ್ರದ, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಸಿದ್ದಯ್ಯ.ಬಿ, ಡಿವೈಎಸ್ಪಿ ಬಸವರಾಜ ಯಲಿಗಾರ ಸೇರಿ ಬ್ಯಾಂಕ್‌ಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು.