- ಮೈಕ್ರೋಫೈನಾನ್ಸ್- ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳ ಸಭೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಣಕಾಸು ಸಂಸ್ಥೆಗಳಿಗೆ ಲಾಭ ಗಳಿಕೆ ಜೊತೆಗೆ ಸಾರ್ವಜನಿಕರು ಮತ್ತು ಗ್ರಾಹಕರ ಹಿತಾಸಕ್ತಿ ಜೊತೆಗೆ ವಸೂಲಾತಿಯಲ್ಲಿ ನಿಯಮಗಳ ಪಾಲನೆ ಮುಖ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಮೈಕ್ರೋಫೈನಾನ್ಸ್, ಖಾಸಗಿ ಬ್ಯಾಂಕಿಂಗ್ ಸಂಸ್ಥೆಯ ಮುಖ್ಯಸ್ಥರಿಗೆ ಸೂಚಿಸಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮೈಕ್ರೋಫೈನಾನ್ಸ್ ಮತ್ತು ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.


ಸಾಲದ ಕರಾರು ಪತ್ರಗಳು, ನಿಯಮಗಳು, ಕೀ ಫ್ಯಾಕ್ಟ್ ಸ್ಟೇಟ್‌ಮೆಂಟ್ ಹಾಗೂ ಷರತ್ತುಗಳನ್ನು ಗ್ರಾಹಕರಿಗೆ ಅವರ ಪ್ರಾದೇಶಿಕ ಭಾಷೆಯಲ್ಲೇ (ಕನ್ನಡದಲ್ಲಿ) ಸ್ಪಷ್ಟವಾಗಿ ಓದಿಹೇಳಿ ತಿಳಿಸಬೇಕು. ಗ್ರಾಹಕರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಜಾಗೃತಿ ಮೂಡಿಸುವುದು ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದರು.

ಸಾಲ ಮರುಪಾವತಿ ಮಾಡದ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಗಲಾಟೆ ಮಾಡುವುದು, ಬೆದರಿಕೆ ಹಾಕುವುದು ಅಥವಾ ಅಮಾನವೀಯವಾಗಿ ನಡೆದುಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ವಸೂಲಾತಿ ಏಜೆಂಟರು ತಮ್ಮ ಧೋರಣೆ ಬದಲಾಯಿಸಿಕೊಂಡು ಕಾನೂನು ಚೌಕಟ್ಟಿನಲ್ಲಿ ಶಾಂತಿಯುತವಾಗಿ ವ್ಯವಹರಿಸಬೇಕು ಎಂದರು.

ಹಲವು ಸಂಸ್ಥೆಗಳಲ್ಲಿ ಫೀಲ್ಡ್ ಆಫೀಸರ್‌ಗಳು ಮತ್ತು ಸಿಬ್ಬಂದಿ ಅರ್ಹತೆಯನ್ನು ತಪ್ಪಾಗಿ ಮೌಲ್ಯಮಾಪನ ಮಾಡುವುದು, ನಕಲಿ ದಾಖಲೆಗಳನ್ನು ಪರಿಶೀಲಿಸದೇ ಸಾಲ ಮಂಜೂರು ಮಾಡುವುದು ಮತ್ತು ಅಕ್ರಮ ನಡೆಸುವುದು ಗಮನಕ್ಕೆ ಬಂದಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಂಸ್ಥೆಗಳು ತಮ್ಮ ಸಿಬ್ಬಂದಿ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೊಂದಿರಬೇಕು ಎಂದು ತಿಳಿಸಿದರು.

ಸಂಸ್ಥೆಯ ಎಲ್ಲ ಹಂತಗಳಲ್ಲೂ ಗ್ರಾಹಕರ ವಹಿವಾಟು ನಡೆಸುವಾಗ ಆರ್‌ಬಿಐ ಮಾರ್ಗದರ್ಶಿ ಸೂತ್ರಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಹಠಾತ್ತಾಗಿ ಅಥವಾ ಏಕಪಕ್ಷೀಯವಾಗಿ ಯಾವುದೇ ಕ್ರಮ ಕೈಗೊಳ್ಳದೇ, ಮಾನವೀಯ ದೃಷ್ಟಿಕೋನದಿಂದ ಹಾಗೂ ನಿಯಮಾವಳಿಗಳ ಚೌಕಟ್ಟಿನಲ್ಲಿ ವ್ಯವಹರಿಸಬೇಕು. ಕೃಷಿಕರು ಅಥವಾ ಗ್ರಾಹಕರು ಮಳೆ ಅಭಾವ ಅಥವಾ ನೈಸರ್ಗಿಕ ಸಂಕಷ್ಟಗಳಿಂದ ಸಾಲ ಮರುಪಾವತಿಸಲು ಕಷ್ಟಪಡುತ್ತಿದ್ದರೆ, ಸಂಸ್ಥೆ ಆಡಳಿತ ಮಂಡಳಿಯ ಅನುಮೋದನೆ ಪಡೆದು ಸಾಲ ಮರುಪಾವತಿ ಅವಧಿಯನ್ನು ಪುನರ್ ರಚಿಸಲು (ಉದಾಹರಣೆಗೆ 40 ಕಂತುಗಳ ಬದಲಿಗೆ 60 ಕಂತುಗಳಾಗಿ ವಿಸ್ತರಿಸಲು) ಅವಕಾಶ ನೀಡಬೇಕು ಎಂದರು.

ಗ್ರಾಹಕರ ಸಮಸ್ಯೆಗಳು ಮತ್ತು ದೂರುಗಳನ್ನು ಆಲಿಸಲು ಪ್ರತ್ಯೇಕ ''''''''ಕುಂದುಕೊರತೆ ನಿವಾರಣಾ ಅಧಿಕಾರಿ''''''''ಯನ್ನು ನೇಮಿಸಬೇಕು. ಈ ಅಧಿಕಾರಿಯ ಹೆಸರು, ಸಂಪರ್ಕ ಸಂಖ್ಯೆ ಮತ್ತು ಸಮಯದ ವಿವರಗಳನ್ನು ಶಾಖೆಯ ಆವರಣದಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು. ಬೆಳಿಗ್ಗೆ 9 ಗಂಟೆಯ ಮೊದಲು ಮತ್ತು ಸಂಜೆ 7 ಗಂಟೆಯ ನಂತರ ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಕರೆ ಮಾಡುವುದಾಗಲಿ ಅಥವಾ ಮನೆಗೆ ತೆರಳಿ ಕಿರುಕುಳ ನೀಡುವುದಾಗಲಿ ಮಾಡುವಂತಿಲ್ಲ ಎಂದು ಎಚ್ಚರಿಸಿದರು.

ಗ್ರಾಹಕರಿಗೆ ಸಾಲ ನೀಡುವ ಮುನ್ನ ಅವರ ಮರುಪಾವತಿ ಸಾಮರ್ಥ್ಯ ಮತ್ತು ಸಿಬಿಲ್ ಸ್ಕೋರ್ ಕಡ್ಡಾಯವಾಗಿ ಪರಿಶೀಲಿಸಬೇಕು. ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಲ ನೀಡುವುದು ಅಥವಾ 2ಕ್ಕಿಂತ ಹೆಚ್ಚು ಸಂಸ್ಥೆಗಳಿಂದ ಸಾಲ ನೀಡುವುದನ್ನು ತಡೆಯಬೇಕು ಎಂದರು.

ಮೈಕ್ರೋಫೈನಾನ್ಸ್ ಕ್ಷೇತ್ರದಲ್ಲಿ ಯಾವುದೇ ‘ಥರ್ಡ್ ಪಾರ್ಟಿ’ ಏಜೆಂಟ್‌ಗಳಿಗೆ ಆರ್‌ಬಿಐ ನಿಯಮಾವಳಿಗಳ ಪ್ರಕಾರ ಅವಕಾಶವಿಲ್ಲ. ಗ್ರಾಹಕರು ನೇರವಾಗಿ ಸಂಸ್ಥೆಯೊಂದಿಗೆ ವ್ಯವಹರಿಸಬೇಕು. ಸಿಬ್ಬಂದಿ ವಸೂಲಿ ಪ್ರಕ್ರಿಯೆಯಲ್ಲಿ ದುರ್ನಡತೆ ಅಥವಾ ಅಕ್ರಮ ಎಸಗಿದರೆ, ಸಂಸ್ಥೆಗಳೇ ನೇರವಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸುತ್ತಿವೆ. ಪೊಲೀಸ್ ಇಲಾಖೆಯು ಶೀಘ್ರದಲ್ಲೇ ಎಲ್ಲ ಹಣಕಾಸು ಸಂಸ್ಥೆಗಳಿಗೆ ಅನುಸರಿಸಬೇಕಾದ ಹಾಗೂ ಮಾಡಬೇಕಾದ ಮತ್ತು ಮಾಡಬಾರದ ಸ್ಪಷ್ಟ ನಿರ್ದೇಶನಗಳ ಪಟ್ಟಿಯನ್ನು ಕಳುಹಿಸಿಕೊಡಲಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಎಪಿಎಂಸಿ ಅಧಿಕಾರಿಗಳು, ಮೈಕ್ರೋಫೈನಾನ್ಸ್ ಮತ್ತು ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳ ಮುಖ್ಯಸ್ಥರು /ಪದಾಧಿಕಾರಿಗಳು ಉಪಸ್ಥಿತರಿದ್ದರು.

- - -

(ಬಾಕ್ಸ್‌)

* ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ರೈತರಿಗೆ ವಂಚನೆ: ಡಿಸಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ರೈತರ ವಂಚನೆ ತಡೆಗೆ ಎಪಿಎಂಸಿ ಅಧಿಕಾರಿಗಳು ಕ್ರಮವಹಿಸಿ. ನಿರ್ಲಕ್ಷ್ಯ ವಹಿಸಿದರೆ ಕ್ರಮ ಕೈಗೊಳ್ಳಲಾಗುವುದು. ಅನಗತ್ಯವಾಗಿ ವರ್ತಕರಿಗೆ ಹಾಗೂ ಹೊಸ ಟ್ರೇಡಿಂಗ್ ಕಂಪನಿಗಳಿಗೆ ಲೈಸೆನ್ಸ್ ನೀಡುವ ಮೂಲಕ ರೈತರಿಗೆ ವಂಚನೆ ಆಗುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ, ಮಲ್ಲೇಬೆನ್ನೂರು ಹಾಗೂ ಹರಪನಹಳ್ಳಿ ಭಾಗಗಳಲ್ಲಿ ಅನಗತ್ಯವಾಗಿ ಟ್ರೇಡ್ ಲೈಸೆನ್ಸ್ ಪಡೆದು, ಕಂಪನಿಗಳನ್ನು ಆರಂಭಿಸಿ ರೈತರಿಗೆ ಹೆಚ್ಚಿನ ಬೆಲೆಯ ಆಮಿಷವೊಡ್ಡಿ ಮೋಸ ಮಾಡುತ್ತಿರುವುದು ಕಂಡುಬಂದಿದೆ. ಸೂಕ್ತ ಪರಿಶೀಲನೆ ನಡೆಸದೆ ಲೈಸೆನ್ಸ್ ಕೊಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದರು.

ರೈತರು ಮೋಸ ಹೋದ ನಂತರ ಪೊಲೀಸ್ ಠಾಣೆಗೆ ದೂರು ನೀಡಲು ಅಲೆಯುವುದನ್ನು ತಪ್ಪಿಸಲು, ಕೊಯ್ಲಿನ ಸಮಯದಲ್ಲೇ ಅವರಿಗೆ ಮುನ್ನೆಚ್ಚರಿಕೆ ಹಾಗೂ ಜಾಗೃತಿ ಮೂಡಿಸುವ ಕೆಲಸವಾಗಬೇಕು. ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮಗಳಿಗೆ ಎಪಿಎಂಸಿ ಕಾರ್ಯದರ್ಶಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ. ಯಾವುದೇ ಲೋಪದೋಷ ಕಂಡುಬಂದಲ್ಲಿ ಜಾಗೃತಿ ದಳ ಹಾಗೂ ಎಪಿಎಂಸಿಯಿಂದ ಸೂಕ್ತ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ರೈತರಿಗೆ ತೊಂದರೆಯಾಗಬಾರದು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ತಿಳಿಸಿದರು. ಮೈಕ್ರೋಫೈನಾನ್ಸ್ ಮತ್ತು ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳ ಮುಖ್ಯಸ್ಥರು /ಪದಾಧಿಕಾರಿಗಳು ಸಾಲ ಮರುಪಾವತಿ ಮಾಡದ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಗಲಾಟೆ ಮಾಡುವುದು, ಬೆದರಿಕೆ ಹಾಕುವುದನ್ನು ಬಿಡಬೇಕು, ಕಾನೂನು ಚೌಕಟ್ಟಿನಡಿ ಶಾಂತಿಯುತವಾಗಿ ವ್ಯವಹರಿಸಬೇಕು, ಗ್ರಾಹಕರ ವಹಿವಾಟು ನಡೆಸುವಾಗ ಆರ್‌ಬಿಐ ಮಾರ್ಗದರ್ಶಿ ಸೂತ್ರಗಳನ್ನ ಪಾಲಿಸಬೇಕು. ಇನ್ನು ಮುಂದೆ ಯಾವುದೇ ಗ್ರಾಹಕರು ಜಿಲ್ಲಾಡಳಿತಕ್ಕೆ ದೂರು ನೀಡಿದಲ್ಲಿ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

- - -

-23ಕೆಡಿವಿಜಿ36:

ದಾವಣಗೆರೆಯ ಡಿಸಿ ಕಚೇರಿ ಸಭಾಂಗಣದಲ್ಲಿ ಮೈಕ್ರೋಫೈನಾನ್ಸ್ ಮತ್ತು ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳೊಂದಿಗೆ ಸಭೆ ನಡೆಯಿತು.