ಯುವಕರ ಧಾರ್ಮಿಕತೆಗೆ ಮರಳಿ ಕರೆತಂದ ಬನ್ನಂಜೆ: ನ್ಯಾ. ಶ್ರೀಶಾನಂದ

| Published : Aug 04 2025, 12:30 AM IST

ಯುವಕರ ಧಾರ್ಮಿಕತೆಗೆ ಮರಳಿ ಕರೆತಂದ ಬನ್ನಂಜೆ: ನ್ಯಾ. ಶ್ರೀಶಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬನ್ನಂಜೆ 90 - ಉಡುಪಿ ನಮನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿಧಾರ್ಮಿಕತೆಯಿಂದ ದೂರ ಹೋಗಿದ್ದ ಯುವಕರ ದೊಡ್ಡ ಗುಂಪನ್ನು ಹಿಂದಕ್ಕೆ ಕರೆತಂದ ಸಾಧನೆ, ಶ್ರೇಯಸ್ಸು ಬನ್ನಂಜೆ ಗೋವಿಂದಾಚಾರ್ಯರದ್ದು ಎಂದು ಹೈಕೋರ್ಟಿನ ನ್ಯಾಯಮೂರ್ತಿಗಳಾದ ವೇದವ್ಯಾಸಾಚಾರ್ಯ ಶ್ರೀಶಾನಂದ ಹೇಳಿದರು.ಅವರು ಭಾನುವಾರ ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಬನ್ನಂಜೆ 90 - ಉಡುಪಿ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿಜ್ಞಾನ, ಮನಶಾಸ್ತ್ರ, ಸಂಖ್ಯಾಶಾಸ್ತ್ರಗಳನ್ನು ಒರಗೆ ಹಚ್ಚಿ, ಸ್ವಾಧ್ಯಾಯನದಿಂದ ಕಂಡುಕೊಂಡ ಪ್ರಖರ ಸತ್ಯವನ್ನು ಪೂರ್ವಾಗ್ರಹ ಮತ್ತು ದುರಾಗ್ರಹಗಳೆರಡೂ ಇಲ್ಲದೇ, ಸಂಪ್ರದಾಯವಾದಿಗಳ ವಿರೋಧದ ನಡುವೆಯೂ ಜಗತ್ತಿನ ಮುಂದೆ ಇಡುವ ಧೈರ್ಯವನ್ನು ಅವರು ಹೊಂದಿದ್ದರು ಎಂದರು.ಬನ್ನಂಜೆ ಅವರಿಗೆ ತಾವು ದಾರ್ಶನಿಕರಾಗುವುದು ಬೇಕಾಗಿರಲಿಲ್ಲ, ಅವರು ಪ್ರವಚನಕಾರಾಗಿ ಗುರುತಿಸುವುದಕ್ಕೆ ಹೆಚ್ಚು ಇಷ್ಚಪಟ್ಟರು. ಅವರ ಪ್ರವಚನಗಳಿಗೆ ಟಿಕೆಟ್ ಇಟ್ಟರೂ ಮಂಗಳೂರಿನ ಪುರಭವನ ತುಂಬಿ ತುಳುಕುತಿತ್ತು. ಸಂಸ್ಕೃತದಲ್ಲಿ ಉಳಿದುಹೋಗಲಿದ್ದ ಜ್ಞಾನವನ್ನು ಪ್ರವಚನಗಳ ಮೂಲಕ ಸಾಮಾನ್ಯಜನರಿಗೆ ತಲುಪಿಸಿದ ಬನ್ನಂಜೆ, ಯುವಜನತೆಯನ್ನು ದೊಡ್ಡ ಮಟ್ಟದಲ್ಲಿ ತಮ್ಮ ಪ್ರವಚನಗಳಿಂದ ಪ್ರಭಾವಿಸಿದರು ಎಂದು ಹೇಳಿದರು.ಉಡುಪಿಯ ಫಲಿಮಾರು ಮಠದಲ್ಲಿದ್ದ ಸರ್ವಮೂಲ ಗ್ರಂಥಗಳ ವಸ್ತುನಿಷ್ಟ ಸಂಪಾದನೆ ಅವರ ಸಾಧನೆಗೆ ಕಿರೀಟಪ್ರಾಯವಾದುದು. ಇದು ಬನ್ನಂಜೆ ಅವರನ್ನು ವಿರೋಧಿಸುವವರೂ ಅವರನ್ನು ಒಪ್ಪಿಕೊಳ್ಳುವಂತೆ ಮಾಡಿತ್ತು. ಸ್ವತಃ ಅವರಿಗೆ ಪವಾಡಗಳಲ್ಲಿ ನಂಬಿಕೆ ಇಲ್ಲದಿದ್ದರೂ, ಅವರ ಜೀವನದಲ್ಲಿ ಪವಾಡಗಳನೇಕ ನಡೆದಿದ್ದವು ಎಂದು ನ್ಯಾಯಾಮೂರ್ತಿಗಳು ಉದಾಹರಣೆಗಳನ್ನು ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ ವಹಿಸಿದ್ದರು. ಅತಿಥಿಗಳಾಗಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್, ಸಮಾಜಸೇವಕ ವಿಶ್ವನಾಥ ಶೆಣೈ, ಖ್ಯಾತ ವೈದ್ಯ ಡಾ. ಹರಿಶ್ಚಂದ್ರ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ವನಿತಾ ಮಯ್ಯ ಭಾಗವಹಿಸಿದ್ದರು. ಬನ್ನಂಜೆ ಅವರ ಪುತ್ರಿ ವೀಣಾ ಬನ್ನಂಜೆ ಅತಿಥಿಗಳನ್ನು ಗೌರವಿಸಿದರು.ಪ್ರತಿಷ್ಠಾನದ ಅಧ್ಯಕ್ಷ ಮಲ್ಲೆಪುರಂ ವೆಂಕಟೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ಆಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಆ್ಯಸ್ಟ್ರೋ ಮೋಹನ್ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಕೊಡವೂರು ವಂದಿಸಿದರು.ಕಾರ್ಯಕ್ರಮಕ್ಕೆ ಮೊದಲು ಮೂಡಬೆಟ್ಟಿನಲ್ಲಿರುವ ಬನ್ನಂಜೆ ಅವರ ಮನೆಯಲ್ಲಿ ಪ್ರಾರ್ಥನೆ ನಡೆಸಲಾಯಿತು. ಅವರು ಕಲಿತ ಆದಿಉಡುಪಿ ಶಾಲೆಯಿಂದ ಬನ್ನಂಜೆ ಅವರ ಭಾವಚಿತ್ರದ ಮೆರವಣಿಗೆಗೆ ನಾಡೋಜ ಕೆ.ಪಿ.ರಾವ್ ಚಾಲನೆ ನೀಡಿದರು.ಸಭಾಕಾರ್ಯಕ್ರಮದ ನಂತರ ಶ್ರೀ ವಿದ್ಯಾಭೂಷಣರಿಂದ ಬನ್ನಂಜೆ ಅವರ ಗೀತೆಗಳ ಗಾಯನ, ಬನ್ನಂಜೆ ಅವರ ಬಗ್ಗೆ ವಿಚಾರಗೋಷ್ಠಿಗಳು, ಅವರ ಕೃತಿ ಆಧಾರಿತ ಯಕ್ಷಗಾನ ಪ್ರದರ್ಶನ, ಸಂಜೆ ಸಮಾರೋಪ ಸಮಾರಂಭಗಳು ನಡೆದವು.