ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ತೋಟಗಾರಿಕೆ ಬೆಳೆಗಳನ್ನು ಬೆಳೆದು ಯಾವ ರೀತಿ ಮಾರುಕಟ್ಟೆಯಲ್ಲಿ ಲಾಭವನ್ನು ಪಡೆಯಬಹುದು ಎಂಬುದರ ಬಗ್ಗೆ ರೈತರಿಗೆ ಮಾಹಿತಿ ತಲುಪಿಸುವಲ್ಲಿ ಹಣ್ಣು-ಹೊನ್ನು ಬಾನುಲಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತೋಟಗಾರಿಗೆ ಹೆಚ್ಚುವರಿ ನಿರ್ದೇಶಕ (ತಾಳೆ ಬೆಲೆ) ಮತ್ತು (ಕ್ಷೇತ್ರ ಮತ್ತು ನರ್ಸರಿಂಗ್) ಡಾ.ಪಿ ಎಂ ಸೊಬರದ ಪ್ರಶಂಸೆ ವ್ಯಕ್ತಪಡಿಸಿದರು.ತೋಟಗಾರಿಕೆ ಇಲಾಖೆ, ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಆಕಾಶವಾಣಿಯ ವತಿಯಿಂದ ಕರ್ಜನ್ ಪಾರ್ಕ್ನ ಎಂ.ಹೆಚ್. ಮರೀಗೌಡ ಸಭಾಂಗಣದಲ್ಲಿ ಬುಧವಾರ ನಡೆದ ‘ಹಣ್ಣು-ಹೊನ್ನು’ ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಬೇಸಾಯ ಬಾನುಲಿ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಕಾಶವಾಣಿ ಎಂದರೆ ಒಂದು ಕ್ರಿಯೇಟಿವಿಟಿ ಇರುತ್ತದೆ. ಅದರಲ್ಲಿ ಜನರಿಗೆ ಹಾಗೂ ರೈತರಿಗೆ ಉಪಯುಕ್ತವಾಗುವ ಮಾಹಿತಿಯನ್ನು ವಿಭಿನ್ನ ರೀತಿಯ ಕಾರ್ಯಕ್ರಮಗಳ ಮೂಲಕ ತಿಳಿಸಲಾಗುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಸಹಾಯವಾಗುವಂತೆ ಸತತ 46 ಬಾನೂಲಿ ಸರಣಿ ಕಾರ್ಯಕ್ರಮವನ್ನು ಮಾಡಿರುವುದರ ಪರಿಣಾಮವಾಗಿ ಇಂದು ಸಾಕಷ್ಟು ರೈತರು ಸಂತೋಷ ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ ಎಂದರು.ಕರ್ನಾಟಕದಲ್ಲಿ ಅದರಲ್ಲೂ ವಿಭಿನ್ನ ತೋಟಗಾರಿಕೆ ಬೆಳೆಗಳನ್ನು ಹೊಂದಿರುವ ಮೈಸೂರಿನಲ್ಲಿ ತೋಟಗಾರಿಕೆ ಕೃಷಿ ಇನ್ನಷ್ಟು ಅಭಿವೃದ್ಧಿಯಾಗಲಿ. ಮುಂಬರುವ ದಿನಗಳಲ್ಲಿ ಈ ರೀತಿಯ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಿ ಸದಾ ರೈತರಿಗೆ ಯಾವುದೇ ರೀತಿಯ ಮಾಹಿತಿಯನ್ನು ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವಮೂರ್ತಿ ಮಾತನಾಡಿ, ಆಕಾಶವಾಣಿಯಲ್ಲಿ ಪ್ರತಿ ಸೋಮವಾರದಂದು ಬೆಳಗ್ಗೆ 6.50 ರಿಂದ 7:30 ಗಂಟೆಯವರೆಗೆ ಹಣ್ಣು-ಹೊನ್ನು ಕಾರ್ಯಕ್ರಮವನ್ನು ತಾಂತ್ರಿಕ ಅಧಿಕಾರಿಗಳು, ತೋಟಗಾರಿಕಾ ಅಧಿಕಾರಿಗಳು ಹಾಗೂ ಅನುಭವಿ ರೈತರಿಂದ 46 ಸರಣಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದ್ದು, ಇದಕ್ಕೆ ಸಾವಿರಾರು ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಮಂಜುನಾಥ್ ಮಾತನಾಡಿ, ರೇಡಿಯೋ ಎನ್ನುವುದು ನಮ್ಮ ಸಂಸ್ಕೃತಿಯ ಭಾಗ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮೇಲಿನ ವ್ಯಾಮೋಹದಿಂದ ಜನರು ರೇಡಿಯೋ ಆಲಿಸುವುದನ್ನು ಕಡಿಮೆ ಮಾಡಿದ್ದರು. ಆದರೆ, ಕೃಷಿಗೆ ಸಂಬಂಧಿಸಿದಂತೆ ಆಯೋಜಿಸುವ ಕಾರ್ಯಕ್ರಮಗಳಲ್ಲಿ ರೇಡಿಯೋ ಮೇಲುಗೈ ಸಾಧಿಸಿದೆ ಎಂಬುದಕ್ಕೆ ಈ ಕಾರ್ಯಕ್ರಮ ಉದಾಹರಣೆಯಾಗಿದೆ. ಈ ರೀತಿಯ ಕಾರ್ಯಕ್ರಮಗಳು ಶೇಕಡ 100 ರಷ್ಟು ಅಲ್ಲದಿದ್ದರೂ ಅರ್ಧದಷ್ಟಾದರೂ ರೈತರನ್ನು ತಲುಪುವಂತೆ ಮಾಡಬೇಕು. ಅದಕ್ಕೆ ರೈತರು ಕೈಜೋಡಿಸುವುದು ಬಹಳ ಮುಖ್ಯ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯ ಉಪ ನಿರ್ದೇಶಕ ರುದ್ರೇಶ್ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ದೊರಕುವ ಯೋಜನೆಗಳ ಬಗ್ಗೆ ಕೇವಲ 30 ರಷ್ಟು ರೈತರಿಗೆ ಮಾತ್ರ ಮಾಹಿತಿ ಇದೆ. ಇನ್ನುಳಿದ 70 ರಷ್ಟು ರೈತರಿಗೆ ಯಾವುದೇ ಮಾಹಿತಿ ತಿಳಿದಿರುವುದಿಲ್ಲ ಹಾಗಾಗಿ ರೇಡಿಯೋ ಕಾರ್ಯಕ್ರಮಗಳ ಮೂಲಕ ಹಾಗೂ ತರಬೇತಿ ಕಾರ್ಯಗಾರಗಳ ಮೂಲಕ ರೈತರಿಗೆ ಹೆಚ್ಚಿನ ಮಾಹಿತಿಯನ್ನು ತಲುಪಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.ತೋಟಗಾರಿಕೆ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಎಚ್. ಎಂ.ನಾಗರಾಜು, ಉಪನಿರ್ದೇಶಕ (ಜಿ.ಪಂ) ಮಂಜುನಾಥ ಅಂಗಡಿ ಇನ್ನಿತರರು ಉಪಸ್ಥಿತರಿದ್ದರು.