ಸಾರಾಂಶ
ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜರುಗಿದ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಕಲಬುರಗಿ
ಮಹಾತ್ಮ ಗಾಂಧೀಜಿ 155ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಿದ್ಯಾರ್ಥಿ, ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪೃಶ್ಯತೆ ನಿವಾರಣೆಗೆ ನಡೆಸಿದ ಪ್ರಯೋಗಗಳು ಮೊದಲಾದ ವಿಷಯಗಳ ಕುರಿತು ಶಾಲಾ-ಕಾಲೇಜುಗಳ ಮಕ್ಕಳಿಗೆ ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 9 ವಿದ್ಯಾರ್ಥಿಗಳಿಗೆ ಬುಧವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜರುಗಿದ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು.ಪ್ರೌಢ ಶಾಲೆ ವಿಭಾಗದಿಂದ ವಿಜೇತರಾದ ಕಲಬುರಗಿ ತಾಲೂಕಿನ ಭೀಮಳ್ಳಿ ಆದರ್ಶ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ವಿಜಯಲಕ್ಷ್ಮೀಗೆ ಪ್ರಥಮ, ಓಕಳಿ ಮಂದಿರ ಕನ್ನಡ ಕಾನ್ವೆಂಟ್ ಶಾಲೆ 9ನೇ ತರಗತಿ ವಿದ್ಯಾರ್ಥಿನಿ ರಕ್ಷಿತಾಗೆ ದ್ವಿತೀಯ ಹಾಗೂ ಸೇಡಂ ಸರ್ಕಾರಿ ಕನ್ಯಾ ಪ್ರೌಢ ಶಾಲೆ 10ನೇ ತರಗತಿ ವಿದ್ಯಾರ್ಥಿನಿ ಪೂಜಾಗೆ ತೃತೀಯ ಸ್ಥಾನದ ಬಹುಮಾನ ನೀಡಲಾಯಿತು.
ಪದವಿ ಪೂರ್ವ ವಿಭಾಗದಿಂದ ಸೇಡಂ ಪಟ್ಟಣದ ನರ್ಮದಾದೇವಿ ಗಿಲ್ಡಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವನಿತಾಗೆ ಪ್ರಥಮ, ಕಲಬುರಗಿ ಬಿ.ಬಿ.ರಜಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೈದಾ ಅಂಜುಮ್‌ಗೆ ದ್ವಿತೀಯ ಹಾಗೂ ಸೇಡಂ ಪಟ್ಟಣದ ಮಾತೃ ಛಾಯಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಶೋಕಗೆ ತೃತೀಯ ಸ್ಥಾನದ ಬಹುಮಾನ ನೀಡಿ ಸತ್ಕರಿಸಲಾಯಿತು.ಅದೇ ರೀತಿ ಪದವಿ-ಸ್ನಾತಕೋತ್ತರ ವಿಭಾಗದಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಎಂಎ (ಇತಿಹಾಸ) ವಿಭಾಗದ ಭೂತಾಳಿ ತೆಲ್ಲೂರಗೆ ಪ್ರಥಮ, ಕಲಬುರಗಿ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಬಿಕಾಂ ಅಭ್ಯರ್ಥಿ ಸಹನಾಗೆ ದ್ವಿತೀಯ ಹಾಗೂ ಬಿ.ಬಿ.ರಜಾ ಮಹಿಳಾ ಪದವಿ ಕಾಲೇಜಿನ ಅಭ್ಯರ್ಥಿ ಅನೀಕಶುಭಿಗೆ ತೃತೀಯ ಸ್ಥಾನ ಗಳಿಸಿದ್ದಕ್ಕಾಗಿ ಬಹುಮಾನ ನೀಡಲಾಯಿತು.
ಒಟ್ಟು 9 ಜನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದ ಜೊತೆ ಕ್ರಮವಾಗಿ ಪ್ರಥಮ ಸ್ಥಾನಕ್ಕೆ ₹3,000 ದ್ವಿತೀಯ ಸ್ಥಾನಕ್ಕೆ ₹2,000 ಹಾಗೂ ತೃತೀಯ ಸ್ಥಾನಕ್ಕೆ ₹1,000 ರೂ. ನಗದು ಬಹುಮಾನ ನೀಡಲಾಯಿತು.