ಬಾರದ ಅಧಿಕಾರಿ, ರೈತರಿಂದ ಜನಸಂಪರ್ಕ ಸಭೆ ಬಹಿಷ್ಕಾರ

| Published : Jun 24 2024, 01:36 AM IST

ಬಾರದ ಅಧಿಕಾರಿ, ರೈತರಿಂದ ಜನಸಂಪರ್ಕ ಸಭೆ ಬಹಿಷ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ನಿಯಮಾನುಸಾರ ಸೆಸ್ಕಾಂ ಜಿಲ್ಲಾ ಅಧೀಕ್ಷಕ ಎಂಜಿನಿಯರ್ ಸಮ್ಮುಖದಲ್ಲಿ ಸಭೆ ನಡೆಯಬೇಕು. ರೈತರ ಸಮಸ್ಯೆಗಳು ಸಾಕಷ್ಟಿವೆ. ಅವುಗಳನ್ನು ಪರಿಹರಿಸುವ ಶಕ್ತಿ ತಾಲೂಕು ಮಟ್ಟದ ಅಧಿಕಾರಿಗಳಿಗಿಲ್ಲ. ಕಳೆದ ನಾಲ್ಕು ತ್ರೈಮಾಸಿಕ ಸಭೆಗಳಿಗೂ ಅಧೀಕ್ಷಕ ಎಂಜಿನಿಯರ್ ಗೈರಾಗುತ್ತಿದ್ದಾರೆ. ಅವರು ಸೂಚಿಸಿದ ದಿನಾಂಕವೇ ಜನಸಂಪರ್ಕ ಸಭೆ ಆಯೋಜಿಸಿದರೂ ಅವರಾಗಲೀ ಅಥವಾ ಸೆಸ್ಕಾಂ ಆಡಳಿತ ನಿರ್ದೇಶಕರಾಗಲೀ ಬರುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸೆಸ್ಕಾಂನ ತ್ರೈಮಾಸಿಕ ಜನಸಂಪರ್ಕ ಸಭೆಗೆ ಇಲಾಖೆ ಅಧೀಕ್ಷಕ ಎಂಜಿನಿಯರ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಸತತವಾಗಿ ಗೈರಾಗುತ್ತಿರುವುದನ್ನು ಖಂಡಿಸಿ ವಿದ್ಯುತ್ ಬಳಕೆದಾರ ರೈತರು ಸಭೆಯನ್ನು ಬಹಿಷ್ಕರಿಸಿದರು.

ವಿದ್ಯುತ್ ಇಲಾಖೆ ಪಟ್ಟಣದ ಸೆಸ್ಕಾಂ ವಿಭಾಗೀಯ ಕಚೇರಿ ಆವರಣದಲ್ಲಿ ಉಪ ವಿಭಾಗೀಯ ಕಚೇರಿ ಕಾರ್ಯಪಾಲಕ ಅಭಿಯಂತರೆ ವಿನುತಾ ಅಧ್ಯಕ್ಷತೆಯಲ್ಲಿ ನಡೆದ ಸಭೆ ಆರಂಭದಲ್ಲೇ ಮೇಲಾಧಿಕಾರಿಗಳ ಗೈರಿನಲ್ಲಿ ಸಭೆ ನಡೆಸುವುದನ್ನು ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಮತ್ತು ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಪ್ರಶ್ನಿಸಿದರು.

ನಿಯಮಾನುಸಾರ ಸೆಸ್ಕಾಂ ಜಿಲ್ಲಾ ಅಧೀಕ್ಷಕ ಎಂಜಿನಿಯರ್ ಸಮ್ಮುಖದಲ್ಲಿ ಸಭೆ ನಡೆಯಬೇಕು. ರೈತರ ಸಮಸ್ಯೆಗಳು ಸಾಕಷ್ಟಿವೆ. ಅವುಗಳನ್ನು ಪರಿಹರಿಸುವ ಶಕ್ತಿ ತಾಲೂಕು ಮಟ್ಟದ ಅಧಿಕಾರಿಗಳಿಗಿಲ್ಲ. ಕಳೆದ ನಾಲ್ಕು ತ್ರೈಮಾಸಿಕ ಸಭೆಗಳಿಗೂ ಅಧೀಕ್ಷಕ ಎಂಜಿನಿಯರ್ ಗೈರಾಗುತ್ತಿದ್ದಾರೆ. ಅವರು ಸೂಚಿಸಿದ ದಿನಾಂಕವೇ ಜನಸಂಪರ್ಕ ಸಭೆ ಆಯೋಜಿಸಿದರೂ ಅವರಾಗಲೀ ಅಥವಾ ಸೆಸ್ಕಾಂ ಆಡಳಿತ ನಿರ್ದೇಶಕರಾಗಲೀ ಬರುತ್ತಿಲ್ಲ ಎಂದು ರಾಜೇಗೌಡರು ಪ್ರಶ್ನಿಸಿದರು.

ಮೇಲಾಧಿಕಾರಿಗಳು ಬಂದು ಸಮಸ್ಯೆ ಆಲಿಸುವುದಾದರೆ ಮಾತ್ರ ಜನಸಂಪರ್ಕ ಸಭೆ ಆಯೋಜಿಸಬೇಕು. ಇಲ್ಲದಿದ್ದರೆ ಸಭೆ ಏಕೆ ಕರೆಯಬೇಕು ಎಂದು ಸಭೆ ಬಹಿಷ್ಕರಿಸುತ್ತಿರುವುದಾಗಿ ಪ್ರಕಟಿಸಿದರು.

ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ರೈತರಿಗೆ ಯಾವುದೇ ಮಾಹಿತಿ ನೀಡದೆ ಸಭೆ ಕರೆಯಲಾಗಿದೆ. ರೈತರು ಸಭೆಗೆ ಬರದಂತೆ ಕಚೇರಿ ಮುಖ್ಯದ್ವಾರ ಬಂದ್ ಮಾಡಿದ್ದೀರಿ ಎಂದು ದೂರಿದರು.

ಪ್ರತಿ ಗ್ರಾಪಂ ಮಟ್ಟದಲ್ಲಿ ಜನ ಸಂಪರ್ಕ ಸಭೆ ಬಗ್ಗೆ ಕರ ಪತ್ರಗಳನ್ನು ಮುದ್ರಿಸಿ ನಿಮ್ಮ ಲೈನ್ ಮೆನ್ ಗಳ ಮೂಲಕ ಅಥವಾ ಆಯಾ ಗ್ರಾಪಂ ಅಧಿಕಾರಿಗಳ ಮೂಲಕ ರೈತರಿಗೆ ಸಭಾ ಮಾಹಿತಿ ನೀಡಿ ಕರಪತ್ರ ಮುದ್ರಿಸಿ ಹಂಚಲಾರದಷ್ಟು ನಿಮ್ಮ ಇಲಾಖೆ ಆರ್ಥಿಕ ದಿವಾಳಿಯಾಗಿದೆಯೆ ಎಂದು ಕಿಡಿಕಾರಿದರು.

ಲೈನ್ ಮೆನ್‌ಗಳು ಹಳ್ಳಿ ಹಳ್ಳಿಗಳಲ್ಲಿ ರೈತರ ಸುಲಿಗೆ ಮಾಡುತ್ತಿದ್ದಾರೆ. ಪಟ್ಟಣದ ಸೆಸ್ಕಾಂ ಉಪ ವಿಭಾಗ 1 ಮತ್ತು 2 ರ ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕರೇ ಇಲ್ಲ. ಸಮಸ್ಯೆಗಳನ್ನು ಪರಿಹಾರ ಮಾಡುವ ಸಾಮರ್ಥ್ಯ ಇಲ್ಲದ ನೀವು ಪದೇ ಪದೇ ಜನ ಸಂಪರ್ಕ ಸಭೆ ಆಯೋಜಿಸಿ ರೈತರನ್ನು ಅಪಮಾನ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ಸಭೆಯಲ್ಲಿ ಹಾಜರಿದ್ದ ಕಾರ್ಯಪಾಲಕ ಅಭಿಯಂತರೇ ವಿನುತ ಮೇಲಾಧಿಕಾರಿಗಳನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಸಭೆಯನ್ನು ಒಂದು ವಾರಗಳ ಕಾಲ ಮುಂದೂಡಿದರು. ಅಧೀಕ್ಷಕ ಎಂಜಿನಿಯರ್ ಬರುವಿಕೆ ದಿನಾಂಕ ಖಚಿತಪಡಿಸಿಕೊಂಡು ಸಭೆ ಆಯೋಜಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಸಹಾಯಕ ಎಂಜಿನಿಯರ್ ಮನುಕುಮಾರ್, ನಂದನ್ ಕುಮಾರ್, ತಾಲೂಕಿನ ಸೆಸ್ಕಾ ವಿವಿಧ ಹೋಬಳಿಗಳ ಕಿರಿಯ ಎಂಜಿನಿಯರ್‌ ಹರೀಶ್, ರಾಜೇಗೌಡ, ನಾಗರಾಜು, ರಾಜೇಶ್, ಪ್ರದೀಪ, ಶುಭಾಂಕ, ಶ್ರೀಕಾಂತ್, ರವೀಂದ್ರ ಕುಮಾರ್, ರೈತ ಮುಖಂಡರಾದ ಹೊನ್ನೇಗೌಡ, ನಗರೂರು ಕುಮಾರ್, ಚೌಡೇನಹಳ್ಳಿ ಕೃಷ್ಣೇಗೌಡ, ವಡಕೆಶೆಟ್ಟಹಳ್ಳಿ ನರಸಿಂಹೇಗೌಡ, ಸ್ವಾಮೀಗೌಡ, ಮಲ್ಲೇನಹಳ್ಳಿ ಮಂಜುನಾಥ್, ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಹಲವರಿದ್ದರು.