ಸಾರಾಂಶ
ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜಧಾನಿಯಲ್ಲಿ ಮತ್ತೆ ಗುರುವಾರ ಮಳೆ ಪ್ರತ್ಯಕ್ಷವಾಗಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ಸುರಿದ ಜಿಟಿಜಿಟಿ ಮಳೆಗೆ ನಗರದ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು.
ನಗರದಲ್ಲಿ ಬುಧವಾರದಿಂದಲೇ ಮೋಡ ಕವಿದ ವಾತಾವರಣ ಉಂಟಾಗಿತ್ತು. ಮತ್ತೆ ಗುರುವಾರ ಬೆಳಗ್ಗೆ 8 ಗಂಟೆಗೆ ಜಿಟಿ ಜಿಟಿ ಮಳೆ ಆರಂಭವಾಗಿ ಶಾಲಾ ಕಾಲೇಜುಗಳಿಗೆ ತೆರಳುವವರಿಗೆ, ಕಚೇರಿಗೆ ತೆರಳುವವರು ತೊಂದರೆ ಅನುಭವಿಸುವಂತಾಯಿತು. ಬಿಡುವು ಕೊಟ್ಟು-ಕೊಟ್ಟು ತುಂತುರು ಮಳೆ ಸುರಿಯಿತು. ಸಂಜೆ ಕಚೇರಿಯಿಂದ ಮನೆಗೆ ತೆರಳುವವರು ಸಹ ಪರದಾಡಿದರು.
ಹಲವಾರು ಕಾರುಗಳು ರಸ್ತೆಗಿಳಿದ ಪರಿಣಾಮ ನಗರದ ಕೇಂದ್ರ ಭಾಗದ ಮೆಜೆಸ್ಟಿಕ್, ಕೆ.ಆರ್.ಸರ್ಕಲ್, ಓಕಳಿಪುರ ಜಂಕ್ಷನ್, ಮಲ್ಲೇಶ್ವರ, ಹಡ್ಸನ್ ವೃತ್ತ, ಕೆಆರ್ ಮಾರುಕಟ್ಟೆ, ಮೈಸೂರು ರಸ್ತೆ ಸೇರಿದಂತೆ ಮೊದಲಾದ ಕಡೆ ಭಾರೀ ಪ್ರಮಾಣ ಸಂಚಾರ ದಟ್ಟಣೆ ಉಂಟಾಯಿತು. ಬೆಳಗ್ಗೆ ಕಚೇರಿ, ಕೋರ್ಟ್ ತೆರಳುವವರು ಟ್ರಾಫಿಕ್ ಜಾಮ್ ನಲ್ಲಿ ಪರದಾಡಿದರು.
ವ್ಯಾಪಾರಿಗಳ ಪರದಾಟ: ಬೆಳಗ್ಗೆಯಿಂದಲೇ ಮಳೆ ಬೀಳತೊಡಗಿದ್ದರಿಂದ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಸಮಸ್ಯೆಗೆ ಒಳಗಾದರು. ಸಂಜೆ ವೇಳೆ ಮತ್ತೆ ಮಳೆ ಬಂದ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಹಣ್ಣು ತರಕಾರಿ ಮಾರುವಂತಹ ಸ್ಥಿತಿ ನಿರ್ಮಾಣವಾಯಿತು. ಸಿಕ್ಕಷ್ಟೆ ಸಾಕು ಎಂದು ಮಾರಾಟ ಮಾಡಿ ಮನೆ ದಾರಿ ಹಿಡಿದರು.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ರಾತ್ರಿ 10 ಗಂಟೆ ವೇಳೆಗೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ 10 ಮಿ.ಮೀ.ಗಿಂತ ಕಡಿಮೆ ಮಳೆ ದಾಖಲಾಗಿತ್ತು. ಆದರೆ, ಸಣ್ಣ ಪ್ರಮಾಣದಲ್ಲಿ ಮಳೆ ಬೀಳುತ್ತಲೇ ಇದ್ದ ಪರಿಣಾಮ ಜನಜೀವನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತವಾಯಿತು.