ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಶ್ರೀ ಸಿದ್ಧಮಲ್ಲೇಶ್ವರ ವಿರಕ್ತಮಠದ ವತಿಯಿಂದ ಬುಧವಾರ ಮತ್ತು ಗುರುವಾರ ಗ್ರಾಮಾಂತರ ಬಸವ ಜಯಂತಿ ಮತ್ತು ಶರಣರ ಸ್ಮರಣೋತ್ಸವ, ನಾಟಕ, ಪ್ರವಚನ ಕಾರ್ಯಕ್ರಮಗಳು ಸಾವಿರಾರು ಭಕ್ತರ ಸಮೂಹದಲ್ಲಿ ಅದ್ಧೂರಿಯಾಗಿ ನಡೆಯಿತು.ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಆವರಣದಲ್ಲಿ ಗುರುವಾರ ಬೆಳಗ್ಗೆ ೫ಕ್ಕೆ ಪೂಜ್ಯರ ಗದ್ದುಗೆಗೆ ಬಿಲ್ವಾರ್ಚನೆ, ಬೆಳಗ್ಗೆ ೬ಕ್ಕೆ ಮಲ್ಲನಮೂಲೆ ಮಠದ ಚನ್ನಬಸವಸ್ವಾಮೀಜಿ ಷಟ್ ಸ್ಥಲ ಧ್ವಜಾರೋಹಣ, ಬೆಳಗ್ಗೆ ೭ ಗಂಟೆಗೆ ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣಸ್ವಾಮೀಜಿ ಇಷ್ಟ ಲಿಂಗಪೂಜೆ ನೆರವೇರಿಸಿದರು. ಬೆಳಗ್ಗೆ ೧೦ ಗಂಟೆಗೆ ದೇವನೂರು ಮಠದ ಮಹಾಂತಸ್ವಾಮೀಜಿ ಹಾಗೂ ಹರಗುರು ಚರಮೂರ್ತಿಗಳು ಬೆಳ್ಳಿ ರಥದಲ್ಲಿದ್ದ ಬಸವನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಗ್ರಾಮಾಂತರ ಬಸವ ಜಯಂತಿ ಮೆರವಣಿಗೆಗೆ ಚಾಲನೆ ನೀಡುತ್ತಿದ್ದಂತೆ, ವಿವಿಧ ಜಾನಪದ ಕಲಾತಂಡಗಳೊಂದಿಗೆ ಮಠದ ಆವರಣದಿಂದ ಮೆರವಣಿಗೆ ಹೊರಟಿತು. ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಸಾಗಿ, ಪಚ್ಚಪ್ಪ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ ಮಾರ್ಗವಾಗಿ ಮತ್ತೆ ಮಠದ ಅವರಣಕ್ಕೆ ಬಂದು ತಲುಪಿತು, ನಾದಸ್ವರ ತಂಡ, ನಂದಿಧ್ವಜ ವೀರಭದ್ರ ಕುಣಿತ, ಡೊಳ್ಳು ಕುಣಿತ ಜೋಡಿ ಎತ್ತುಗಳು, ವಿವಿಧ ಗ್ರಾಮಗಳಿಂದ ಅಲಂಕೃತ ಬಸವಣ್ಣನ ಭಾವಚಿತ್ರಗಳು, ಬ್ಯಾಂಡ್‌ಸೆಟ್ ತಂಡ, ಮೆರವಣಿಗೆಗೆ ಮೆರಗು ತಂದವು.ಮಲ್ಲಿಕಾರ್ಜುನ ಬೆಟ್ಟ ಮುಕುಂದೂರು ವಿರಕ್ತಮಠದ ಮಹಾಂತ ಬಸವಲಿಂಗಸ್ವಾಮಿ ಪ್ರವಚನ ನೀಡಿ ೧೨ನೇ ಶತಮಾನದ ಬಸವಾದಿ ಶರಣರು ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದವರು. ಮೂಢನಂಬಿಕೆಗಳನ್ನು ತೊಡೆದು ಹಾಕಿ ಗಂಡು-ಹೆಣ್ಣು ಎಂಬ ಭೇದಬಾವವಿಲ್ಲದೇ ಕಾಯಕ ತತ್ವಕ್ಕೆ ಮಹತ್ವ ನೀಡಿ ಮಾನವ ಕುಲವೊಂದೆ ಎಂದು ಸಾರಿದರು. ಅವರ ಹಾದಿಯಲ್ಲೇ ಈ ಭಾಗದ ಸಿದ್ದಲಿಂಗೇಶ್ವರರು, ಮಹದೇಶ್ವರರು, ಗುರುಮಲ್ಲೇಶ್ವರರು ಸಾಗಿ ವೀರಶೈವ ಲಿಂಗಾಯಿತ ಧರ್ಮವನ್ನು ಪುನರ್‌ಜೀವಗೊಳಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಎಂಎಸ್ಸಿ ಭೂಗೋಳ ಶಾಸ್ತ್ರ ವಿಷಯದಲ್ಲಿ ಪ್ರಥಮ ರ್‍ಯಾಂಕ್‌ನಲ್ಲಿ ಪಡೆದ ಚಿನ್ನದ ಪದಕ ಪಡೆದ ಸಿ.ಎಂ. ಇಂಚರ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನಿಶ್ಚಿತ ಎಸ್. ಎಂಎಸ್ಸಿ ಗಣಿತ ಶಾಸ್ತ್ರ ವಿಷಯದಲ್ಲಿ ಪ್ರಥಮ ರ್‍ಯಾಂಕ್‌ನಲ್ಲಿ ಚಿನ್ನದ ಪದಕ ಪಡೆದ ಕುಮಾರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.ಮೇ ೫ರ ರಾತ್ರಿ ಮಠದ ಆವರಣದಲ್ಲಿ ಹಾಕಿದ್ದ ಭವ್ಯ ರಂಗಮಂದಿರಲ್ಲಿ ಸಿದ್ದಮಲ್ಲೇಶ್ವರ ಕಲಾ ಬಳಗದ ವತಿಯಿಂದ ಪ್ರಭುಲಿಂಗ ಲೀಲೆ ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ, ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘ ರಾಜೇಂದ್ರಸ್ವಾಮೀಜಿ, ಪಡಗೂರು ಅಡವಿ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಗೌಡಹಳ್ಳಿ ವಿರಕ್ತಮಠದ ಮರಿತೋಂಟದಾರ್ಯ ಸ್ವಾಮೀಜಿ, ಮೂಡುಗೂರು ಮಠದ ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ, ಸೇರಿದಂತೆ ವಿವಿದ ಮಠಗಳ ಪೀಠಾಧ್ಯಕ್ಷರು ಭಾಗವಹಿಸಿದ್ದರು. ಮಠದ ಚನ್ನಬಸವಸ್ವಾಮಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ೨೫ ಸಾವಿರ ಜನರು ಭಾಗವಹಿಸಿದ್ದರು. ಎರಡು ದಿನಗಳ ಕಾಲ ಎಲ್ಲರಿಗೂ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.