ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಬಂದಿಗೌಡ ಬಡಾವಣೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರ ಅಧ್ಯಕ್ಷತೆಯಲ್ಲಿ ಬಸವ ಜಯಂತಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್, ಬಸವಣ್ಣ ಅವರು ವಚನ ಸಾಹಿತ್ಯದ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದರು. ಹನ್ನೆರಡನೇ ಶತಮಾನದಲ್ಲಿ ವಚನಗಳ ಮೂಲಕ ಸಮಾಜವನ್ನು ತಿದ್ದಿದ ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಸಮಾನತೆ ಬಗ್ಗೆ ವಿಶ್ವಕ್ಕೆ ಮಾದರಿಯಾದರು. ಅವರ ತತ್ವ, ವಚನಗಳು ಸಾರ್ವಕಾಲಿಕ ಮೌಲ್ಯಗಳಾಗಿದ್ದು ಅದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದರು.
ಬಸವೇಶ್ವರರು ಅಂದು ಸಮಾಜದಲ್ಲಿ ಹಾಸು ಹೊಕ್ಕಾಗಿದ್ದ ಮೇಲು-ಕೀಳು, ಬಡವ-ಬಲ್ಲಿದ, ಎಂಬ ಅಸಮಾನತೆಯ ವಿರುದ್ಧ ಹೋರಾಟ ನಡೆಸಿದರು. ಸಮಾನತೆಯ ಬದುಕಿಗೆ ಒತ್ತು ಕೊಟ್ಟ ವ್ಯಕ್ತಿಯಾಗಿ ಪ್ರತಿಯೊಬ್ಬರ ಮನದಲ್ಲಿ ಹಾಸುಹೊಕ್ಕಾಗಿದ್ದಾರೆ ಎಂದರು.ಬಸವೇಶ್ವರರು ಸಾರಿ ಹೋದ ಸಂದೇಶಗಳನ್ನು ನಾವೆಲ್ಲರೂ ಜೀವನದಲ್ಲಿ ಪಾಲಿಸಿದರೆ ಸಮಾಜದಲ್ಲಿ ಅಶಾಂತಿ,ಅತೃಪ್ತಿ ಮತ್ತು ಅಸಹನೆ ಶಾಶ್ವತವಾಗಿ ದೂರವಾಗುತ್ತವೆ ಎಂದರು.
ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಕಾಂಗ್ರೆಸ್ ಮುಖಂಡರಾದ ಪ್ರೇಮ್‌ಕುಮಾರ್, ಕೊತ್ತತ್ತಿ ಮಹದೇವ, ಚಂದಗಾಲು ವಿಜಯ್‌ಕುಮಾರ್, ಚೆನ್ನಪ್ಪ, ಜ್ಯೋತಿ, ಹೊಂಬಯ್ಯ, ಜಯರಾಮ್, ಪ್ರಕಾಶ್ ಇತರರಿದ್ದರು.
ಕಾಯಕವೇ ಕೈಲಾಸ ಎಂಬ ಸಂದೇಶ ನೀಡಿದ ವಿಶ್ವಗುರು: ಡಾ.ಶ್ರೀಧರ
ಶ್ರೀರಂಗಪಟ್ಟಣ:ಕಾಯಕವೇ ಕೈಲಾಸ ಎಂಬ ಸಂದೇಶ ನೀಡಿದ ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳು ನಮಗೆ ಆದರ್ಶ ಪ್ರಾಯವಾಗಿವೆ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಯಕಯೋಗಿ, ವಿಶ್ವ ಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತೋತ್ಸವ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಜಗಜ್ಯೋತಿ ಬಸವಣ್ಣವರ ತತ್ವ ಆದರ್ಶಗಳನ್ನು ಸಮಾಜದಲ್ಲಿ ಎಲ್ಲರೂ ಅಳವಡಿಸಿಕೊಂಡಲ್ಲಿ ಬಸವ ಜಯಂತಿ ಆಚರಣೆ ಅರ್ಥಪೂರ್ಣ ವೆನಿಸುತ್ತದೆ ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಮಾತನಾಡಿ, ಬಸವಣ್ಣ ನವರು ಸಮಾಜದ ಎಲ್ಲಾ ವರ್ಗದ ಜನರನ್ನು ಒಂದುಗೂಡಿಸಿ ಜಾತೀಯತೆಯ ವಿರುದ್ಧ ಸಮರ ಸಾರಿದ್ದರು. ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಶಸ್ತ್ರಚಿಕಿತ್ಸಕ ಡಾ. ಶ್ರೀನಿವಾಸ ಮಾತನಾಡಿದರು. ಈ ವೇಳೆ ಶುಶ್ರೂಷಣಾಧಿಕಾರಿ ಕುಸುಮ, ಶಿಲ್ಪಾ ಎನ್ ಹಾಗೂ ಆಸ್ಪತ್ರೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.