ಹಾವೇರಿಯಲ್ಲಿ ಮಕ್ಕಳಿಗೆ ಹಾಲು ವಿತರಿಸಿ ಬಸವ ಪಂಚಮಿ ಆಚರಣೆ

| Published : Aug 09 2024, 12:46 AM IST

ಸಾರಾಂಶ

ಹಾವೇರಿ ನಗರದ ನಾಗೇಂದ್ರನಮಟ್ಟಿಯ ಸರ್ಕಾರಿ ಶಾಲೆ ನಂ.೮ರಲ್ಲಿ ಗುರುವಾರ ಬಸವ ಬಳಗದಿಂದ ವಚನ ಶ್ರಾವಣ ನಿಮಿತ್ತ ಆಯೋಜಿಸಲಾಗಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಲು ವಿತರಿಸಲಾಯಿತು.

ಹಾವೇರಿ: ಹಬ್ಬಗಳು ಮನುಷ್ಯನ ಪ್ರಗತಿಗೆ ಪೂರಕವಾಗಿದ್ದರೂ ಕೆಲವು ಆಚರಣೆಗಳು ಮೂಢನಂಬಿಕೆಗೆ ಪ್ರಚೋದನೆ ನೀಡುತ್ತಿವೆ. ಇದನ್ನು ಹೋಗಲಾಡಿಸಲು ನಾಗರ ಪಂಚಮಿಯಂದು ಮಕ್ಕಳಿಗೆ ಬಸವ ಬಳಗದಿಂದ ಹಾಲು ವಿತರಿಸುವ ಮೂಲಕ ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತಿದೆ ಎಂದು ಚಿಂತಕ ಶಿವಯೋಗಿ ಬೆನ್ನೂರು ಹೇಳಿದರು.

ನಗರದ ನಾಗೇಂದ್ರನಮಟ್ಟಿಯ ಸರ್ಕಾರಿ ಶಾಲೆ ನಂ.೮ರಲ್ಲಿ ಗುರುವಾರ ಬಸವ ಬಳಗದಿಂದ ವಚನ ಶ್ರಾವಣ ನಿಮಿತ್ತ ಆಯೋಜಿಸಲಾಗಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಲು ವಿತರಿಸಿ ಮಾತನಾಡಿದರು.

ಹುತ್ತಕ್ಕೆ, ಕಲ್ಲು ನಾಗರ ಮೂರ್ತಿಗೆ ಹಾಲು ಸುರಿದು ಅವೈಜ್ಞಾನಿಕವಾಗಿ ಆಚರಣೆಗೆ ಜನರು ಮುಂದಾಗುತ್ತಾರೆ. ಇದರಿಂದ ಅಪಾರ ಪ್ರಮಾಣ ಹಾಲು ವ್ಯರ್ಥವಾಗುತ್ತಿದೆ. ನಮ್ಮ ರಾಜ್ಯವೊಂದರಲ್ಲೇ ಪ್ರತಿ ವರ್ಷ ಅಪೌಷ್ಟಿಕತೆಯಿಂದ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಹಾಲನ್ನು ವ್ಯರ್ಥ ಮಾಡುವ ಬದಲಿಗೆ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಮತ್ತು ರೋಗಿಗಳಿಗೆ ಕೊಟ್ಟರೆ ಅವರ ಆರೋಗ್ಯ ಸುಧಾರಿಸುತ್ತದೆ. ಈ ಕುರಿತು ಜನರು ಚಿಂತಿಸಬೇಕು ಎಂದರು.

ದಾನಮ್ಮದೇವಿ ಟ್ರಸ್ಟ್ ಅಧ್ಯಕ್ಷೆ ಶೋಭಾತಾಯಿ ಮಾಗಾವಿ ಮಾತನಾಡಿ, ಅರ್ಥಪೂರ್ಣವಾಗಿ ಹಬ್ಬ ಆಚರಿಸುತ್ತಿರುವುದು ಬದಲಾವಣೆಯ ಸಂಕೇತವಾಗಿದೆ. ಎಲ್ಲರೂ ಮೂಢನಂಬಿಕೆಯಿಂದ ಹೊರಬರಬೇಕು ಎಂದು ಹೇಳಿದರು.

ಜಯಶ್ರೀ ಶಿವಪುರ ಮಾತನಾಡಿ, ಮಹಾಮಾನವತಾವಾದಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವಿಶ್ವಗುರು ಬಸವಣ್ಣನವರು ಶ್ರಾವಣ ಶುದ್ಧ ಪಂಚಮಿಯಂದು ಉರಿಯುಂಡ ಕರ್ಪುರದಂತೆ ಮಹಾಬಯಲಿನಲ್ಲಿ ಬಯಲಾದರು. ಆ ಮಹಾಗುರುವಿನ ಸ್ಮರಣೆಯ ನಿಮಿತ್ತ ಬಸವಭಕ್ತರು ಈ ದಿನವನ್ನು ಬಸವಪಂಚಮಿ ಎಂದು ಆಚರಿಸುತ್ತಾರೆ. ಪ್ರತಿಯೊಬ್ಬರು ನಿತ್ಯ ಶರಣ ವಚನ ಪಠಣ ಮಾಡುವ ಮೂಲಕ ಶರಣರ ಹಾದಿಯಲ್ಲಿ ನಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಚನ್ನಬಸವಣ್ಣ ರೊಡ್ಡನವರ ಮಾತನಾಡಿ, ಹಾವು ಹಾಲು ಕುಡಿಯುವುದಿಲ್ಲ. ಹುತ್ತ, ಹಾವುಗಳಿಗೆ ವ್ಯರ್ಥವಾಗಿ ಹಾಲು ಎರೆಯುವ ಬದಲು ರೋಗಿಗಳಿಗೆ, ಮಕ್ಕಳಿಗೆ ಹಾಲು ವಿತರಿಸಿದರೆ ರೋಗಿಗಳಿಗೂ, ಮಕ್ಕಳಿಗೂ ಹಿತವಾಗುತ್ತದೆ. ಹುತ್ತ, ಹಾವುಗಳಿಗೆ ಹಾಲು ಎರೆಯುವಂತಹ ಮೂಢನಂಬಿಕೆಗಳನ್ನು ತೊರೆದು ಪ್ರಗತಿಪರ ಚಿಂತನೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮಲ್ಲೇಶಪ್ಪ ಪಟ್ಟಣಶೆಟ್ಟಿ, ಮುರುಗೆಪ್ಪ ಕಡೇಕೊಪ್ಪ, ಕೆ.ಎಂ. ಬಿಜಾಪುರ, ಉಳಿವೆಪ್ಪ ಪಂಪಣ್ಣನವರ, ಮಾಲತೇಶ ಕರಿದ್ಯಾಮಣ್ಣನವರ, ಎಸ್.ಸಿ. ಹೊಸಮನಿ, ಗಂಗಣ್ಣ ಮಾಸೂರ ಇತರರು ಇದ್ದರು.

ಶಿವಬಸಪ್ಪ ಮುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಸ್. ಕೋಳಿನಿಂಗಣ್ಣನವರ ವಂದಿಸಿದರು.