ಪ್ರತಿಯೊಬ್ಬ ವಿದ್ಯಾರ್ಥಿಯು ಆದರ್ಶ ಪ್ರಜೆಯಾಗಲಿ: ನಾಗರಾಜ ಅರಳಿ

| Published : Aug 09 2024, 12:46 AM IST

ಪ್ರತಿಯೊಬ್ಬ ವಿದ್ಯಾರ್ಥಿಯು ಆದರ್ಶ ಪ್ರಜೆಯಾಗಲಿ: ನಾಗರಾಜ ಅರಳಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಮೊದಲು ದೇಶದ ಆದರ್ಶದ ಪ್ರಜೆಗಳಾಗಬೇಕು.

ಕಾಲೇಜು ಸಂಸತ್ ಉದ್ಘಾಟನೆ ಸಮಾರಂಭದಲ್ಲಿ ನಿವೃತ್ತ ನ್ಯಾಯಾಧೀಶ

ಕನ್ನಡಪ್ರಭ ವಾರ್ತೆ ಕುಷ್ಟಗಿ

ವಿದ್ಯಾರ್ಥಿಗಳು ಮೊದಲು ದೇಶದ ಆದರ್ಶದ ಪ್ರಜೆಗಳಾಗಬೇಕು ಎಂದು ನಿವೃತ್ತ ನ್ಯಾಯಾಧೀಶ ನಾಗರಾಜ ಅರಳಿ ಹೇಳಿದರು.

ತಾಲೂಕಿನ ತಾವರಗೇರಾ ಪಟ್ಟಣದ ಸರ್ ಎಂ. ವಿಶ್ವೇಶ್ವರಯ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಹಾಗೂ ಕಾಲೇಜು ಸಂಸತ್ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಏನಾದರು ಆಗುವ ಮೊದಲು ರಾಷ್ಟ್ರದ ಆದರ್ಶ ಪ್ರಜೆಯಾಗಬೇಕು. ಅಂದಾಗ ಮಾತ್ರ ರಾಜ್ಯದ ನಾಯಕರು ಸಹ ಆದರ್ಶಗಳಾಗಿರುತ್ತಾರೆ ಎಂದರು.

ಆದರ್ಶ ಪ್ರಜೆಯಾಗುವ ಮೂಲಕ ಪ್ರಾಮಾಣಿಕತೆ ಇರುವಂತಹವರನ್ನು ನಾಯಕರನ್ನಾಗಿ ಆಯ್ಕೆ ಮಾಡಬೇಕು. ಸದ್ಯ ಆದರ್ಶ ನಾಯಕರು ಯಾರು ಇದ್ದಾರೆ. ರಾಜಕೀಯ ಪರಿಸ್ಥಿತಿ ಕೆಟ್ಟು ಹೋಗಿದ್ದು, ಅದನ್ನು ಸರಿಪಡಿಸದೆ ಇದ್ದರೆ ನಿಮ್ಮ ಮುಂದಿನ ಭವಿಷ್ಯದ ಜೀವನವು ಕಠಿಣವಾಗುತ್ತದೆ ಎಂದರು.

ಶಿಕ್ಷಕರು ಉತ್ತಮವಾದ ಶಿಕ್ಷಣ ನೀಡುವ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸುವ ಕೆಲಸ ಮಾಡಬೇಕು. ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಮಕ್ಕಳು ಪತ್ರಿಕೆಗಳನ್ನು ಓದಬೇಕು. ಅದರಿಂದ ಜ್ಞಾನ ವೃದ್ದಿಯಾಗುತ್ತದೆ. ಸಮಾಜದಲ್ಲಿರುವ ಕಳೆಯನ್ನು ಕಿತ್ತುವ ಮೂಲಕ ಯಶಸ್ವಿ ವ್ಯಕ್ತಿಯಾಗಬೇಕು. ನಿಮಗೊಂದು ಗುರಿ ಇರಬೇಕು. ಗುರಿ ಮುಟ್ಟುವ ಛಲ ಇರಬೇಕು ಎಂದರು.

ಮೊಬೈಲ್, ಟಿವಿ, ಧಾರಾವಾಹಿಗಳಿಂದ ದೂರವಿರಬೇಕು. ಮನಸ್ಸನ್ನು ನಿಗ್ರಹದಲ್ಲಿ ಇಟ್ಟುಕೊಂಡಿರಬೇಕು. ಏಕಾಗ್ರತೆಯಿಂದ ಓದಬೇಕು. ಮತ್ತೆ ಮತ್ತೆ ಅಧ್ಯಯನ ಇರಬೇಕು. ಆತ್ಮವಿಶ್ವಾಸ ಇರಬೇಕು. ನಿನ್ನಲ್ಲಿ ನಿನ್ನ ಬಗ್ಗೆ ನಂಬಿಕೆ ಇರಬೇಕು. ಸಮಯವನ್ನು ಸಾರ್ಥಕವಾಗಿ ಉಪಯೋಗಿಸಬೇಕು. ಸೋಲನ್ನು ಸೋಲಿಸಿ ಹೇಗೆ ಗೆಲುವು ಸಾಧಿಸಬೇಕೆಂಬುದನ್ನು ಹೇಳಿದರು.

ಪಿಎಸ್‌ಐ ನಾಗರಾಜ ಕೊಟಗಿ ಮಾತನಾಡಿ, ಜಗತ್ತಿನಲ್ಲಿ ಮೋಸ ವಂಚನೆ ತುಂಬಿದೆ. ಅಮಾಯಕರೇ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಕ್ರೀಡೆಯಿಂದ ಸ್ಪೂರ್ತಿ ಸಿಗುತ್ತದೆ. ಚೆನ್ನಾಗಿ ಓದಬೇಕು ಎಂದರು. ನಂತರ ಪೋಕ್ಸೋ ಕಾಯ್ದೆ ಕುರಿತು ಸಮಗ್ರ ಮಾಹಿತಿ ನೀಡಿದರು.

ಕಳೆದ ಸಾಲಿನಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಚಂದ್ರಶೇಖರ ನಾಲತವಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಮರೇಗೌಡ ಸರನಾಡಗೌಡ್ರು, ಹನಮಂತಪ್ಪ ಶಿರವಾರ, ನರಹರಿಯಪ್ಪ ಕೊಂಕಲ್ , ಶ್ಯಾಮಣ್ಣ ಸೈಂದರ ಸೇರಿದಂತೆ ಇತರರು ಇದ್ದರು.