ಸಾಮಾಜಿಕ ಪ್ರಗತಿಗೆ ಬಸವ ತತ್ವ ಇಂದಿಗೂ ಪ್ರಸ್ತಿತ

| Published : May 10 2024, 11:46 PM IST

ಸಾರಾಂಶ

ಬಸವಣ್ಣ ನವರ ಸಿದ್ದಾಂತಗಳ ಮೇಲೆ ಇಂದಿನ ನಮ್ಮ ಪ್ರಜಾಪ್ರಭುತ್ವ ನಿಂತಿದೆ. ದೊಡ್ಡ ದೊಡ್ಡ ಮಹಾ ಗ್ರಂಥಗಳಲ್ಲಿರುವ ಆದರ್ಶಗಳ ಸಾರಂಶವನ್ನು ವಚನಗಳ ಮೂಲಕ ಸರಳ ವಿಧಾನದಲ್ಲಿ ಜನರಿಗೆ ತಲುಪಿಸುವ ಕಾರ್ಯವನ್ನು ಬಸವಣ್ಣ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

12 ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಜಾತಿ ಪದ್ಧತಿ,ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ,ಮೇಲು ಕೀಳೆಂಬ ಮೂಢನಂಬಿಕೆ ಆಚರಣೆಗಳನ್ನು ಧಿಕ್ಕರಿಸಿ ಸಮಾನ ಬದುಕನ್ನು ರೂಪಿಸಿಕೊಳ್ಳುವಂತೆ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ವಚನಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಿದ ಮಹಾನ್ ತತ್ವಜ್ಞಾನಿ ಬಸವಣ್ಣನವರ ವಚನಗಳು ಎಲ್ಲರಿಗೂ ಆದರ್ಶಪ್ರಾಯವಾಗಿವೆ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು.

ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಗಜ್ಯೋತಿ ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮ ನವರ ಜಯಂತಿ ಕಾರ್ಯಕ್ರಮಕ್ಕೆ ಅವರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪ್ರಜಾಪ್ರಭುತ್ವದ ರೂವಾರ ಬಸವಣ್ಣ

ಬಸವಣ್ಣ ನವರ ಸಿದ್ದಾಂತಗಳ ಮೇಲೆ ಇಂದಿನ ನಮ್ಮ ಪ್ರಜಾಪ್ರಭುತ್ವ ನಿಂತಿದೆ. ದೊಡ್ಡ ದೊಡ್ಡ ಮಹಾ ಗ್ರಂಥಗಳಲ್ಲಿರುವ ಆದರ್ಶಗಳ ಸಾರಂಶವನ್ನು ವಚನಗಳ ಮೂಲಕ ಸರಳ ವಿಧಾನದಲ್ಲಿ ಜನರಿಗೆ ತಲುಪಿಸುವ ಕಾರ್ಯವನ್ನು ಬಸವಣ್ಣ ಮಾಡಿದ್ದಾರೆ. ಸಮಾಜದಲ್ಲಿ ರಾಜಕೀಯ, ಆರ್ಥಿಕ, ಶೆಕ್ಷಣಿಕ ಮತ್ತು ಸಾಮಾಜಿಕ ಸಮಾನತೆ ಎಲ್ಲರಿಗೂ ಸಮಾನ ಎಂದು ಬಸವಣ್ಣನವರು ಸಾರಿದರು. ಅಂದಿನ ಅನುಭವ ಮಂಟಪವು ಇಂದಿನ ಸಂಸತ್ ಹಾಗೂ ವಿಧಾನ ಪರಿಷತ್‌ಗೆ ಸಮ ಎಂದು ತಿಳಿಸಿದರು. ಮಹಿಳೆಯರಿಗೆ ಮಾದರಿ ಮಲ್ಲಮ್ಮ

14ನೇ ಶತಮಾನದ ಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮನವರು ಬಸವಣ್ಣನವರ ಅನುಯಾಯಿಯಾಗಿದ್ದು, ಮಲ್ಲಮ್ಮ ಅವರ ಧರ್ಮ ನಿಷ್ಠೆ, ಧಾರ್ಮಿಕ ಭಾವನೆಯನ್ನು ಎಲ್ಲರೂ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಸ್ತ್ರೀ ಕುಲಕ್ಕೆ ಈಕೆ ಮಾದರಿ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಡಾ. ಎನ್ ತಿಪ್ಪೇಸ್ವಾಮಿ ಮಾತನಾಡಿ, ಬಸವಣ್ಣನವರು ಸಮ ಸಮಾಜದ ಕಲ್ಪನೆಯನ್ನು ಸಮಾಜದಲ್ಲಿ ಅನುಷ್ಠಾನಕ್ಕೆ ತರಲು ಕಾರಣಕರ್ತರು. ಸೂಳೆ ಸಂಕವ್ವನಂತಹ ದಮನಿತ ಮಹಿಳೆಯರನ್ನೂ ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂಬ ಸಮಸಮಾಜದ ಪರಿಕಲ್ಪನೆಯನ್ನು ಹೊಂದಿದ್ದ ವಿಶ್ವ ಗುರು ಬಸವಣ್ಣನವರು ಕರ್ನಾಟಕ ಕಂಡ ಮಹಾನ್ ದಾರ್ಶನಿಕ ಎಂದರು.

ಪ್ರಣಿಗಳ ಬಗ್ಗೆ ದಯೆ ತೋರಿ

ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವುದು ಎಲ್ಲರ ಕರ್ತವ್ಯ ಎಂಬುದು ಇಂದಿಗೂ ಪ್ರಸ್ತುತವಾಗಿದೆ. ಬರಗಾಲದ ಸಂದರ್ಭದಲ್ಲಿ ನೀರಿಗಾಗಿ ಆಹಾರಕ್ಕಾಗಿ ಪ್ರಾಣಿಗಳು ಕಾಡಿನಿಂದ ಹಳ್ಳಿಗಳತ್ತ ನೀರು ಆಹಾರ ಅರಸಿ ಬರುವ ಸಂದರ್ಭದಲ್ಲಿ ನಾವು ಪ್ರಾಣಿದಯೆಯುಳ್ಳವರಾಗಿ ಅವುಗಳಿಗೂ ಈ ಪರಿಸರದ ಮೇಲೆ ಹಕ್ಕಿದೆ ಎಂದು ಜೀವದಯೆ ತೋರಿ ನೆರವಾಗುವುದಾದರೆ ಬಸವಣ್ಣನವರ ಬೋಧನೆ ಅನುಷ್ಠಾನಗೊಂಡಂತೆ ಎಂದರು.

ಬುದ್ಧ, ಬಸವ, ಅಂಬೇಡ್ಕರ್ ರವರು ಸಮಾನತೆಯೆಂಬ ಒಂದೇ ವಿಚಾರವನ್ನು ಅವರವರ ಕಾಲಕ್ಕೆ ಅನುಗುಣವಾಗಿ ವಿಭಿನ್ನವಾಗಿ ನಿರೂಪಿಸಿದರು. ಅನುಭವ ಮಂಟಪವು ಹಲವರ ಅನುಭವಗಳನ್ನು ವ್ಯಕ್ತಪಡಿಸಲು ಸಿಕ್ಕಿದ ಒಂದು ಬೃಹತ್ ವೇದಿಕೆಯಾಗಿತ್ತು.ಇವರ ತತ್ವಗಳನ್ನು ಹಾಗೂ ವಿಚಾರಗಳನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ರೈ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಷಾದ್ರಿ,ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಪ್ರತಿನಿಧಿ ಸದಾಶಿವ , ವೀರಶೈವ ಸೇವಾ ಸಮಾಜದ ಮುಖಂಡರಾದ ಪರಶಿವಮೂರ್ತಿ, ಗುಬ್ಬಿಶೆಟ್ಟರು, ರಾಜೇಂದ್ರ ಕುಮಾರ್, ಕಿರಣ್, ಪ್ರಜ್ವಲ್, ಚೇತನ್, ಸಮುದಾಯದ ಮುಖ್ಯಸ್ಥರು,ಪದಾಧಿಕಾರಿಗಳು ಸಾರ್ವಜನಿಕರು ಇದ್ದರು.