ಬಸವ ತತ್ವ, ಸಂವಿಧಾನ ಎರಡನ್ನು ರಕ್ಷಣೆ ಮಾಡಬೇಕಿದೆ: ರಂಜಾನ್‌ ದರ್ಗಾ

| Published : May 20 2024, 01:38 AM IST

ಬಸವ ತತ್ವ, ಸಂವಿಧಾನ ಎರಡನ್ನು ರಕ್ಷಣೆ ಮಾಡಬೇಕಿದೆ: ರಂಜಾನ್‌ ದರ್ಗಾ
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದಲ್ಲಿಯೇ ಎಲ್ಲ ಕಾಯಕ ವರ್ಗಗಳ 700ಕ್ಕೂ ಹೆಚ್ಚಿನ ಪ್ರತಿನಿಧಿಗಳಿಂದ ಅನುಭವ ಮಂಟಪ ರೂಪುಗೊಂಡಿತ್ತು. ಅದೇ ಮಾದರಿಯಲ್ಲಿಯೇ ಇಂದಿನ ಪಾರ್ಲಿಮೆಂಟ್ ಕೂಡ ಇದೆ. ಆದರೆ, ಬಸವ ತತ್ವವನ್ನು ಕಡೆಗಣಿಸಲಾಗುತ್ತಿದೆ. ಹಾಗಾಗಿ ಬಸವಣ್ಣನ ಪಾರ್ಲಿಮೆಂಟ್ ಸ್ಥಾಪನೆಯಾಗಬೇಕು. ಬಸವ ತತ್ವ ಮತ್ತು ಅಂಬೇಡ್ಕರ್‌ರ ಸಂವಿಧಾನ ರಕ್ಷಣೆಯಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ವರನ್ನೂ ಒಳಗೊಂಡ ಸಮ ಸಮಾಜದ ಪರಿಕಲ್ಪನೆಯ ಬಸವ ತತ್ವದ ಆಧಾರದಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ. ಇಂದು ಬಸವ ತತ್ವ ಹಾಗೂ ಸಂವಿಧಾನ ಎರಡನ್ನು ರಕ್ಷಣೆ ಮಾಡಬೇಕಿದೆ ಎಂದು ಸಾಮಾಜಿಕ ಚಿಂತಕ ರಂಜಾನ್‌ದರ್ಗಾ ಪ್ರತಿಪಾದಿಸಿದರು.

ನಗರದ ಗಾಂಧಿ ಭವನದಲ್ಲಿ ಬಸವ ಜಯಂತಿ ಆಚರಣೆ ಅಂಗವಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಏರ್ಪಡಿಸಿದ್ದ ಬಸವ ತತ್ವ ರಕ್ಷಣೆಯಲ್ಲಿ ಸಂವಿಧಾನ ಕುರಿತ ವಿಚಾರ ಚಿಂತನೆ ಮತ್ತು ಬಸವಶ್ರೀ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಜಗತ್ತಿನಲ್ಲಿಯೇ ಎಲ್ಲೂ ಕಾಣದಿರುವಂತಹ ಶರಣ ಸಂಕುಲ ನಮ್ಮ ಕನ್ನಡದ ನೆಲದಲ್ಲಿ ಒಂದುಗೂಡಿತ್ತು. ಬಸವಣ್ಣನವರ ಇವ ನಮ್ಮವ ಇವ ನಮ್ಮವ ಎಂಬ ಎಲ್ಲರನ್ನೂ ನಮ್ಮವರೆಂದು ಕಾಣುವ ಸೂತ್ರವನ್ನು ಸಂವಿಧಾನದ ಪೀಠಿಕೆಯಲ್ಲೇ ಕಾಣಿಸಲಾಗಿದೆ ಎಂದರು.

12ನೇ ಶತಮಾನದಲ್ಲಿಯೇ ಎಲ್ಲ ಕಾಯಕವರ್ಗಗಳ 700ಕ್ಕೂ ಹೆಚ್ಚಿನ ಪ್ರತಿನಿಧಿಗಳಿಂದ ಅನುಭವ ಮಂಟಪ ರೂಪುಗೊಂಡಿತ್ತು. ಅದೇ ಮಾದರಿಯಲ್ಲಿಯೇ ಇಂದಿನ ಪಾರ್ಲಿಮೆಂಟ್ ಕೂಡ ಇದೆ. ಆದರೆ, ಬಸವ ತತ್ವವನ್ನು ಕಡೆಗಣಿಸಲಾಗುತ್ತಿದೆ. ಹಾಗಾಗಿ ಬಸವಣ್ಣನ ಪಾರ್ಲಿಮೆಂಟ್ ಸ್ಥಾಪನೆಯಾಗಬೇಕು. ಬಸವ ತತ್ವ ಮತ್ತು ಅಂಬೇಡ್ಕರ್‌ರ ಸಂವಿಧಾನ ರಕ್ಷಣೆಯಾಗಬೇಕೆಂದು ಹೇಳಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಮಾತನಾಡಿ, ಕಸುಬಿನ ಆಧಾರದಲ್ಲಿ ಜಾತಿ ಮಾಡಲಾಗಿದೆ. ಆದರೆ, ಇಂದು ಅದೇ ಜಾತಿಗಳನ್ನು ರಾಜಕೀಯ ಲಾಭಕ್ಕೆ ಬಳಸಲಾಗುತ್ತಿದೆ. ಪರಿಣಾಮ ಜಾತಿ ಮತ, ಧರ್ಮಾಚರಣೆಗಳು ಗಟ್ಟಿಯಾಗಿ ಬೇರೂರುತ್ತಿವೆ. ಇಂದಿನ ಆಧುನಿಕ ದಿನಮಾನಗಳಲ್ಲೂ ಜಾತಿ ಎಂಬುದು ಎಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಇತ್ತೀಚೆಗೆ ಮಂಡ್ಯದಂತಹ ನೆಲದಲ್ಲಿ ನಡೆದಿರುವ ಮರ್ಯಾದಾ ಹತ್ಯೆಗಳೇ ಸಾಕ್ಷಿ ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ಕಾಲಘಟ್ಟದಲ್ಲಿ ಸಮಾಜವನ್ನು ಸರಿದಾರಿಗೆ ತರಬೇಕಾದ ಮಠ ಮಾನ್ಯಗಳೂ ಕೂಡ ರಾಜಕಾರಣಕ್ಕೆ ಇಳಿದುಬಿಟ್ಟಿವೆ. ಹಾಗಾಗಿ ಇಲ್ಲಿ ಧನಿಕನಿಗೊಂದು ನ್ಯಾಯ ಬಡವನಿಗೊಂದು ನ್ಯಾಯ ಎಂಬಂತಾಗಿದೆ. ಹಾಗಾಗಿ ನಾವು ಮತ್ತೆ ಹಿಂದಕ್ಕೆ ಹೋಗಿದ್ದೇವಾ ಅಥವಾ ಮುಂದಕ್ಕೆ ಕಾಲಿರಿಸಿದ್ದೇವಾ ಎಂಬ ಸಂಶಯ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಣಬಲ ಮತ್ತು ಜಾತಿಬಲದ ಮೇಲೆ ರಾಜಕೀಯ ನಿಂತಿದೆ. ಹಾಗಾಗಿ ಸಾಮಾಜಿಕ ನ್ಯಾಯ ಎಂಬುದು ಮರೀಚಿಕೆಯಾಗುತ್ತಿದೆ ಎಂದು ವಿಷಾದಿಸಿದರು.

ಪ್ರಾಸ್ತಾವಿಕ ನುಡಿಯಾಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಇಂದಿನ ಆಧುನಿಕ ಯುಗದಲ್ಲೂ ಜಾತೀಯತೆ, ಕೋಮುವಾದ, ಮಹಿಳಾ ಶೋಷಣೆ ಮುಂದುವರೆದಿದೆ. ಶೋಷಿತರು ಮತ್ತು ತಬ್ಬಲಿ ಸಮಾಜಗಳು ಉಳಿವಿನ ಹೋರಾಟ ನಡೆಸುತ್ತಿವೆ.. ಈ ವ್ಯವಸ್ಥೆಯ ಸುಧಾರಣೆಗೆ ಬಸವ ತತ್ವವೊಂದೇ ಪರಿಹಾರ ಮಾರ್ಗ ಎಂದರು.

ಬಸವ ತತ್ವದ ಆಶಯದಲ್ಲೇ ರೂಪುಗೊಂಡಿರುವ ಸಂವಿಧಾನ ಸಂರಕ್ಷಣೆ ಮೂಲಕ ಆಧುನಿಕ ಅನುಭವ ಮಂಟಪವನ್ನು ಜೀರ್ಣೋದ್ಧಾರ ಮಾಡಬೇಕಿದೆ ಎಂದರು.

ಬಳಿಕ ಜಿಲ್ಲೆಯ ವಿವಿಧ ಕಾಯಕ ವರ್ಗಗಳ 12 ಮಂದಿ ಸಾಧಕರಿಗೆ ಬಸವಶ್ರೀ ಪ್ರಶಸ್ತಿ ಹಾಗೂ ಕಾಯಕಯೋಗಿ ಪ್ರತಿಷ್ಠಾನದ ವತಿಯಿಂದ ಸಾಮಾಜಿಕ ಚಿಂತಕ ರಂಜಾನ್‌ದರ್ಗಾ ಅವರಿಗೆ ಕಾಯಕಯೋಗಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮೈಶುಗರ್ ಅಧ್ಯಕ್ಷರಾದ ಸಿ.ಡಿ.ಗಂಗಾಧರ್, ಕಾಯಕಯೋಗಿ ಪ್ರತಿಷ್ಠಾನದ ಎಂ.ಶಿವಕುಮಾರ್, ಬಾಬುನಾಯಕ್, ಸುರೇಶ್‌ಬಾಬು ಮತ್ತಿತರರು ಪಾಲ್ಗೊಂಡಿದ್ದರು.ಅನುಭವ ಮಂಟಪದ ಮಾದರಿಯಲ್ಲಿ ಸಮಾಜದ ವಿವಿಧ ವರ್ಗಗಳ ಸಾಧಕರನ್ನು ಗುರುತಿಸಿ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದು ವಿಶೇಷವಾಗಿತ್ತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಕವಿ ಕೆ.ಪಿ.ಮೃತ್ಯುಂಜಯ, ದಸಂಸ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ, ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಬೆಟ್ಟಹಳ್ಳಿ ಮಂಜುನಾಥ್, ಶ್ರೀರಂಗಪಟ್ಟಣ ತಾಲೂಕು ಪ್ರಜ್ಞಾವಂತರ ವೇದಿಕೆ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ನಾಗಮಂಗಲ ಸಾವಿತ್ರಮ್ಮ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಟಿ.ಶ್ರೀನಿವಾಸ್, ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಆರ್. ಚಂದ್ರಶೇಖರ್, ಕುಂಬಾರ ಸಮಾಜದ ಹಿರಿಯ ಮುಖಂಡ ಅರಕೆರೆ ದಾಸಪ್ಪ, ಮಡಿವಾಳ ಸಮುದಾಯದ ಮಹಿಳಾ ಮುಖಂಡರಾದ ಅಕ್ಕಿಹೆಬ್ಬಾಳು ಮಣಿಯಮ್ಮ, ಗೊಲ್ಲ ಸಮುದಾಯದ ಹಿರಿಯ ಮುಖಂಡ ಗಿರಿಯಪ್ಪ ಗೊಲ್ಲರದೊಡ್ಡಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.