ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಮ ಸಮಾಜ ನಿರ್ಮಾಣಕ್ಕಾಗಿ ಬಸವಾದಿ ಶರಣರು ನೀಡಿದ ಕೊಡುಗೆ ಅನನ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಲಕ್ಷ್ಮಿ ಮೋರೆ ಹೇಳಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ೧೨ನೇ ಶತಮಾನದ ಶರಣರ ಸಂದೇಶಗಳು ಹಾಗೂ ವಚನ ಸಾಹಿತ್ಯದ ಕುರಿತು ಚಿಂತನೆ ಎಂಬ ಎರಡು ದತ್ತಿ ಗೋಷ್ಠಿಗಳ ಉದ್ಘಾಟಿಸಿ ಮಾತನಾಡಿದರು. ಬಸವಾದಿ ಶರಣರ ಚಿಂತನೆಗಳು ಸಮ ಸಮಾಜ ನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸಿದರು. ಅವರ ಆದರ್ಶಗಳನ್ನು ನಾವು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸುಜಾತಾ ಪಟ್ಟಣಶೆಟ್ಟಿ ಮಾತನಾಡಿ, ದತ್ತಿ ಗೋಷ್ಠಿಗಳ ಮೂಲಕ ಹಿರಿಯರ ಸ್ಮರಣೆ ಮಾಡುವುದು ನಿಜಕ್ಕೂ ನಮಗೆ ಒಂದು ಹಬ್ಬವಿದ್ದಂತೆ. ಈ ಹಿರಿಯರ ಹಬ್ಬದಲ್ಲಿ ಇಂದು ನಾವೆಲ್ಲ ೧೨ನೇ ಶತಮಾನದ ಶರಣರು ಕಾಯಕ, ದಾಸೋಹಗಳಿಗೆ ನೀಡಿದ ಮಹತ್ವವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅರಿತುಕೊಂಡು ಬಾಳುವುದು ಅತ್ಯಂತ ಮಹತ್ವದ ಸಂಗತಿ ಎಂದರು.ಶಿಕ್ಷಕ, ಸಾಹಿತಿ ಸಂತೋಷ ಬಂಡೆ ಮಾತನಾಡಿ, ನಡೆ-ನುಡಿಗಳನ್ನು ಒಂದಾಗಿಸಿ ನಮಗೆಲ್ಲ ಬದುಕಿನ ದಾರಿಯನ್ನು ತೋರಿಸಿಕೊಟ್ಟು ಹೋದ ಶರಣರ ಸಂದೇಶಗಳನ್ನು ಮೆಲುಕು ಹಾಕಬೇಕಿದೆ. ಅರಿತರೆ ಶರಣ ಮರೆತರೆ ಮಾನವ ಎಂಬುದನ್ನು ನಾವು ಮರೆಯಬಾರದು ಎಂದರು.ಸಾಹಿತಿ ಸುಜಾತಾ ಹ್ಯಾಳದ ಮಾತನಾಡಿ, ವಚನಗಳ ತಾತ್ಪರ್ಯವನ್ನು ತಿಳಿದುಕೊಂಡು ಉತ್ತಮ ಜೀವನವನ್ನು ಸಾಗಿಸಿದಾಗ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಎ.ಎಂ.ಹಳ್ಳೂರ, ಸುರಮ್ಮಾ ಪಾಟೀಲ, ಎಂ.ಜಿ.ಮೋಟಗಿ, ಸರ್ವಾನಂದ ಕೂಬರಡ್ಡಿ, ರವಿ ಬಿರಾದಾರ ಉಪಸ್ಥಿತರಿದ್ದು ಮಾತನಾಡಿದರು. ಇದೇ ಸಂದರ್ಭದಲ್ಲಿ ದೇವರ ಹಿಪ್ಪರಗಿಯ ಮೊರಾರ್ಜಿ ವಸತಿ ಶಾಲೆಯ ಸಹ ಶಿಕ್ಷಕರಾದ ರಾಜಶೇಖರ ಕಂಬಾರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಕೋಶಾಧ್ಯಕ್ಷ ಡಾ.ಸಂಗಮೇಶ ಮೇತ್ರಿ, ಕೆ.ಎಸ್.ಹಣಮಾಣಿ, ರಾಜೇಸಾಬ ಶಿವನಗುತ್ತಿ, ಡಾ.ಸುರೇಶ ಕಾಗಲಕರ ರೆಡ್ಡಿ, ಶ್ರೀಕಾಂತ ನಾಡಗೌಡ, ದ್ಯಾಮನಗೌಡ ಪಾಟೀಲ, ಕೀರ್ತಿ ಭಜಂತ್ರಿ, ಲತಾ ಗುಂಡಿ, ಗಂಗಮ್ಮ ರೆಡ್ಡಿ, ರಾಮಗೊಂಡ ಪಡನಾಡ, ಎಂ.ಡಿ ಬಿಳಿಜಾಡರ, ರಹಿಂ ಮಲೀಕ ಹಳ್ಳೂರ, ಶಾಂತಾ ವಿಭೂತಿ, ಎಸ್.ಎಂ.ಬಿರಾದಾರ, ಫಕ್ರುದ್ದಿನ್ ಹಿರೇಕೊಪ್ಪ ಉಪಸ್ಥಿತರಿದ್ದರು. ಶಶಿಕಲಾ ನಾಯ್ಕೋಡಿ ಪ್ರಾರ್ಥಿಸಿದರು. ಸುರೇಶ ಜತ್ತಿ ಸ್ವಾಗತಿಸಿ ಗೌರವಿಸಿದರು. ಡಾ.ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುದೇವಿ ಬಿರಾದಾರ ನಿರೂಪಿಸಿದರು. ವಿಜಯಲಕ್ಷ್ಮಿ ಹಳಕಟ್ಟಿ ವಂದಿಸಿದರು. ಮೆಹತಾಬ ಕಾಗವಾಡ ತತ್ವಪದವನ್ನು ಹಾಡಿ ರಂಜಿಸಿದರು.