ಸಾರಾಂಶ
ಬೆಂಗಳೂರು : ನಗರದ ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಕಳೆಗಟ್ಟಿದ್ದು, ವಾರಾಂತ್ಯದ ಹಿನ್ನೆಲೆಯಲ್ಲಿ ಭಾನುವಾರ ಜಾತ್ರೆಯ ವಾತಾವರಣವಿತ್ತು. ಜನ ಮುಗಿಬಿದ್ದು, ಬಗೆಬಗೆಯ ಕಡಲೆಕಾಯಿ ಖರೀದಿಸಿ ಸಂಭ್ರಮಿಸಿದರು.
ಕಡೆಯ ಕಾರ್ತಿಕ ಸೋಮವಾರವಾದ ಇಂದು ಪಾರಂಪರಿಕ ಪರಿಷೆಗೆ ಅಧಿಕೃತ ಚಾಲನೆ ದೊರೆಯಲಿದೆ. ಆದಾದ್ಯೂ ಭಾನುವಾರವೇ ಪರಿಷೆಯ ಸಂಭ್ರಮ ಜೋರಾಗಿತ್ತು. ದೊಡ್ಡ ಗಣಪತಿ ದೇವಸ್ಥಾನದ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ರಾಶಿ ರಾಶಿ ಕಡಲೆಕಾಯಿ ವ್ಯಾಪಾರ ನಡೆಯಿತು. ರಾಮಕೃಷ್ಣ ಆಶ್ರಮ ವೃತ್ತದಿಂದ ಕಡಲೆ ಜಾತ್ರೆ ಆರಂಭವಾಗುತ್ತಿದ್ದು, ಬ್ಯೂಗಲ್ ಕಾಮತ್ ಹೋಟೆಲ್ ಸರ್ಕಲ್‌ವರೆಗೆ ಜನ ಕಿಕ್ಕಿರಿದು ಸೇರಿದ್ದರು.
ಮಕ್ಕಳ ಆಟಿಕೆ, ಗೃಹೋಪಯೋಗಿ, ತಿನಿಸು ಸೇರಿ ತರಹೇವಾರಿ ವ್ಯಾಪಾರ ಮಳಿಗೆಗಳು ತಲೆ ಎತ್ತಿವೆ. ಬಸವನಗುಡಿ ದೊಡ್ಡಗಣಪತಿ ದೇವಸ್ಥಾನಕ್ಕೆ ಹೊಂದಿಕೊಂಡ ಇತರ ರಸ್ತೆಗಳು ಮಳಿಗೆಗಳು, ಬೀದಿ ವ್ಯಾಪಾರಸ್ಥರಿಂದ ತುಂಬಿ ಹೋಗಿವೆ. ರಸ್ತೆಗಳು ಅಲಂಕೃತ ವಿದ್ಯುದೀಪಗಳಿಂದ ಜಗಮಗಿಸುತ್ತಿವೆ.
ಇಂದು ಚಾಲನೆ
ಸೋಮವಾರ ಬೆಳಗ್ಗೆ 10ಕ್ಕೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಪರಿಷೆಗೆ ಚಾಲನೆ ನೀಡಲಿದ್ದಾರೆ. ಸಂಜೆ 6ಕ್ಕೆ ಕೆಂಪಾಂಬುದಿ ಕೆರೆಯಲ್ಲಿ ತೆಪ್ಪೋತ್ಸವ ನೆರವೇರಲಿದೆ.
ಪ್ಲಾಸ್ಟಿಕ್ ಚೀಲಕ್ಕೆ ನಿಷೇಧ:
ಬಿಬಿಎಂಪಿ ಕಡಲೆಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್ ವಿರುದ್ಧ ‘ಪರಿಷೆಗೆ ಬನ್ನಿ ಕೈಚೀಲ ತನ್ನಿ’ ಜನ ಜಾಗೃತಿ ಕಾರ್ಯವನ್ನು ಮಾಡುತ್ತಿದೆ. ಆ ನಿಟ್ಟಿನಲ್ಲಿ ಕಡಲೆಕಾಯಿ ವ್ಯಾಪಾರಿಗಳಿಗೆ ಮುಜರಾಯಿ ಇಲಾಖೆ ವತಿಯಿಂದ ಪೇಪರ್ ಕವರ್‌ಗಳನ್ನು ವಿತರಿಸಲಾಗುತ್ತಿದೆ.