ಬಳ್ಳಾರಿ: ಮಹಾಮಾನವತವಾದಿ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರ ಜನ್ಮದಿನೋತ್ಸವದ ಅಂಗವಾಗಿ ಸೋಮವಾರ ನಗರದ ಎಚ್.ಆರ್. ಗವಿಯಪ್ಪ ವೃತ್ತದ ಬಳಿಯಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಿಲ್ಲಾಡಳಿತದಿಂದ ಗೌರವ ನಮನ ಸಮರ್ಪಿಸಿ, ಶ್ರದ್ಧಾಭಕ್ತಿಯಿಂದ ಪುಷ್ಪನಮನ ಸಲ್ಲಿಸಲಾಯಿತು.

ಇದೇ ವೇಳೆ ಮಾತನಾಡಿದ ಮಹಾನಗರ ಪಾಲಿಕೆಯ ಮಹಾಪೌರ ಪಿ.ಗಾದೆಪ್ಪ, 12ನೇ ಶತಮಾನದಲ್ಲೇ ಸಮಾನತೆ, ಏಕತೆ ಮತ್ತು ಕಾಯಕವೇ ಕೈಲಾಸ ಎಂಬ ಉದಾತ್ತ ತತ್ವಗಳನ್ನು ಸಾರಿದ ಮಹಾನ್ ಚೇತನರು. ಬಸವಣ್ಣನವರ ಹಾದಿಯಲ್ಲಿ ಇಂದು ನಾವೆಲ್ಲರೂ ಸಾಗಬೇಕಿದೆ ಎಂದು ಕರೆ ನೀಡಿದರು.

ಭಾರತದ ಸಾಮಾಜಿಕ ಇತಿಹಾಸದಲ್ಲಿ ಮಹತ್ವದ ಪರಿವರ್ತನೆಗೆ ಕಾರಣರಾದ ಮಹಾಮಾನವತಾವಾದಿ ಬಸವೇಶ್ವರರು 12ನೇ ಶತಮಾನದ ಮಹಾನ್ ಚಿಂತಕರು, ಕವಿ ಮತ್ತು ಸಮಾಜ ಸಂಸ್ಕಾರಕರಾಗಿದ್ದರು. ಅವರು ಜನಸಾಮಾನ್ಯರ ಬದುಕಿನಲ್ಲಿ ಸಮಾನತೆ, ನ್ಯಾಯ ಮತ್ತು ಮಾನವೀಯತೆ ಎಂಬ ಮೌಲ್ಯಗಳನ್ನು ಬಿತ್ತಿದ ಮಹೋನ್ನತ ವ್ಯಕ್ತಿತ್ವ.

ಬಸವೇಶ್ವರರು ಜನ್ಮತಃ ವರ್ಣವ್ಯವಸ್ಥೆ ಮತ್ತು ಜಾತಿ ಅಸಮಾನತೆಯನ್ನು ತೀವ್ರವಾಗಿ ವಿರೋಧಿಸಿದರು. ಅವರ ಕಾಲದಲ್ಲಿ ಸಮಾಜವು ಜಾತಿ, ಅಸ್ಪೃಶ್ಯತೆ, ಅಂಧಶ್ರದ್ಧೆಗಳ ಅಡಿಯಲ್ಲಿ ಕುಸಿದುಕೊಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಬಸವಣ್ಣ ಅವರು ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ದುಡಿಮೆಗೇ ಗೌರವ ನೀಡಿದರು. ಪ್ರತಿಯೊಬ್ಬರು ತಮ್ಮ ಪರಿಶ್ರಮದಿಂದ ಜೀವನ ನಡೆಸಬೇಕು ಎಂದು ಸಾರಿದರು.

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಮಾತನಾಡಿ, ಬಸವಣ್ಣ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ಎಲ್ಲರನ್ನು ಒಂದೇ ಎಂಬ ಏಕತಾ ಭಾವಕ್ಕೆ ತಂದ ಪುಣ್ಯಾತ್ಮರಾಗಿದ್ದಾರೆ ಎಂದು ಹೇಳಿದರು.


ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್, ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಮುಖಂಡರಾದ ಸುರೇಖಾ ಮಲ್ಲನಗೌಡ ಇದ್ದರು.

ಯುವಕರಿಂದ ನಗರದಲ್ಲಿ ಬೆಳಿಗ್ಗೆ ಬೈಕ್ ರ್‍ಯಾಲಿ ನಡೆಯಿತು. ಬಸವ ಭವನದಿಂದ ಹೊರಟ ರ್‍ಯಾಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಸಂಜೆ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ವೇದಿಕೆ ಕಾರ್ಯಕ್ರಮ ನಿಮಿತ್ತ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಜರುಗಿತು.

ಶಾಸಕ ನಾರಾ ಭರತ್ ರೆಡ್ಡಿ ಮೆರವಣಿಗೆಗೆ ಚಾಲನೆ ನೀಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಉದ್ಯಮಿ ಸಾಹುಕಾರ ಸತೀಶ್ ಬಾಬು, ಮುಖಂಡ ಸಿದ್ದಮ್ಮನಹಳ್ಳಿ ತಿಮ್ಮನಗೌಡ, ಮೀನಳ್ಳಿ ಚಂದ್ರಶೇಖರಗೌಡ, ಚಾನಾಳ್ ಶೇಖರ್ ಇದ್ದರು.

ಇಲ್ಲಿನ ಮುನ್ಸಿಪಲ್ ಕಾಲೇಜು ಮೈದಾನದಿಂದ ಶುರುವಾದ ಮೆರವಣಿಗೆ ಗಡಗಿಚನ್ನಪ್ಪ ವೃತ್ತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ತಲುಪಿತು. ವೀರಶೈವ ಲಿಂಗಾಯತ ಸಮಾಜದ ನೂರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.