ಬಸವಣ್ಣ, ಕುವೆಂಪು ಮಹಾನ್ ಆದರ್ಶ ಪುರುಷರು: ಎಲ್.ಎನ್.ಮುಕುಂದರಾಜ್

| Published : Jan 10 2025, 12:49 AM IST

ಬಸವಣ್ಣ, ಕುವೆಂಪು ಮಹಾನ್ ಆದರ್ಶ ಪುರುಷರು: ಎಲ್.ಎನ್.ಮುಕುಂದರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣ ಮತ್ತು ಕುವೆಂಪು ಬೋಧಿಸಿದ ಮಾನವ ಧರ್ಮದಲ್ಲಿ ವಿಶ್ವದ ಶಾಂತಿ ಅಡಗಿದೆ. ಕುವೆಂಪು ಅವರು ವಿಶ್ವಮಾನವ ಪರಿಕಲ್ಪನೆಯ ಮೂಲಕ ವಿಶ್ವ ಧರ್ಮದ ಮಾರ್ಗವನ್ನು ತೋರಿಸಿದ್ದಾರೆ. ಬಸವಣ್ಣ ಮತ್ತು ಕುವೆಂಪು ಕೇವಲ ವಚನಕಾರ ಅಥವಾ ಕವಿಗಳು ಮಾತ್ರವಲ್ಲ. ಬದಲಾಗಿ ಸಮಾಜ ಸುಧಾರಣೆಗೆ ಚಿಂತಿಸಿದ ಮಹಾನ್ ದಾರ್ಶನಿಕರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕನ್ನಡದ ಮಣ್ಣಿನಲ್ಲಿ ಜನಿಸಿದ ಭಕ್ತಿ ಭಂಡಾರಿ ಬಸವಣ್ಣ ಮತ್ತು ರಾಷ್ಟ್ರಕವಿ ಕುವೆಂಪು ಇಬ್ಬರು ಸಮಾಜ ಸುಧಾರಣೆಗೆ ಚಿಂತಿಸಿದ ಮಹಾನ್ ಆದರ್ಶ ಪುರುಷರು ಎಂದು ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಭಿಪ್ರಾಯಪಟ್ಟರು.

ಪಟ್ಟಣದ ಗ್ರಾಮಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ತಾಲೂಕಿನ ಸಾಹಿತ್ಯ, ಸಾಂಸ್ಕೃತಿಕ, ನೌಕರ ಹಾಗೂ ನಾಗರೀಕ ಸಂಘಟನೆಗಳಿಗೆ ಸೇರಿದ ಸಮಾನ ಮನಸ್ಕರ ಒಕ್ಕೂಟ ಆಯೋಜಿಸಿದ್ದ ಮಹಾಕವಿ ಕುವೆಂಪು ಕರೆಗಳ ಪ್ರಸ್ತುತತೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣ ಮತ್ತು ಕುವೆಂಪು ಬೋಧಿಸಿದ ಮಾನವ ಧರ್ಮದಲ್ಲಿ ವಿಶ್ವದ ಶಾಂತಿ ಅಡಗಿದೆ. ಕುವೆಂಪು ಅವರು ವಿಶ್ವಮಾನವ ಪರಿಕಲ್ಪನೆಯ ಮೂಲಕ ವಿಶ್ವ ಧರ್ಮದ ಮಾರ್ಗವನ್ನು ತೋರಿಸಿದ್ದಾರೆ. ಬಸವಣ್ಣ ಮತ್ತು ಕುವೆಂಪು ಕೇವಲ ವಚನಕಾರ ಅಥವಾ ಕವಿಗಳು ಮಾತ್ರವಲ್ಲ. ಬದಲಾಗಿ ಸಮಾಜ ಸುಧಾರಣೆಗೆ ಚಿಂತಿಸಿದ ಮಹಾನ್ ದಾರ್ಶನಿಕರು ಎಂದರು.

ಧರ್ಮದ ಹೆಸರಿನಲ್ಲಿ ಬಹುಸಂಖ್ಯಾತ ಶೂದ್ರ ಸಮುದಾಯವನ್ನು ದಾಸ್ಯದ ಬದುಕಿಗೆ ಒಪ್ಪಿಕೊಳ್ಳುವಂತೆ ಮಾಡಲಾಗಿತ್ತು.

ಅತ್ಯಂತ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದ ನಮ್ಮ ಜನರ ಉದ್ದಾರಕ್ಕೆ ಬಸವಣ್ಣ ಚಿಂತಿಸಿದರೆ, ನಮ್ಮ ಪೂರ್ವಿಕರ ಎಲ್ಲಾ ಸಮಸ್ಯೆಗಳಿಗೂ ಕುವೆಂಪು ತಮ್ಮ ಚಿಂತನೆಗಳ ಮೂಲಕ ಮದ್ದು ನೀಡಿದ್ದಾರೆ ಎಂದರು.

ಯುವ ಸಮುದಾಯ ಬಸವಣ್ಣ ಮತ್ತು ಕುವೆಂಪು ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಶೋಷಣೆ ರಹಿತವಾದ ಸಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು. ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎನ್ನುವ ಕುವೆಂಪು ಅವರ ಸಂದೇಶ ಹೊಸ ಬಾಳಿನ ದಿವ್ಯ ಮಂತ್ರವಾಗಬೇಕು ಎಂದರು.

ಕುವೆಂಪು ಕರೆಗಳ ಪ್ರಸ್ತುತತೆ ಕುರಿತು ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಚ್.ಡಿ. ಉಮಾಶಂಕರ್ ವಿಚಾರ ಮಂಡಿಸಿದರು. ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಕುವೆಂಪು ಸಾಹಿತ್ಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್. ಪೂರ್ಣಚಂದ್ರ ತೇಜಸ್ವಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉದಯರವಿ ಟ್ರಸ್ಟಿನ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆನಂದಕುಮಾರ್, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಎಲ್.ಮಂಜುನಾಥ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು, ಅತ್ತಿಗುಪ್ಪೆ ಸಾಹಿತ್ಯ ಬಳಗದ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಕತ್ತರಘಟ್ಟ ವಾಸು, ಕಾರ್ಯದರ್ಶಿ ಶೀಳನೆರೆ ಶಿವಕುಮಾರ್, ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ರಾಜೇನಹಳ್ಳಿ ಪದ್ಮೇಶ್, ಶಿಕ್ಷಕ ರಂಗಸ್ವಾಮಿ ಇದ್ದರು.