ಕಡೂರು ಪಟ್ಟಣದ ತಾಪಂನಲ್ಲಿ ನಡೆದ ಬಸವ ಜಯಂತಿ ಉದ್ಘಾಟಿಸಿ
ಕನ್ನಡಪ್ರಭ ವಾರ್ತೆ, ಕಡೂರುಅನುಭವ ಮಂಟಪದ ಮೂಲಕ ಕ್ರಾಂತಿ ಮಾಡಿ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ ಬಸವಣ್ಣ ವಿಶ್ವಗುರುವಾಗಿದ್ದಾರೆ ಎಂದು ಶಾಸಕ ಕೆ.ಎಸ್. ಆನಂದ್ ಬಣ್ಣಸಿದರು.
ಸೋಮವಾರ ಪಟ್ಟಣದ ತಾಪಂ ನಲ್ಲಿ ತಾಲೂಕು ಆಡಳಿತದಿಂದ ನಡೆದ ಬಸವ ಜಯಂತಿ ಉದ್ಘಾಟಿಸಿ ಮಾತನಾಡಿ, ಬಸವಣ್ಣ ದಾರ್ಶನಿಕರು, ಸಮಾಜ ಸುಧಾರಕರಾಗಿ ಅಸ್ಪೃಶ್ಯತೆ ನಿವಾರಿಸಲು ಸಮ ಸಮಾಜವನ್ನು ಪ್ರತಿಪಾದಿಸಿದರು. ಅಂದಿನ ಸಮಾಜದಲ್ಲಿದ್ದ ಮೇಲು, ಕೀಳು ತೊಡೆದು ಹಾಕಲು ಶೋಷಿತ ಮತ್ತು ಮೇಲ್ವರ್ಗಗಳ ನಡುವೆ ಸಮಾನತೆ ಮೂಡಿಸಲು ಹೋರಾಟ ಮಾಡಿದರು.ಮೌಢ್ಯಗಳನ್ನು ತೊಡೆದು ಹಾಕಲು ಶ್ರಮಿಸಿದರು. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಆದರ್ಶವೇ ಬಸವಣ್ಣ ಎಂದರು. ಬಸವ ಜಯಂತಿಯಂದೇ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದರು ಎಂದು ಸ್ಮರಿಸಿದ ಅವರು ಸರ್ಕಾರಿ ಕಚೇರಿಗಳಲ್ಲಿ ಪೋಟೋ ಹಾಕಬೇಕೆಂದು ಆದೇಶಿಸಿದ್ದರು. ಸರ್ಕಾರಿ ರಜೆಯಂದೇ ಜಯಂತಿ ಆಚರಣೆ ಮಾಡುವಂತಾಗಬೇಕು. ನಾನು ಇದನ್ನು ಸಿದ್ದರಾಮಯ್ಯನವರ ಗಮನಕ್ಕೆ ತರುತ್ತೇನೆ. ವೀರಶೈವ ಸಮಾಜದ ಭವನ ನಿರ್ಮಾಣಕ್ಕೆ ಜಾಗ ನೋಡುವುದಾಗಿ ಭರವಸೆ ನೀಡಿದರು.
ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಮಾತನಾಡಿ, ಬಸವಣ್ಣ ವಿಶ್ವಗುರು. ತಮ್ಮ ವಚನ ಸಾಹಿತ್ಯದಿಂದ ಸಮಾಜದಲ್ಲಿ ಬದಲಾವಣೆ ತರಲು ಕಾಯಕದ ಮೂಲಕ ಸೇವೆ ಸಲ್ಲಿಸಿದರು. ದಯೆಯೇ ಧರ್ಮದ ಮೂಲ ಎಂದರು. ಸಾಮಾಜಿಕ ಅಸಮಾನತೆ ತೊಲಗಿಸಲು ನಮ್ಮ ನಡೆ ನುಡಿ, ಅಂತರಂಗ ಶುದ್ದಿ ಬಹಿರಂಗ ಶುದ್ದಿ ಎಂಬ ಸೂಕ್ತಿ, ಮಾನವೀಯತೆ, ದಯೆ ಮತ್ತು ಪ್ರೀತಿಯನ್ನು ಭೋಧಿಸಿದವರು ಬಸವಣ್ಣ ಎಂದರು.
ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಾಣೇಹಳ್ಳಿ ರೇಣುಕಾರಾಧ್ಯ ಮಾತನಾಡಿ, ಬಸವಣ್ಣ ಸಾಂಸ್ಕೃತಿಕ ರಾಯಭಾರಿ. ವಿವಿಧ ಸಮುದಾಯಗಳ ಲಕ್ಷಾಂತರ ಶರಣರಿಗೆ ಅನುಭವ ಮಂಟಪದಲ್ಲಿ ತಮ್ಮ ಭೋಧನೆಗಳ ಮೂಲಕ ಸಮಾಜದಲ್ಲಿದ್ದ ಮೌಢ್ಯತೆ ತೊಡೆದು ಹಾಕಲು ಶ್ರಮಿಸಿದರು. ಕಡೂರು ಪಟ್ಟಣದಲ್ಲಿ ತಾಲೂಕು ವೀರಶೈವ ಸಮಾಜದಿಂದ ನಡೆಯುತ್ತಿದ್ದ ವಸತಿ ಶಾಲೆ ಮುಂದುವರಿಸಲು ನಿವೇಶನ ನೀಡುವಂತೆ ಮನವಿ ಮಾಡಿದರು.
ಸಾಹಿತಿ ಸಿಂಗಟಗೆರೆ ಸಿದ್ದಪ್ಪ ಉಪನ್ಯಾಸ ನೀಡಿದರು. ರೆಡ್ಡಿ ವೀರಶೈವ ಸಮಾಜದ ಅಧ್ಯಕ್ಷ ಕಾಶೀನಾಥ್, ಜಿ.ಅಶೋಕ್, ಟಿ.ಆರ್.ರೇಣುಕಪ್ಪ, ಜಗದೀಶ್, ಜಿ.ಎಂ. ಯತೀಶ್,ಮ.ಹಾ .ಪ್ರಕಾಶ್ ಮೂರ್ತಿ, ರಾಜಣ್ಣ, ರಾಜಶೇಖರಯ್ಯ, ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.-- ಬಾಕ್ಸ್ -- ಬಸವಣ್ಣನವರನ್ನು ಆರಾಧಿಸಬೇಕಾದವರೇ ಅವರ ಬಗ್ಗೆ ಕಟುವಾಗಿ ಟೀಕೆಗಳನ್ನು ಮಾಡುತ್ತಿರುವುದು ಬೇಸರದ ಸಂಗತಿ. ಈ ನಾಡಿನ ಪ್ರಮುಖ ರಾಜಕಾರಣಿ ಬಸವಣ್ಣ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಶಾಸಕ ಆನಂದ್, ಇದನ್ನು ಖಂಡಿಸುತ್ತೇನೆ. ಅಲ್ಲದೆ ಸದನದಲ್ಲಿ ಕ್ಷಮೆ ಕೇಳುವಂತೆ ಒತ್ತಾಯ ಮಾಡುತ್ತೇನೆ ಮತ್ತು ಸರ್ಕಾರಿ ಕರ್ತವ್ಯದ ದಿನದಂದೇ ಜಯಂತಿಗಳ ಆಚರಣೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದರು. 10ಕೆಕೆಡಿಯು1. ಕಡೂರಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಬಸವ ಜಯಂತಿಯನ್ನು ಶಾಸಕ ಕೆ.ಎಸ್. ಆನಂದ್ ಉಧ್ಘಾಟಿಸಿದರು.