ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬಸವಣ್ಣನವರ ದಾಸೋಹ ಮತ್ತು ಕಾಯಕದ ಸಿದ್ಧಾಂತಗಳೇ ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಮೂಲ ಪ್ರೇರಣೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಸೋಮವಾರ ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯನವರು ಬಸವಣ್ಣ ಜಯಂತಿಯಂದೇ ಪ್ರಮಾಣ ವಚನ ಸ್ವೀಕರಿಸಿದರು. ಇದು ಕಾಕತಾಳೀಯವಲ್ಲ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ, ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಕಡ್ಡಾಯಗೊಳಿಸುವ ಮೂಲಕ ಬಸವ ತತ್ವಕ್ಕೆ ಗೌರವ ನೀಡಿದ್ದಾರೆ. ಸರ್ಕಾರದ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮೀ ಯುವನಿಧಿ ಮತ್ತು ಗೃಹಜ್ಯೋತಿ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಸಿವು ನೀಗಿಸುವ ಮತ್ತು ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿಯುವ ಬಸವಣ್ಣನವರ ಆಶಯದ ಮುಂದುವರಿದ ಭಾಗವಾಗಿದೆ ಎಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದರು.ಸಮಾಜದ ಒಗ್ಗಟ್ಟಿನ ಶಕ್ತಿಯಿಂದಾಗಿ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮುಂದಿನ ವರ್ಷದ ಜಯಂತಿಯನ್ನು ದೊಡ್ಡಮಟ್ಟದಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಚರಿಸಬೇಕು. ನಗರದಲ್ಲಿ ಬಸವಣ್ಣನವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸುವ ಸಂಕಲ್ಪ ಮಾಡಬೇಕು ಎಂದರು.
ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಮಾತನಾಡಿ, ಜಗತ್ತಿನಲ್ಲಿ ಸರ್ವಾಧಿಕಾರಿಗಳು ಮತ್ತು ದಾರ್ಶನಿಕರು ಎಂಬ ಎರಡು ವರ್ಗದ ಜನರಿದ್ದಾರೆ. ಸರ್ವಾಧಿಕಾರಿಗಳು ತಮ್ಮ ಹಠಮಾರಿತನದಿಂದ ಜಗತ್ತಿಗೆ ತೊಂದರೆ ನೀಡಿದರೆ, ದಾರ್ಶನಿಕರು ಸಮಾಜಕ್ಕೆ ಸರಿಯಾದ ದಿಕ್ಸೂಚಿ ನೀಡುತ್ತಾರೆ. ಅಂತಹ ಶ್ರೇಷ್ಠ ದಾರ್ಶನಿಕರಲ್ಲಿ ಬಸವಣ್ಣನವರು ಅಗ್ರಗಣ್ಯರು ಎಂದರು.
ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಗಳ ಮೇಲೆ ಬಸವಣ್ಣನವರ ವಿಚಾರಧಾರೆಗಳ ಪ್ರಭಾವವಿದೆ. ಅಮೆರಿಕಾದಲ್ಲಿ ವಿವೇಕಾನಂದರು ನೀಡಿದ ಸೋದರತ್ವದ ಸಂದೇಶ ಮತ್ತು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿದ ಸಮಾನತೆಯ ಆಶಯಗಳು ಬಸವಣ್ಣನವರ ‘ಇವನಾರವ ಇವನಾರವ ಎನ್ನದಿರಯ್ಯ’ ಎಂಬ ತತ್ವದ ಪ್ರತಿರೂಪಗಳಾಗಿವೆ ಎಂದರು.
ಕರ್ನಾಟಕ ರಾಜ್ಯ ಸಫಾಯ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಮಾತನಾಡಿ, ಬಸವಣ್ಣನವರು ಸಾರಿದ ‘ಕಾಯಕವೇ ಕೈಲಾಸ’ ತತ್ವವನ್ನು ಅಳವಡಿಸಿಕೊಂಡಿರುವ ಜಪಾನ್, ಚೀನಾ ಮತ್ತು ಅಮೆರಿಕದಂತಹ ರಾಷ್ಟ್ರಗಳು ಇಂದು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿವೆ. ಬಸವಣ್ಣನವರ ಪ್ರತಿಯೊಂದು ವಚನವೂ ಅತ್ಯಂತ ಅರ್ಥಪೂರ್ಣವಾಗಿದ್ದು, ಅವರ ಜೀವನವೇ ಒಂದು ದೊಡ್ಡ ಸಂದೇಶವಾಗಿದೆ. ಇಂದಿಗೂ ಸಮಾಜದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡಲು ಜನರು ಹಿಂಜರಿಯುವ ಕಾಲದಲ್ಲಿದ್ದೇವೆ, ಆದರೆ 12ನೇ ಶತಮಾನದಲ್ಲೇ ಅತ್ಯಂತ ಧೈರ್ಯದಿಂದ ಜಾತಿ ಪದ್ಧತಿಯ ವಿರುದ್ಧ ಹೋರಾಡಿದ ಕ್ರಾಂತಿಕಾರಿ ಬಸವಣ್ಣನವರನ್ನು ಕೇವಲ ಜಯಂತಿ ಅಥವಾ ಭಾವಚಿತ್ರಕ್ಕೆ ಸೀಮಿತಗೊಳಿಸಬಾರದು. ಅವರ ವಚನಗಳಲ್ಲಿನ ಸಾರವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಆಗ ಮಾತ್ರ ಸಮಾಜ, ರಾಜ್ಯ ಮತ್ತು ದೇಶದ ಪ್ರಗತಿ ಸಾಧ್ಯ ಎಂದು ಕರೆ ನೀಡಿದರು.ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಬಸವಣ್ಣನವರನ್ನು ಕೇವಲ ಮಂದಿರಗಳಲ್ಲಿ ಪೂಜಿಸದೇ, ಅವರ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಮನದಲ್ಲಿ ಮತ್ತು ಮನೆಗಳಲ್ಲಿ ಆರಾಧಿಸಿದಾಗ ಮಾತ್ರ ನಿಜವಾದ ಬಸವ ಜಯಂತಿ ಸಾರ್ಥಕವಾಗುತ್ತದೆ ಎಂದರು.
ಜಗತ್ತಿಗೆ ಬಸವಣ್ಣನವರು ನೀಡಿದ ಅತ್ಯಂತ ದೊಡ್ಡ ಕೊಡುಗೆಗಳೆಂದರೆ ಅದು ‘ಕಾಯಕ'''' ಮತ್ತು ‘ದಾಸೋಹ''''. ‘ಕಾಯಕವೇ ಕೈಲಾಸ’ ಎಂಬ ತತ್ವದಡಿ ಪ್ರತಿಯೊಬ್ಬರೂ ಶ್ರಮಜೀವಿಗಳಾಗಬೇಕು. ಕಾಯಕದ ಮೂಲಕ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಅದರ ಮುಂದುವರಿದ ಭಾಗವಾಗಿ ನಮ್ಮ ದುಡಿಮೆಯ ಒಂದು ಪಾಲನ್ನು ಸಮಾಜಕ್ಕೆ ಅರ್ಪಿಸುವ ‘ದಾಸೋಹ'''' ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಹ ಒಂದು ರೀತಿಯಲ್ಲಿ ದಾಸೋಹದ ಪರಿಕಲ್ಪನೆಯನ್ನೇ ಹೊಂದಿವೆ ಎಂದರು.ಕಾಯಕ ಶರಣ ಪ್ರಶಸ್ತಿ ವಿಜೇತ ಶರಣ ಸಾಹಿತಿ ಪ್ರೊ.ಎಚ್.ಲಿಂಗಪ್ಪ ಬಸವೇಶ್ವರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್,ಉಪವಿಭಾಗಧಿಕಾರಿ ಡಾ.ಕೆ.ಜೆ.ಕಾಂತರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಹೆಚ್.ತಿಪ್ಪೇಸ್ವಾಮಿ, ಕಾರ್ಯದರ್ಶಿ ಪಿ.ವಿರೇಂದ್ರ ಕುಮಾರ್, ಅಖಿಲ ಭಾರತ ವೀರಶೈವ ಸಮಾಜದ ಮಹಡಿ ಶಿವಮೂರ್ತಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು. ಡಾ.ನವೀನ್ ಮಸ್ಕಲ್ ನಿರೂಪಿಸಿದರು. ಚಿತ್ರದುರ್ಗ ತಾಲ್ಲೂಕು ಆಯಿತೋಳು ಗ್ರಾಮದ ಜಗದೀಶ್ ಮತ್ತು ತಂಡದವರು ನಾಡಗೀತೆ ಹಾಡುವುದರೊಂದಿಗೆ ವಚನ ಗಾಯನ ಪ್ರಸ್ತುತ ಪಡಿಸಿದರು.