ಗಂಗಾವತಿ: ಬಸವಣ್ಣನವರ ಆದರ್ಶತತ್ವ ಇಂದಿನ ದಿನಮಾನಗಳಲ್ಲಿ ಪ್ರಸ್ತುತವಾಗಿದ್ದು, ಎಲ್ಲರೂ ಪರಿಪಾಲನೆ ಮಾಡಬೇಕೆಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ಶ್ರೀಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ಲಿಂಗಾಯತ ಧರ್ಮದ ಮಹಾದಂಡ ನಾಯಕರ ಸ್ಮರಣೋತ್ಸವ ಹಾಗೂ ರಾಷ್ಟ್ರೀಯ ಬಸವದಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಜಾತಿ ವ್ಯವಸ್ಥೆಯಿಂದ ಸಮಾಜ ಹಾಳಾಗುತ್ತವೆ.ಕಾರಣ ಬಸವಣ್ಣನವರು ಸರ್ವಜಾತಿಯವರನ್ನು ಒಗ್ಗೂಡಿಸುವ ಕಾರ್ಯ ಮಾಡಿದ ವಿಶ್ವ ಗುರು ಎಂದರು.

ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಟಟಗಳಿಗೆ ಬಲಿಯಾಗುತ್ತಿದ್ದಾರೆ. ರಾಷ್ಟ್ರೀಯ ಬಸವ ದಳದವರು ಸಮಾವೇಶ ಹಮ್ಮಿಕೊಂಡಿರುವದು ಪ್ರಶಂಸನೀಯವಾಗಿದೆ ಎಂದ ಅವರು, ಸಮಾವೇಶ ಒಗ್ಗೂಡಿಸುವ ಕಾರ್ಯವಾಗಬೇಕಾಗಿದೆ. 12ನೇ ಶತಮಾನದಲ್ಲಿ ಸಮಾನತೆಯ ಸಂದೇಶ ನೀಡಿದ ಜಗಜ್ಯೋತಿ ಬಸವೇಶ್ವರ ವಚನ ಸಾಹಿತ್ಯ ಸರ್ವಕಾಲಿಕ ಮಾನ್ಯತೆ ಪಡೆದಿವೆ ಎಂದರು.

ಶರಣರು ನೀಡಿದ ಸಂದೇಶ ನೆಮ್ಮದಿ ಬದುಕಿಗೆ ಪೂರಕವಾಗಿದ್ದು, ಮಹಿಳೆಯರಿಗೂ ಸಮಾನತೆ ಹಕ್ಕನ್ನು ನೀಡಿದ್ದಾರೆ. ಸರಳ ಸಂದೇಶ ಮತ್ತು ಸಮಾನತೆಯ ಬಸವ ತತ್ವ ಬಗ್ಗೆ ಚರ್ಚೆಯಾಗುತ್ತಿವೆ ಹೊರತು, ಪೂರ್ಣ ಪ್ರಮಾಣದಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳಲಾಗುತ್ತಿಲ್ಲ. ವಚನ ಅಧ್ಯಯನ ದೈನಂದಿನ ಬದುಕಿನಲ್ಲೊಂದಾಗಬೇಕಿದೆ ಎಂದರು.


ಬಸವ ಕೇಂದ್ರದ ಅಧ್ಯಕ್ಷ ಕೆ.ಬಸವರಾಜ ಪ್ರಾಸ್ತಾವಿಕ ಮಾತನಾಡಿ, 38 ವರ್ಷಗಳ ನಂತರ ಭತ್ತದ ನಾಡಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದ್ದು, ಸರ್ವ ಸಮುದಾಯದವರು ಸಹಕಾರ ನೀಡಿದ್ದಾರೆ. ಶ್ರೇಷ್ಟರ ಅನುಭಾವಗಳು ಜೀವನಕ್ಕೆ ದಿಕ್ಸೂಚಿಯಾಗಲಿವೆ ಎಂದರು.

ಕುಂಬಳಗೊಂಡು ಬಸವ ಗಂಗೋತ್ರಿ ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ, ಬೀದರ್ ಬಸವ ಮಂಟಪದ ಸತ್ಯಾದೇವಿ, ಮನಗುಂಡಿ ನಿಸರ್ಗ ಚಿಕಿತ್ಸಕ ಬಸವಾನಂದ ಸ್ವಾಮೀಜಿ, ಬಸವಕಲ್ಯಾಣದ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಸಿರುಗುಪ್ಪದ ಬಸವರಾಜ ವೆಂಕಟಾಪುರ ಸಾನ್ನಿಧ್ಯ ವಹಿಸಿದ್ದರು.

ಮಾಜಿ ಸಂಸದ ಎಚ್.ಜಿ. ರಾಮುಲು, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಸಿ.ಎಚ್. ನಾರಿನಾಳ್, ಹೇಮಯ್ಯಸ್ವಾಮಿ, ಬಸವಕುಮಾರ ಪಾಟೀಲ್, ಗಾಳಿ ರುದ್ರಪ್ಪ, ಡಿ.ಜಿ. ಮಠದ, ಸಮಿತಿ ಪದಾಧಿಕಾರಿ ದಿಲೀಪ್ ವಂದಾಲ್, ವೀರೇಶರೆಡ್ಡಿ, ಎ.ಕೆ. ಮಹೇಶಕುಮಾರ ಇತರರಿದ್ದರು.

ಮೆರವಣಿಗೆ: ನಗರದ ಹಿರೇಂಜಕಲ್ ನ ಬಸವವೇಶ್ವ ವೃತ್ತದಿಂದ ಸಿಬಿಎಸ್ ಕಲ್ಯಾಣ ಮಂಟಪದವರಿಗೂ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಜರುಗಿತು.