ಗದಗ: ಜಗಜ್ಯೋತಿ ಬಸವೇಶ್ವರರು ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಅವರು ವಿಶ್ವಮಾನವ. ಅವರ ಕಾಯಕವೇ ಕೈಲಾಸ ಮತ್ತು ದಾಸೋಹ ತತ್ವ ಆಧುನಿಕ ಯುಗಕ್ಕೂ ಪ್ರಸ್ತುತವಾಗಿವೆ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.

ಸೋಮವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನವರು 12ನೇ ಶತಮಾನದಲ್ಲಿಯೇ ಲಿಂಗ ಸಮಾನತೆ, ಜಾತಿ ಪದ್ಧತಿ ನಿರ್ಮೂಲನೆ ಮತ್ತು ಶೋಷಣೆ ಮುಕ್ತ ಸಮಾಜದ ಕನಸು ಕಂಡವರು ಬಸವಣ್ಣನವರು. ಅನುಭವ ಮಂಟಪದ ಮೂಲಕ ಅವರು ಪ್ರಜಾಪ್ರಭುತ್ವದ ಅಡಿಪಾಯ ಹಾಕಿದರು.

ನಾವು ಕೇವಲ ಅವರ ಫೋಟೋಗಳಿಗೆ ಪೂಜೆ ಮಾಡಿದರೆ ಸಾಲದು. ಅವರ ವಚನಗಳಲ್ಲಿನ ಸಾರವನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಪೀಳಿಗೆಗೆ ಶರಣರ ವಿಚಾರಧಾರೆಗಳನ್ನು ತಲುಪಿಸುವ ಅಗತ್ಯವಿದೆ. ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆ ನೆಲೆಸಬೇಕಾದರೆ ಬಸವ ಪಥವೇ ದಾರಿದೀಪವಾಗಿದೆ ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಕಾಯಕವೇ ಕೈಲಾಸ ಎಂಬ ಮಂತ್ರದೊಂದಿಗೆ ಸಮಾಜದಲ್ಲಿ ಸಮಾನತೆ ಮತ್ತು ಶ್ರಮದ ಗೌರವವನ್ನು ಎತ್ತಿ ಹಿಡಿದ ಜಗಜ್ಯೋತಿ ಬಸವಣ್ಣನವರ ವಿಚಾರಧಾರೆಗಳು ಕೇವಲ ಒಂದು ಕಾಲಕ್ಕೆ ಸೀಮಿತವಾಗಿಲ್ಲ. ಅವು ಇಂದಿಗೂ ಪ್ರಸ್ತುತ ಎಂದರು.


ಉಪನ್ಯಾಸಕ ಸೋಮಶೇಖರ ಕನಕಾಚಲ ಮಾತನಾಡಿ, ಬಸವೇಶ್ವರರು ಕೇವಲ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತರಲ್ಲ. ಅವರು ಇಡೀ ಮಾನವಕುಲದ ಆಸ್ತಿ. ಅವರ ವಚನಗಳ ಸಾರ ಮತ್ತು ತತ್ವಗಳು ಇಂದಿನ ಆಧುನಿಕ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ ಎಂದರು.

ಯುವಪೀಳಿಗೆಯು ಬಸವಣ್ಣನವರ ವಚನಗಳನ್ನು ಕೇವಲ ಓದುವುದಲ್ಲದೆ, ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ ವ್ಯವಸ್ಥೆ, ಅಸಮಾನತೆ ತೊಲಗಿ ಸುಂದರ ಸಮಾಜ ನಿರ್ಮಾಣವಾಗಬೇಕಾದರೆ ಬಸವ ತತ್ವವೇ ದಾರಿದೀಪ ಎಂದರು.

ಪ್ರಸಾರ ಸುತಾರ ಹಾಗೂ ಗುರುನಾಥ ಸುಂದರ ವಚನ ಗಾಯನ ಪ್ರಸ್ತುತ ಪಡಿಸಿದರು. ವೀರಣ್ಣ ಅಂಗಡಿ ಮತ್ತು ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ವಿ. ಬಳ್ಳಾರಿ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ ನಿರೂಪಿಸಿದರು.

ಡಾ. ಗಿರಿಜಾ ಹಸವಿ ಅವರ ಬರೆದ ಬಸವ ಚೇತನ ಎಂಬ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಎಸ್.ಎನ್. ಬಳ್ಳಾರಿ, ವಿನಾಯಕ ಮಾನ್ವೆ ಸೇರಿದಂತೆ ಸಮಾಜದ ಗಣ್ಯರು, ಮುಖಂಡರು, ಎಲ್ಲ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.ಮೆರವಣಿಗೆ: ತೋಂಟದಾರ್ಯ ಸಂಸ್ಥಾನ ಮಠದ ಆವರಣದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಪ್ರತಿಮೆಗೆ ಗೌರವ ಮಾಲಾರ್ಪಣೆಯೊಂದಿಗೆ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್. ಚಾಲನೆ ನೀಡಿದರು. ಕರ್ನಾಟಕದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ ಜಯಂತಿ ಮೆರವಣಿಗೆಯು ತೋಂಟದಾರ್ಯ ಸಂಸ್ಥಾನ ಮಠದಿಂದ ಪ್ರಾರಂಭವಾಗಿ ಮಹೇಂದ್ರಕರ ಸರ್ಕಲ್, ಟಾಂಗ ಕೂಟ, ಬಸವೇಶ್ವರ ವೃತ್ತ, ಕೆ.ಎಚ್. ಪಾಟೀಲ್ ವೃತ್ತ, ಭೂಮರಡ್ಡಿ ಸರ್ಕಲ್, ರೋಟರಿ ಸರ್ಕಲ್ ಮಾರ್ಗವಾಗಿ ತೋಂಟದಾರ್ಯ ಸಂಸ್ಥಾನ ಮಠದ ಆವರಣದ ವರೆಗೆ ಮೆರವಣಿಗೆ ಬಂದು ತಲುಪಿತು.