ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
12ನೇ ಶತಮಾನದಲ್ಲಿ ಕ್ರಾಂತಿಯೋಗಿ ಶ್ರೀ ಜಗಜ್ಯೋತಿ ಬಸವಣ್ಣನವರು ಪ್ರತಿಪಾದಿಸಿದ ಜಾತಿ ರಹಿತ - ವರ್ಗ ರಹಿತ ಸಮಾಜ, ಕಾಯಕದ ಮಹತ್ವ ಇಂದಿನ ಕಾಲಕ್ಕೂ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದರು.ಅವರು ಶನಿವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದೊಂದಿಗೆ ವಿಶ್ವಗುರು ಬಸವಣ್ಣ ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂಬ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.ಸಮಾಜದಲ್ಲಿ ಮಹಿಳಾ ಅಸಮಾನತೆ ಹಾಗೂ ಮೂಢನಂಬಿಕೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ ಬಸವಣ್ಣ, ಸರ್ವಜನ ಸಮಭಾವದ ನಲೆಯಲ್ಲಿ ಕಲ್ಯಾಣ ಸಮಾಜ ಕಟ್ಟವ ನೀತಿಯನ್ನು ಬೋಧಿಸಿದರು. ನಮ್ಮ ದೇಶದ ಸಂವಿಧಾನದ ಆಶಯಗಳಿಗೆ ಅವರ ಚಿಂತನೆಗಳು ಸ್ಫೂರ್ತಿ ಒದಗಿಸಿದ ಮೇರೆಗೆ ಸರ್ಕಾರ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದರು.ಇದೇ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ಶ್ರೀ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.
ಬನ್ನಂಜೆ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರಿಂದ ಸಂವಿಧಾನ ಜಾಗೃತಿ ಜಾಥಾ ಕುರಿತು ನೃತ್ಯ ಪ್ರದರ್ಶಿಸಿದರು.ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಾಜು ಮೊಗವೀರ, ಬಸವ ಸಮಿತಿಯ ಜಿಲ್ಲಾಧ್ಯಕ್ಷ ಡಾ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ, ನಿರೂಪಿಸಿ ವಂದಿಸಿದರು.