ಸಕಲ ಜೀವಿಗೂ ಲೇಸು ಬಯಸಿದ್ದ ಬಸವಣ್ಣ: ಸಾಹಿತಿ ಬಳಬಟ್ಟಿ

| Published : Jul 10 2024, 12:38 AM IST

ಸಾರಾಂಶ

ಬೀದರ್‌ನ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆದ ಬಸವೇಶ್ವರರು ಪ್ರತಿಪಾದಿಸಿದ ಜೀವನ ಮೌಲ್ಯಗಳು ಕುರಿತ ಕವಿಗೋಷ್ಠಿಯನ್ನು ಸಾಹಿತಿ ರಜಿಯಾ ಬಳಬಟ್ಟಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೀದರ್:

ವಿಶ್ವಗುರು ಬಸವಣ್ಣನವರು ಸಕಲ ಜೀವಿಗೂ ಲೇಸು ಬಯಸಿದ್ದರು ಎಂದು ಡಾ. ಜಯದೇವಿ ತಾಯಿ ಲಿಗಾಡೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಹಿತಿ ರಜಿಯಾ ಬಳಬಟ್ಟಿ ನುಡಿದರು.

ವಚನಾಮೃತ ಕನ್ನಡ ಸಂಘದಿಂದ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಸಮೀಪದ ಮಹಾಲಕ್ಷ್ಮಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಬಸವೇಶ್ವರರು ಪ್ರತಿಪಾದಿಸಿದ ಜೀವನ ಮೌಲ್ಯಗಳು ಕುರಿತ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣ ಮಹಾ ಮಾನವತಾವಾದಿ ಹಾಗೂ ಸಮಾನತೆಯ ತತ್ವ ಪ್ರತಿಪಾದಿಸಿದ ಅವರು ಮನುಕುಲದ ಕಲ್ಯಾಣಕ್ಕೆ ಅವಿರತ ಶ್ರಮಿಸಿದ್ದರು ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಬಸವಣ್ಣನವರ ವಚನಗಳು ಜೀವನ ಸೂತ್ರವನ್ನು ಒಳಗೊಂಡಿವೆ. ಜಗತ್ತು ಕಟ್ಟುವ, ಜನರ ಜ್ಞಾನದ ಹಸಿವು ನೀಗಿಸುವಂಥ ಸಾಹಿತ್ಯ ರಚನೆ ಆಗಬೇಕಿದೆ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಡಾ.ಸೂರ್ಯಕಾಂತ ಚಿದ್ರೆ ಮಾತನಾಡಿ, ಬಸವಣ್ಣನವರ ವಚನಗಳನ್ನು ಅನುಸರಿಸಿದ್ದಲ್ಲಿ ಸುಂದರ ಬದುಕು ಕಟ್ಟಿಕೊಳ್ಳಬಹುದು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಮಾತನಾಡಿದರು. ಈ ವೇಳೆ ಸೂರ್ಯಕಾಂತ ಹೊಡಮನಿ, ವಿದ್ಯಾವತಿ ಬಲ್ಲೂರ, ಪಾರ್ವತಿ ಸೋನಾರೆ, ಸುನಿತಾ ದಾಡಗೆ, ಜಗದೇವಿ ಮೈನಾಳೆ, ರೇಣುಕಾ ಎನ್.ಬಿ, ಸ್ವರೂಪರಾಣಿ ನಾಗೂರೆ, ರೇಣುಕಾ ಮಳ್ಳಿ, ಶ್ರೇಯಾ ಮಹೇಂದ್ರಕರ್ ಹಾಗೂ ಶ್ರೀದೇವಿ ಸೋಮಶೆಟ್ಟಿ ಸ್ವರಚಿತ ಕವನ ವಾಚಿಸಿದರು. ಶಿಕ್ಷಕ ಶ್ರೀಕಾಂತ ಪಾಟೀಲ ಇದ್ದರು.